ಧರ್ಮಸ್ಥಳ ಹತ್ಯೆಗಳು: ಲೋಕಸಭೆಯಲ್ಲಿ ಪ್ರಸ್ತಾಪಿಸಿ; ಎಸ್‌ ಐಟಿ ರಚನೆಗೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿ: ರಾಹುಲ್‌ ಗಾಂಧಿಗೆ ಪತ್ರ

Most read

ಬೆಂಗಳೂರು: ಧರ್ಮಸ್ಥಳ ಗ್ರಾಮದಲ್ಲಿ ನಡೆದಿರುವ ಹತ್ಯೆಗಳನ್ನು ಕುರಿತು ಸಂಸತ್‌ ಅಧಿವೇಶನದಲ್ಲಿ ಪ್ರಸ್ತಾಪಿಸಿ ಸಂತ್ರಸ್ತರಿಗೆ ನ್ಯಾಯ ಒದಗಿಸಬೇಕೆಂದು ಸಾಮಾಜಿಕ ಕಾರ್ಯಕರ್ತೆ ಎಂ. ನಾಗಮಣಿ ಅವರು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ಪತ್ರ ಬರೆದಿದ್ದಾರೆ.

ತಮ್ಮದೇ ಪಕ್ಷ ಅಧಿಕಾರದಲ್ಲಿರುವ ಕರ್ನಾಟಕ ಸರ್ಕಾರಕ್ಕೆ ಪ್ರಕರಣದ ತನಿಖೆಗೆ ಎಸ್‌ ಐಟಿ ರಚಿಸಲು ನಿರ್ದೇಶನ ನೀಡಬೇಕು ಎಂದೂ ಅವರು ಕೋರಿದ್ದಾರೆ.

ಈ ಪ್ರಕರಣವು ಜುಲೈ 3, 2025 ರಂದು ಬೆಳಕಿಗೆ ಬಂದಿದೆ. 1995 ರಿಂದ 2014 ರವರೆಗೆ ಧರ್ಮಸ್ಥಳ ಮಂಜುನಾಥ ದೇವಸ್ಥಾನದಲ್ಲಿ ಸ್ವಚ್ಛತಾ ಕಾರ್ಮಿಕನಾಗಿ ಕೆಲಸ ಮಾಡಿದ್ದ ದೂರುದಾರರೊಬ್ಬರು ಅತ್ಯಾಚಾರಕ್ಕೊಳಗಾಗಿ ಕೊಲೆಯಾದ ಮಹಿಳೆಯರ ಮತ್ತು ಅಪ್ರಾಪ್ತ ಬಾಲಕಿಯರ ಶವಗಳನ್ನು ವಿಲೇವಾರಿ ಮಾಡಿರುವುದಾಗಿ ದೂರು ದಾಖಲಿಸಿದ್ದಾನೆ. ದೇವಸ್ಥಾನದ ಆಡಳಿತದೊಂದಿಗೆ ಸಂಬಂಧಿಸಿದ ಪ್ರಭಾವಿ ವ್ಯಕ್ತಿಗಳಿಂದ ಈ ಭೀಕರ ಕೃತ್ಯಗಳು ನಡೆದಿವೆ ಎಂದೂ ಹೇಳಿದ್ದಾನೆ. ಈತ ನೇತ್ರಾವತಿ ನದಿಯ ಬಳಿಯ ಸಮಾಧಿ ಸ್ಥಳಗಳನ್ನು ಗುರುತಿಸಲು ಸಿದ್ಧನಿದ್ದಾನೆ.

ದಕ್ಷಿಣ ಕನ್ನಡ ಪೊಲೀಸರ ತನಿಖೆಯನ್ನು ವಿಳಂಬಗೊಳಿಸುತ್ತಿದ್ದಾರೆ. ಈ ವಿಳಂಬವು ಸಾಕ್ಷ್ಯಗಳ ತಿರುಗಿಸುವಿಕೆಗೆ ಅವಕಾಶವನ್ನು ನೀಡುತ್ತದೆ, ಇದರಿಂದ ಆರೋಪಿಗಳು ನಿರ್ಣಾಯಕ ಸಾಕ್ಷ್ಯಗಳನ್ನು ನಾಶಪಡಿಸಲು ಸಹಾಯವಾಗಬಹುದು.

ಗೌಪ್ಯ ಮಾಹಿತಿಯ ಸೋರಿಕೆಯಾಗುತ್ತಿದೆ. ಇದು 2018ರ ಸಾಕ್ಷಿ ಸಂರಕ್ಷಣಾ ಯೋಜನೆಯಡಿಯಲ್ಲಿ ದೂರುದಾರನ ಸುರಕ್ಷತೆಯನ್ನು ಅಪಾಯಕ್ಕೆ ಒಳಪಡಿಸುತ್ತದೆ ಮತ್ತು ತನಿಖೆಯ ಸಮಗ್ರತೆಯನ್ನು ಹಾಳುಗೆಡವುತ್ತವೆ. ಸಕ್ರಿಯ ಕ್ರಮದ ಕೊರತೆ: ಅತ್ಯಾಚಾರ ಮತ್ತು ಕೊಲೆಯಂತಹ ಗಂಭೀರ ಅಪರಾಧಗಳ ತನಿಖೆ ನಡೆಸಲು ಪೊಲೀಸರು ವಿಫಲರಾಗಿದ್ದು, ಇದು ನಿರ್ಲಕ್ಷ್ಯ ಅಥವಾ ಪ್ರಭಾವಿ ಆರೋಪಿಗಳನ್ನು ರಕ್ಷಿಸುವ ಪ್ರಯತ್ನವಾಗಿರುತ್ತದೆ.

ಆದ್ದರಿಂದ ತಾವು ತಮ್ಮದೇ ಪಕ್ಷ ಆಡಳಿತ ನಡೆಸಿತ್ತಿರುವ ಕರ್ನಾಟಕ ಸರ್ಕಾರಕ್ಕೆ ಈ ಕೆಳಕಂಡ ನಿರ್ದೇಶನಗಳನ್ನು ನೀಡಬೇಕು ಎಂದು ಅವರು ಕೋರಿದ್ದಾರೆ. ಐಪಿಎಸ್ ಅಧಿಕಾರಿಯ ನೇತೃತ್ವದಲ್ಲಿ ಅಥವಾ ನಿವೃತ್ತ ಸುಪ್ರೀಂ ಕೋರ್ಟ್ ನ್ಯಾಯಾಧೀಶರ ಮೇಲ್ವಿಚಾರಣೆಯಲ್ಲಿ ಎಸ್ಐಟಿ ತನಿಖೆ ನಡೆಸಬೇಕು. ಈ ತಂಡದಲ್ಲಿ ಡಿಎನ್ಎ ಮತ್ತು ಡಿಜಿಟಲ್ ಫೋರೆನ್ಸಿಕ್ ವಿಶ್ಲೇಷಣೆಯನ್ನು ನಡೆಸಲು ಫೋರೆನ್ಸಿಕ್ ತಜ್ಞರನ್ನು ಒಳಗೊಂಡಿರಬೇಕು.

ದೂರುದಾರನ ಗೌಪ್ಯ ಹೇಳಿಕೆ ಮತ್ತು ವೈಯಕ್ತಿಕ ವಿವರಗಳನ್ನು ಸೋರಿಕೆ ಮಾಡಿದ ಪೊಲೀಸ್ ಅಧಿಕಾರಿಗಳ ವಿರುದ್ಧ ತಕ್ಷಣವೇ ಶಿಸ್ತುಕ್ರಮ ಮತ್ತು ಕಾನೂನು ಕ್ರಮಕೈಗೊಳ್ಳಬೇಕು.

ಉತ್ಖನನ ಮತ್ತು ಸ್ಥಳ ಭೇಟಿಗಳ ವಿಳಂಬಕ್ಕೆ ಕಾರಣರಾದ ಅಧಿಕಾರಿಗಳನ್ನು ಜವಾಬ್ದಾರರನ್ನಾಗಿಸಬೇಕು. ಈ ಸಮಾಧಿ ಸ್ಥಳಗಳು ಸಾಕ್ಷ್ಯಗಳನ್ನು ಸಂರಕ್ಷಿಸಲು ನಿರ್ಣಾಯಕವಾಗಿವೆ. ಸಾಕ್ಷ್ಯಗಳ ಮತ್ತಷ್ಟು ನಾಶವನ್ನು ತಡೆಯಲು ಪೊಲೀಸರು ತಕ್ಷಣ ಕ್ರಮಕೈಗೊಳ್ಳುವಂತೆ ನಿರ್ದೇಶಿಸಬೇಕು ಎಂದು ಕೋರಿದ್ದಾರೆ.

More articles

Latest article