ಬೆಂಗಳೂರು: ಸಾಕ್ಷಿಗಳು ಮತ್ತು ಸಂತ್ರಸ್ತರ ಕುಟುಂಬಗಳಿಗೆ ಸಂಪೂರ್ಣ ರಕ್ಷಣೆ ಒದಗಿಸಬೇಕು, ಧರ್ಮಸ್ಥಳದ ದೇವಾಲಯವನ್ನು ಸರ್ಕಾರ ಮುಜರಾಯಿ ಇಲಾಖೆಯ ಪರಿಧಿಗೆ ತರಬೇಕು ಹಾಗೂ ಈ ಪ್ರಕರಣ ಕುರಿತು ವರದಿ ಮಾಡದಂತೆ ಮಾಧ್ಯಮಗಳ ಮೇಲೆ ಹೊರಿಸುವ ನಿರ್ಬಂಧಕಾಜ್ಞೆಗಳನ್ನು ತೆರವುಗೊಳಿಸಬೇಕು ಎಂದು ʼನಾವೆದ್ದು ನಿಲ್ಲದಿದ್ದರೆ-ಕರ್ನಾಟಕʼ ಒತ್ತಾಯಿಸಿದೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ವಿವಿಧ ಸಂಘಟನೆಗಳ ಮುಖಂಡರಾದ ಮಹಿಳಾ ಮುನ್ನಡೆಯ ಗೌರಿ, ಗಮನ ಮಹಿಳಾ ಸಮೂಹದ ಮಮತಾ ಯಜಮಾನ್, ಜನವಾದಿ ಮಹಿಳಾ ಸಂಘಟನೆಯ ವಿಮಲಾ ಕೆ.ಎಸ್., ಒಂದೆಡೆ ಸಂಸ್ಥೆಯ ಅಕ್ಕೈ ಪದ್ಮಶಾಲಿ, ವಕೀಲರಾದ ಮೈತ್ರೇಯಿ ಕೃಷ್ಣನ್, ಕರ್ನಾಟಕ ಜನಶಕ್ತಿಯ ಮಲ್ಲಿಗೆ ಸಿರಿಮನೆ ಮಾತನಾಡಿದರು.
ಧರ್ಮಸ್ಥಳದಲ್ಲಿ ಪ್ರಕರಣದಲ್ಲಿ ಆರೋಪಿಗಳಾಗಿರುವವರು ಬಲಾಢ್ಯರಾಗಿದ್ದಾರೆ. ಈ ತನಿಖಾ ದಳವು ಅತ್ಯಂತ ನಿಷ್ಪಕ್ಷಪಾತವಾಗಿ, ಯಾವುದೇ ಒತ್ತಡಕ್ಕೆ ಒಳಗಾಗದೆ ಕಾರ್ಯನಿರ್ವಹಿಸಬೇಕು. ಅಪರಾಧಿಗಳು ಯಾರೇ ಆಗಿರಲಿ, ಅವರನ್ನು ಕಾನೂನಿನ ಕಟಕಟೆಗೆ ತರಬೇಕು. ಈ ತನಿಖಾ ದಳವು ಸತ್ಯವನ್ನು ಬೆಳಕಿಗೆ ತಂದು, ಸಂತ್ರಸ್ತರಿಗೆ ನ್ಯಾಯ ಒದಗಿಸುತ್ತದೆ ಎಂದು ನಾವು ನಿರೀಕ್ಷಿಸುತ್ತೇವೆ
ಸಾಕ್ಷ್ಯ ಒದಗಿಸಲು ಮುಂದೆ ಬಂದಿರುವ ದೇವಾಲಯದ ಮಾಜಿ ಉದ್ಯೋಗಿ ಮತ್ತು ಇವರ ಕುಟುಂಬಕ್ಕೆ, , ಜತೆಗೆ ಭವಿಷ್ಯದಲ್ಲಿ ದೂರು ದಾಖಲಿಸಲು ಮುಂದೆ ಬರಬಹುದಾದ ಇತರರು ಹಾಗೂ ಕಾಣೆಯಾದ ಅಥವಾ ಕೊಲೆಯಾದ ಹೆಣ್ಣುಮಕ್ಕಳ ಕುಟುಂಬಸ್ಥರಿಗೆ ಸಂಪೂರ್ಣ ರಕ್ಷಣೆಯನ್ನು ಒದಗಿಸಬೇಕೆಂದು ಆಗ್ರಹಿಸುತ್ತೇವೆ.
ಈಗಾಗಲೇ ದಾಖಲಾಗಿರುವ ಪ್ರಕರಣಗಳ ಹೊರತಾಗಿಯೂ ಯಾವುದಾದರೂ ಕುಟುಂಬ ದೌರ್ಜನ್ಯ ಅಥವಾ ಅನ್ಯಾಯಕ್ಕೊಳಗಾಗಿದ್ದು ದೂರು ದಾಖಲಿಸಲು ಬಯಸುವುದಾದರೆ, ಅವರ ಮಾಹಿತಿ ಗೋಪ್ಯವಾಗಿಟ್ಟು, ಸಂಪೂರ್ಣ ರಕ್ಷಣೆ ಒದಗಿಸುವ ಕುರಿತು ವಿಶ್ವಾಸ ಮೂಡಿಸುವಂತೆ, ವಿಶೇಷ ತನಿಖಾ ದಳವು ಸಾರ್ವಜನಿಕ ಪ್ರಕಟಣೆ ಹೊರಡಿಸಬೇಕು.
ಸೌಜನ್ಯ ಪ್ರಕರಣದ ವಿಚಾರಣೆ ನಡೆಸಿ ಸಿಬಿಐ ನ್ಯಾಯಾಲಯ ಸೂಚಿಸಿದಂತೆ, ಸೌಜನ್ಯ ಪ್ರಕರಣದ ತನಿಖೆಯನ್ನು ದಿಕ್ಕುತಪ್ಪಿಸಿ, ತಾರ್ಕಿಕ ಅಂತ್ಯ ಮುಟ್ಟಲು ಸಾಧ್ಯವಾಗದಂತೆ ತಡೆದ ಪೊಲೀಸ್ ತನಿಖಾಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಬೇಕು ಮತ್ತು ಪ್ರಕರಣದ ಮರುತನಿಖೆಗೆ ಆದೇಶಿಸಬೇಕು.
ಇಂತಹ ಪ್ರಕರಣಗಳಲ್ಲಿ ಸತ್ಯಾಂಶಗಳನ್ನು ವರದಿ ಮಾಡುವ ಮಾಧ್ಯಮ ಸಂಸ್ಥೆಗಳ ಮೇಲೆ ನ್ಯಾಯಾಲಯಗಳಿಂದ ನಿರ್ಭಂಧಕಾಜ್ಞೆಗಳನ್ನು ತರುವ ಕ್ರಮವನ್ನೂ ಕೂಡಾ ನ್ಯಾಯಾಂಗವು ಪರಿಶೀಲನೆಗೊಳಪಡಿಸಬೇಕು. ಕರ್ನಾಟಕದ ನ್ಯಾಯಾಲಯಗಳು, ಧರ್ಮಸ್ಥಳದ ವಿಚಾರಕ್ಕೆ ಸಂಬಂಧಿಸಿ ನೀಡಿದ ಅಸಂಖ್ಯಾತ ನಿರ್ಬಂಧಕಾಜ್ಞೆಗಳಿಂದಾಗಿ ಸತ್ಯ ಹೂತು ಹೋಗುವ ಅಪಾಯವಿತ್ತು ಎಂಬುದನ್ನು ಈಗಲಾದರೂ ಮನವರಿಕೆ ಮಾಡಿಕೊಳ್ಳುವ ತುರ್ತು ಅಗತ್ಯವಿದೆ.
ತಮ್ಮ ಮನೆತನದ ಖಾಸಗಿ ಪೂಜಾಸ್ಥಳವೆಂದು ನ್ಯಾಯಾಲಯವನ್ನೂ ಒಪ್ಪಿಸಿ ಧರ್ಮಸ್ಥಳದ ಕುಟುಂಬ ತಮ್ಮ ವ್ಯಾಪ್ತಿಯಲ್ಲಿಟ್ಟುಕೊಂಡಿರುವ ದೇವಾಲಯವನ್ನು ಸರ್ಕಾರ ವಶಕ್ಕೆ ಪಡೆದು ಮುಜರಾಯಿ ಇಲಾಖೆಯ ವ್ಯಾಪ್ತಿಗೆ ತರಬೇಕು. ಆ ಮೂಲಕ ಮುಂದಿನ ದಿನಗಳಲ್ಲಿ ಖಾಸಗಿ ದುಷ್ಟಕೂಟಗಳು ಅಲ್ಲಿ ಅಮಾಯಕ ಜೀವಗಳನ್ನು ಬಲಿಕೊಡುವಂತಹ ಕೃತ್ಯಗಳನ್ನು ಎಸಗುವುದನ್ನು ತಡೆಯಲು ಅವಕಾಶವಾಗುತ್ತದೆ ಎಂದು ಆಗ್ರಹಪಡಿಸಿದ್ದಾರೆ.