ಮಂಗಳೂರು: ಧರ್ಮಸ್ಥಳ ಅತ್ಯಾಚಾರ ಹತ್ಯೆಗಳನ್ನು ಕುರಿತು ತನಿಖೆ ನಡೆಸಲು ರಚಿಸಲಾಗಿರುವ ವಿಶೇಷ ತನಿಖಾ ದಳ (ಎಸ್ ಐ ಟಿ)ವು ದೂರುಗಳನ್ನು ಸ್ವೀಕರಿಸಲು ಸಹಾಯವಾಣಿ ಆರಂಭಿಸಬೇಕು ಎಂದು ಕಣ್ಮರೆಯಾಗಿರುವ ವೈದ್ಯಕೀಯ ವಿದ್ಯಾರ್ಥಿನಿ ಅನನ್ಯ ಭಟ್ ಅವರ ಪರ ವಕೀಲರು ಮನವಿ ಮಾಡಿಕೊಂಡಿದ್ದಾರೆ.
ಪ್ರಕರಣದ ತನಿಖೆ ನಡೆಸಲು ರಾಜ್ಯ ಸರ್ಕಾರ ವಿಶೇಷ ತನಿಖಾ ದಳ ಸ್ಥಾಪಿಸಿರುವುದು ಸ್ವಾಗತಾರ್ಹ. ನಾಪತ್ತೆಯಾಗಿರುವ ವಿದ್ಯಾರ್ಥಿನಿ ಅನನ್ಯ ಭಟ್ ಪ್ರಕರಣ ಹಾಗೂ ಭವಿಷ್ಯದಲ್ಲಿ ಬೆಳಕಿಗೆ ಬರುವ ಪ್ರಕರಣಗಳನ್ನೂ ಸೇರಿಸಿ ತನಿಖೆ ನಡೆಸುವಂತೆ ಸೂಚಿಸಿದೆ. ಎಸ್ ಐಟಿ ರಚನೆ ಬಳಿಕ ಸಾಕಷ್ಟು ಮಂದಿ ಕರೆ ಮಾಡುತ್ತಿದ್ದು, ತಮಗಾದ ಭಯಾನಕ ಅನುಭವ ಹಾಗೂ ದುರಂತ ಕೃತ್ಯಗಳ ಬಗ್ಗೆ ತಿಳಿಸುತ್ತಿದ್ದಾರೆ. ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ನೀಡಲು ಹಿಂಜರಿಯುತ್ತಿದ್ದಾರೆ. ಆದ್ದರಿಂದ ಎಸ್ಐಟಿ ರಚಿಸಿರುವ ಸರ್ಕಾರ, ಸಹಾಯವಾಣಿಯನ್ನೂ ಆರಂಭಿಸಬೇಕೆಂದು ಮನವಿ ಮಾಡುವುದಾಗಿ ವಕೀಲರು ತಿಳಿಸಿದ್ದಾರೆ.
ಇನ್ನು ಮುಂದೆ ಬರುವ ದೂರುಗಳನ್ನು ಸ್ವೀಕರಿಸಲು ಎಸ್ ಐ ಟಿ ಕಚೇರಿಯೇ ಪೊಲೀಸ್ ಠಾಣೆ ಎಂದು ಘೋಷಿಸಬೇಕು. ಇಲ್ಲದಿದ್ದರೆ, ಎಸ್ ಐಟಿ ಯು ಪೊಲೀಸ್ ಠಾಣೆಯಾಗಿ ಕಾರ್ಯನಿರ್ವಹಿಸಿದರೂ ಇದು ಪೊಲೀಸ್ ಠಾಣೆ ಎಂದು ಅಧಿಸೂಚನೆಗೊಳ್ಳದ ಹಿನ್ನೆಲೆಯಲ್ಲಿ ಆರೋಪಿಗಳು ದುರುಪಯೋಗಪಡಿಸಿಕೊಂಡು ನ್ಯಾಯಾಲಯಗಳಿಂದ ತಡೆಯಾಜ್ಞೆ ಪಡೆಯುವ ಸಾಧ್ಯತೆಗಳಿವೆ. ಆದ್ದರಿಂದ ಎಸ್ ಐ ಟಿ ಕಚೇರಿಯೇ ಪೊಲೀಸ್ ಠಾಣೆ ಎಂದು ಘೋಷಿಸಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.