ಮಂಗಳೂರು: ಧರ್ಮಸ್ಥಳ ಗ್ರಾಮದಲ್ಲಿ ನಡೆದಿವೆ ನಡೆದಿವೆ ಎನ್ನಲಾದ ಅತ್ಯಾಚಾರ ಹತ್ಯೆ ಮತ್ತು ಹೆಣಗಳನ್ನು ಹೂತು ಹಾಕಿರುವ ಪ್ರಕರಣಗಳಿಗೆ ಸಂಬಂಧಿಸಿದಂತೆ ಮೂರನೆ ದಿನವಾದ ಇಂದೂ ವಿಚಾರಣೆ ಆಮರಂಭವಾಗಿದೆ.
ನಿನ್ನೆ ಭಾನುವಾರ ಸಾಕ್ಷಿ ದೂರುದಾರ ವಿಶೇಷ ತನಿಖಾ ತಂಡದ (ಎಸ್‌ಐಟಿ) ಅಧಿಕಾರಿಗಳ ಮುಂದೆ ಹಾಜರಾಗಿ ಹೇಳಿಕೆ ನೀಡಿದ್ದಾರೆ.
ಮೂವರು ವಕೀಲರೊಂದಿಗೆ ಖಾಸಗಿ ಕಾರೊಂದರಲ್ಲಿ ಪ್ರವಾಸಿ ಬಂಗಲೆಗೆ ಮುಖಗವಸು ಧರಿಸಿಕೊಂಡೇ ಬಂದ ಸಾಕ್ಷಿ ದೂರುದಾರ ಸಂಜೆಯವರೆಗೂ ಎಸ್ ಐ ಟಿ ತಂಡದ ಅಧಿಕಾರಿಗಳ ಪ್ರಶ್ನೆಗಳಿಗೆ ಉತ್ತರಿಸಿದರು. ಆತನಿಂದ ಹೇಳಿಕೆ ದಾಖಲಿಸಿಕೊಳ್ಳುವಾಗ ಎಸ್‌ಐಟಿ ಮುಖ್ಯಸ್ಥರಾಗಿರುವ ಆಂತರಿಕ ಭದ್ರತಾ ವಿಭಾಗದ ಪೊಲೀಸ್ ಮಹಾನಿರ್ದೇಶಕ ಪ್ರಣವ್ ಮೊಹಾಂತಿ ಖುದ್ದು ಹಾಜರಿದ್ದರು. ಎಸ್‌ಐಟಿ ತಂಡದಲ್ಲಿರುವ ಪೊಲೀಸ್ ನೇಮಕಾತಿ ವಿಭಾಗದ ಡಿಐಜಿ ಎಂ.ಎನ್.ಅನುಚೇತ್, ಆಂತರಿಕ ಭದ್ರತಾ ವಿಭಾಗದ ಎಸ್.ಪಿ ಜಿತೇಂದ್ರ ಕುಮಾರ್ ದಯಾಮ ಹಾಗೂ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಮಂಗಳೂರು ವಲಯದ ಪೊಲೀಸ್ ವರಿಷ್ಠಾಧಿಕಾರಿ ಸಿ.ಎ. ಸೈಮನ್ ಅವರು ಸಾಕ್ಷಿ ದೂರುದಾರನಿಂದ ಹೇಳಿಕೆ ದಾಖಲಿಸಿಕೊಳ್ಳುವ ವೇಳೆ ಹಾಜರಿದರು.
ದೂರುದಾರ ಶವಗಳ ಬಗ್ಗೆ ವಿವರವಾದ ಹೇಳಿಕೆ ನೀಡಿದ್ದು, ಅವರ ಹೇಳಿಕೆಯ ಆಧಾರದ ಮೇಲೆ ಎಸ್‌ಐಟಿ ಮುಂದಿನ ಕ್ರಮ ಕೈಗೊಳ್ಳಲಿದೆ ಎಂದು ಎಸ್‌ಐಟಿ ಮೂಲಗಳು ತಿಳಿಸಿವೆ. ಯಾವುದೇ ವಿಳಂಬವಿಲ್ಲದೆ ಮುಂದಿನ ಪ್ರಕ್ರಿಯೆಯನ್ನು ಮುಂದುವರಿಸುತ್ತೇವೆ. ಶವಗಳನ್ನು ಹೂಳಿರುವ ಕುರಿತು ಹಲವು ಸ್ಥಳಗಳನ್ನು ಉಲ್ಲೇಖಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.