ಧರ್ಮಸ್ಥಳದಲ್ಲಿ ಅತ್ಯಾಚಾರ, ಕೊಲೆ ಹತ್ಯೆಗಳು: ಎಸ್‌ ಐಟಿ ರಚನೆಗೆ ನಿವೃತ್ತ ನ್ಯಾ.ಗೋಪಾಲಗೌಡ ಆಗ್ರಹ

Most read

ಬೆಂಗಳೂರು: ಧರ್ಮಸ್ಥಳ ಕ್ಷೇತ್ರದಲ್ಲಿ ನಡೆದಿರುವ ನೂರಾರು ಅತ್ಯಾಚಾರ, ಕೊಲೆ ಮತ್ತು ಹೆಣಗಳನ್ನು ಹೂಳಿರುವ ಆರೋಪಗಳನ್ನು ಕುರಿತು ತನಿಖೆ ನಡೆಸಲು ಸುಪ್ರೀಂ ಕೋರ್ಟ್‌ನ ಹಾಲಿ ಅಥವಾ ನಿವೃತ್ತ ನ್ಯಾಯಮೂರ್ತಿಯ ಮೇಲ್ವಿಚಾರಣೆಯಲ್ಲಿ ವಿಶೇಷ ತನಿಖಾ ತಂಡ (ಎಸ್‌ ಐಟಿ) ರಚಿಸಬೇಕು ಎಂದು ನಿವೃತ್ತ ನ್ಯಾಯಮೂರ್ತಿ ಗೋಪಾಲಗೌಡ ಅವರು ರಾಜ್ಯ ಸರ್ಕಾರವನ್ನು ಒತ್ತಾಯಸಿದ್ದಾರೆ. ಜತೆಗೆ ಪ್ರಕರಣದಲ್ಲಿ ಸಾಕ್ಷಿ ಫಿರ್ಯಾದಿಗೆ ಈಗಿನಿಂದಲೇ ಭದ್ರತೆ ಒದಗಿಸಬೇಕು ಎಂದೂ ಆಗ್ರಹಪಡಿಸಿದ್ದಾರೆ.

ಬೆಂಗಳೂರಿನಲ್ಲಿ ಇಂದು ನಿವೃತ್ತ ನ್ಯಾಯಮೂರ್ತಿ ಗೋಪಾಲಗೌಡ ಮತ್ತು ವಕೀಲ ಸಿ.ಎಸ್‌.ದ್ವಾರಕನಾಥ್ ಅವರು ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಮ್ಯಾಜಿಸ್ಟ್ರೇಟ್‌ ನ್ಯಾಯಾಲಯದಲ್ಲಿ ಹೇಳಿಕೆ ದಾಖಲಿಸಿದ ನಂತರ ಸೂಕ್ತ ರೀತಿಯಲ್ಲಿ  ತನಿಖೆ ಆಗುತ್ತಿಲ್ಲ. ಶವಗಳನ್ನು ಎಲ್ಲಿ ಹೂಳಲಾಗಿದೆ ಎಂಬುದನ್ನು ಕೇವಲ ಖಾಲಿ ಹಾಳೆಯಲ್ಲಿ ಗುರುತು ಮಾಡಿಕೊಡು ಎಂದು ಪೊಲೀಸರು ಸಾಕ್ಷಿ ಫಿರ್ಯಾದಿಯ ಮೇಲೆ ಒತ್ತಡ ಹೇರುತ್ತಿದ್ದಾರೆ. ಜತಗೆ ಆತ ನೀಡಿರುವ ಹೇಳಿಕೆಗಳು ಸೋರಿಕೆಯಾಗುತ್ತಿವೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.

ಸಾಕ್ಷಿ ಫಿರ್ಯಾದಿಯು ತನ್ನ ವಕೀಲರೊಂದಿಗೆ ಒಂದು ಸ್ಥಳಕ್ಕೆ ತೆರಳಿ, ಶವವನ್ನು ಹೊರತೆಗೆಯುವುದಾಗಿ ನ್ಯಾಯಾಲಯ ಮತ್ತು ಪೊಲೀಸರಿಗೆ ಮಾಹಿತಿ ನೀಡಿರುತ್ತಾರೆ. ಆದರೂ ಪೊಲೀಸರು ಸ್ಥಳಕ್ಕೆ ಹೋಗುವದಿಲ್ಲ. ಆ ವ್ಯಕ್ತಿಯ ಹೇಳಿಕೆ ದಾಖಲಿಸುವ ತನಿಖಾಧಿಕಾರಿಯು ಯಾರಿಗೋ ಕರೆ ಮಾಡಿ, ಅವರ ಸೂಚಿಸುವಂತೆ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ. ಆದ್ದರಿಂದ ಕೂಡಲೇ ತನಿಖಾ ತಂಡವನ್ನು ಬದಲಿಸಬೇಕು. ಹೈಕೋರ್ಟ್‌ ಅಥವಾ ಸುಪ್ರೀಂ ಕೋರ್ಟ್‌ನ ಹಾಲಿ ಅಥವಾ ನಿವೃತ್ತ ನ್ಯಾಯಮೂರ್ತಿಯ ಮೇಲ್ವಿಚಾರಣೆಯಲ್ಲಿ ಎಸ್‌ಐಟಿ ರಚಿಸಬೇಕು ಎಂದು ಆಗ್ರಹಪಡಿಸಿದರು.

ಸಾಕ್ಷಿ ಫಿರ್ಯಾದುದಾರ ಮತ್ತು ಆತನ ವಕೀಲರಿಗೆ ಬೆದರಿಕೆ ಇದೆ. ಅವರಿಗೆ ತಕ್ಷಣವೇ ಭದ್ರತೆ ಒದಗಿಸಬೇಕು. ಅವರಿಗೆ ಏನಾದರೂ ಆದರೆ ಗೃಹ ಸಚಿವ, ರಾಜ್ಯದ ಪೊಲೀಸ್‌ ಮಹಾನಿರ್ದೇಶಕ ಹೊಣೆಗಾರರಾಗುತ್ತಾರೆ ಎಂದು ಎಚ್ಚರಿಕೆ ನೀಡಿದರು.

ಹಿರಿಯ ವಕೀಲ ಸಿ.ಎಸ್‌.ದ್ವಾರಕನಾಥ್ ಮಾತನಾಡಿ ಬಿಎನ್‌ಎಸ್‌ 183ನೇ ಸೆಕ್ಷನ್‌ ಅಡಿಯಲ್ಲಿ ಸಾಕ್ಷಿ ಫಿರ್ಯಾದಿ ನೀಡಿದ ಹೇಳಿಕೆ ಸಾಕ್ಷ್ಯವಾಗುತ್ತದೆ. ಈ ಹೇಳಿಕೆಗಳು ಖಾಸಗಿ ವ್ಯಕ್ತಿಗಳಿಗೆ ಸೋರಿಕೆಯಾಗುತ್ತಿದೆ. ಇದನ್ನು ತಪ್ಪಿಸಿ ಎಂದು ವಕೀಲರು ಗೃಹ ಸಚಿವರಿಗೆ ಪತ್ರ ಬರೆದಿದ್ದಾರೆ. ಸರ್ಕಾರ ಕೂಡಲೇ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದರು.

ಪ್ರಕರಣ ಸಂಬಂಧ ವಿಶೇಷ ತನಿಖಾ ತಂಡ ರಚನೆಯಾಗಬೇಕು. ಹೂತಿಟ್ಟ ಶವ ಹೊರತೆಗೆದು FSL ಮೂಲಕ ಪತ್ತೆ ಹಚ್ಚಬೇಕು. ತನಿಖೆಯ ಸಂಪೂರ್ಣ ವಿಡಿಯೋ ರೆಕಾರ್ಡಿಂಗ್ ಮಾಡಬೇಕು. ಅಪರಾಧಗಳಲ್ಲಿ ಭಾಗಿಯಾದವರನ್ನು ವಿಚಾರಣೆ ಮಾಡಬೇಕು.  ಎಷ್ಟೇ ಪ್ರಭಾವಿಗಳಾಗಿದ್ದರೂ ತಕ್ಷಣ ಬಂಧಿಸಿ ವಿಚಾರಣೆ ಮಾಡಬೇಕು ಎಂದು ನ್ಯಾ. ಗೋಪಾಲಗೌಡ ಮತ್ತು ದ್ವಾರಕಾನಾಥ್‌ ಅವರು ಒತ್ತಾಯಿಸಿದ್ದಾರೆ.

More articles

Latest article