ಧರ್ಮಸ್ಥಳ ಪ್ರಕರಣಗಳ ಎಸ್‌ ಐಟಿ ತನಿಖೆ; ಪ್ರಗತಿ ವರದಿ ಪಡೆಯಲು ರಾಜ್ಯ ಮಹಿಳಾ ಆಯೋಗಕ್ಕೆ ವಕೀಲರ ಆಗ್ರಹ

Most read

ಬೆಂಗಳೂರು: ತಮ್ಮ ಪತ್ರದ ಆಧಾರದ ಮೇಲೆ ಧರ್ಮಸ್ಥಳದ ಸುತ್ತಮುತ್ತ ನಡೆದಿರುವ ಮಹಿಳೆಯರು ಮತ್ತು ಯುವತಿಯರ ಮೇಲಿನ ದೌರ್ಜನ್ಯ, ಕೊಲೆ, ನಾಪತ್ತೆ, ಅಸಹಜ ಸಾವುಗಳ ಪ್ರಕರಣಗಳ ಸಮಗ್ರ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡದಿಂದ ತನಿಖಾ ವಿವರಗಳನ್ನು ಪಡೆಯುವಂತೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರಿಗೆ ಬೆಂಗಳೂರಿನ ವಕೀಲ ಪ್ರದೀಪ್‌ ಕುಮಾರ್‌ ಎಸ್‌ ಪಿ ಪತ್ರ ಬರೆದಿದ್ದಾರೆ.

ರಾಜ್ಯ ಮಹಿಳಾ ಆಯೋಗದ ಮನವಿಯಂತೆ ಧರ್ಮಸ್ಥಳದಲ್ಲಿ ಪತ್ತೆಯಾದ ಶವಗಳನ್ನು ಕುರಿತು ತನಿಖೆ ನಡೆಸಲು ರಚನೆಯಾಗಿರುವ ವಿಶೇಷ ತನಿಖಾ ತಂಡ ಕೂಡಲೇ ಮಹಿಳೆಯರು ಮತ್ತು ಯುವತಿಯರ ಮೇಲೆ ಅತ್ಯಾಚಾರ, ಕೊಲೆ ಮತ್ತು ನಾಪತ್ತೆ ಪ್ರಕರಣಗಳನ್ನೂ ಸೇರಿದಂತೆ ಅಸಹಜ ಮತ್ತು ಅನುಮಾನಾಸ್ಪದ ಸಾವುಗಳ ಪ್ರಕರಣಗಳ ತನಿಖೆಯನ್ನು ಕೂಡಲೇ ಆರಂಭಿಸುವಂತೆ ಬೆಂಗಳೂರಿನ ವಕೀಲ ಪ್ರದೀಪ್‌ ಕುಮಾರ್‌ ಎಸ್‌ ಪಿ ಆಗ್ರಹಪಡಿಸಿದ್ದಾರೆ.

ಸಾರ್ವಜನಿಕ ಹಿತದೃಷ್ಟಿಯಿಂದ ಮುಂದಿನ ತನಿಖೆ ಕುರಿತು ಮಹಿಳಾ ಆಯೋಗವು ಮಾಹಿತಿ ಪಡೆಯಬೇಕು ಎಂದೂ ಅವರು ಆಗ್ರಹಪಡಿಸಿದ್ದಾರೆ.

ಮಹಿಳಾ ಆಯೋಗದ ಪತ್ರಕ್ಕನುಗುಣವಾಗಿ ಎಸ್‌ ಐಟಿ ರಚಿಸಲಾಗಿದೆ. ಧರ್ಮಸ್ಥಳ ಪ್ರಕರಣದಲ್ಲಿ ಮಹಿಳೆಯರಿಗೆ ಸಂಬಂಧಿಸಿದ ಪ್ರಕರಣಗಳಿದ್ದರೂ, ಈವರೆಗೆ ಅಂತಹ ಪ್ರಕರಣಗಳನ್ನು ತನಿಖೆ ಮಾಡುತ್ತಿರುವ ಬಗ್ಗೆ, ಯಾವುದೇ ಮಾಹಿತಿಯನ್ನು ಮಹಿಳಾ ಆಯೋಗದ ಗಮನಕ್ಕೆ ತರದಿರುವುದು ಆತಂಕ ಉಂಟುಮಾಡಿದೆ. ಆದ್ದರಿಂದ ಮಹಿಳಾ ಆಯೋಗವು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕೆಂದು ಪ್ರದೀಪ್‌ ಕುಮಾರ್‌ ಮನವಿ ಮಾಡಿಕೊಂಡಿದ್ದಾರೆ.

More articles

Latest article