ಬೆಂಗಳೂರು: ಧರ್ಮಸ್ಥಳ ಗ್ರಾಮದಲ್ಲಿ ನಡೆದಿವೆ ಎನ್ನಲಾದ ಅತ್ಯಾಚಾರ ಮತ್ತು ಕೊಲೆ ಪ್ರಕಣಗಳಲ್ಲಿ ಭಾಗಿಯಾದವರನ್ನು ಬಂಧಿಸಬೇಕು. ಕರ್ತವ್ಯ ನಿರ್ವಹಿಸಲು ವಿಫಲರಾದ ಅಧಿಕಾರ ವರ್ಗವನ್ನು ಹೊಣೆಗಾರರನ್ನಾಗಿಸಬೇಕು. ಈ ಮೂಲಕ ಸಂತ್ರಸ್ತರಿಗೆ ನ್ಯಾಯ ಒದಗಿಸಬೇಕು ಎಂದು ʼಕೊಂದವರು ಯಾರುʼ ಸಂಘಟನೆಯು ಎಐಸಿಸಿ ವರಿಷ್ಠೆ ಸೋನಿಯಾ ಗಾಂಧಿ ಅವರಿಗೆ ಪತ್ರ ಬರೆದಿದೆ.
ಈ ಪತ್ರಕ್ಕೆ ಸಾಹಿತಿಗಳು, ಮಹಿಳಾ ಹೋರಾಟಗಾರರು ಚಿಂತಕರು ಸಹಿ ಹಾಕಿದ್ದಾರೆ.
ಎಸ್‌ಐಟಿ ಕಾರ್ಯಾಚರಣೆಗೆ ಮತ್ತು ನ್ಯಾಯೋಚಿತ ತನಿಖೆಗೆ ಧಕ್ಕೆಯುಂಟುಮಾಡುವಂತಹ ಹೇಳಿಕೆ ನೀಡುವುದನ್ನು ನಿಲ್ಲಿಸುವಂತೆ ತಮ್ಮ ಪಕ್ಷದ ಮುಖಂಡರಿಗೆ ಸೂಚಿಸಬೇಕು. ಸೌಜನ್ಯ ಪ್ರಕರಣದಲ್ಲಿನ ತನಿಖೆಯ ಹಾದಿ ತಪ್ಪಿಸಿದ ಅಧಿಕಾರಿಗಳ ವಿರುದ್ಧ ಕರ್ನಾಟಕ ಸರ್ಕಾರ ಕ್ರಮ ತೆಗೆದುಕೊಳ್ಳಬೇಕು. ಎಂದೂ ಆಗ್ರಹಪಡಿಸಿದೆ.
ಧರ್ಮಸ್ಥಳದ ಅಪರಾದ ಪ್ರಕರಣಗಳ ಸಂಕ್ಷಿಪ್ತ ಇತಿಹಾಸ:
2012 ರಲ್ಲಿ ಸೌಜನ್ಯ ಪ್ರಕರಣ
1996 ರಲ್ಲಿ ಪದ್ಮಲತಾ ಪ್ರಕರಣ
1979 ರಲ್ಲಿ ಶಿಕ್ಷಕಿ ವೇದವಲ್ಲಿಯವರ ಪ್ರಕರಣ ಪ್ರಮುಖವಾಗಿವೆ.
ಸತ್ಯವನ್ನು ಬೆಳಕಿಗೆ ತರುವ ಸಂದರ್ಭದಲ್ಲಿ ಸತ್ಯವನ್ನು ಹೂತುಹಾಕುವ ಬೆದರಿಕೆಯ ತಂತ್ರಗಳು ಮತ್ತು ಪ್ರಯತ್ನಗಳು ಮೇಲುಗೈ ಪಡೆದುಕೊಂಡಿರುವುದು ವಿಷಾದನೀಯ. ಈ ವಿಷಯವನ್ನು ಬಯಲುಗೊಳಿಸಿದ ಸ್ವತಂತ್ರ ಪತ್ರಕರ್ತರನ್ನು ಮತ್ತು ಯೂಟ್ಯೂಬರ್‌ಗಳ ಮೇಲೆ ಅನಾಮಧೇಯ ಘಾತುಕರು ಕ್ರೂರದಾಳಿ ನಡೆಸಿದ್ದಾರೆ ಆ ಮೂಲಕ ಕಹಿಸತ್ಯವನ್ನು ಹೇಳದಂತೆ ಬಾಯಿ ಮುಚ್ಚಿಸಲಾಗುತ್ತಿದೆ.
ಬಿಜೆಪಿಯೂ ಸಹ ಆರಂಭದಲ್ಲಿ ಎಸ್‌ಐಟಿ ರಚನೆಯನ್ನು ಸ್ವಾಗತಿಸಿತಾದರೂ ಈಗ ಇಡೀ ಸಂದರ್ಭವನ್ನು ದ್ವೇಷರಾಜಕಾರಣದ ಅಸ್ತ್ರವಾಗಿ ಬಳಸಿಕೊಳ್ಳುತ್ತಿದೆ ಜಾತ್ಯತೀತತೆಯನ್ನು ಪ್ರತಿಪಾದಿಸುವ ಕಾಂಗ್ರೆಸ್ ಮಂತ್ರಿಗಳೂ ಸಹ ದ್ವೇಷರಾಜಕಾರಣದ ಉರಿಗೆ ತುಪ್ಪ ಸುರಿಯುವ ಕೆಲಸ ಮಾಡುತ್ತಿದ್ದಾರೆ ಎಸ್‌ಐಟಿ ತನ್ನ ತನಿಖೆಯನ್ನು ಮುಗಿಸುವ ಮೊದಲೇ ಹಲವು ದಶಕಗಳ ಹಿಂದೆ ತೀರಿಹೋದ ಜೀವಗಳ ಹೆಸರಿನಲ್ಲಿ ವಿವಾದ ಎಬ್ಬಿಸುತ್ತಿದೆ ಹಾಗು ರಾಜಕೀಯ ಒತ್ತಡದಿಂದ ಮುಕ್ತವಾಗಿ ತನಿಖೆ ನಡೆಸುವ ಎಸ್‌ಐಟಿಯ ಸಾಮರ್ಥ್ಯವನ್ನು ಕುಗ್ಗಿಸುತ್ತಿದೆ.
ಉಪಮುಖ್ಯಮಂತ್ರಿಗಳಾದ ಡಿ.ಕೆ ಶಿವಕುಮಾರ್ ಅವರು, ಧರ್ಮಸ್ಥಳದಲ್ಲಿ ಶವ ಹೂಳಿದ ಪ್ರಕರಣವು, ಶತಮಾನಗಳ ಇತಿಹಾಸವಿರುವ ಸ್ಥಳದ ವಿರುದ್ಧ ‘ಸಂಚು‘ ಎಂದು ಆರೋಪಿಸಿದ್ದಾರೆ. ಅಲ್ಲದೇ ಧರ್ಮಸ್ಥಳದಲ್ಲಿ ನಡೆದಿರುವ ಅತ್ಯಾಚಾರ ಮತ್ತು ಕೊಲೆಗಳ ವಿರುದ್ಧ ‘ತಪ್ಪು ಮಾಹಿತಿ ಅಂದೋಲನ ನಡೆಸುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳುವ ಬಗ್ಗೆ ಆಲೋಚಿಸಲಾಗುತ್ತಿದೆ ಎಂದು ಹೇಳಿರುವುದು ಆತಂಕ ಮೂಡಿಸಿದೆ.
ಗೃಹ ಸಚಿವ ಡಾ. ಜಿ.ಪರಮೇಶ್ವರ ಅವರೂ ವಿರೋಧ ಪಕ್ಷದವರ ಒತ್ತಡಕ್ಕೆ ಒಳಗಾಗಿ ಧರ್ಮಸ್ಥಳದ ವಿರುದ್ಧ ಅಭಿಪ್ರಾಯ ವ್ಯಕ್ತವಡಿಸುತ್ತಿರುವವರ ವಿರುದ್ಧ ರಾಜ್ಯ ಸರ್ಕಾರ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ. ನಾಮಾಜಿಕ ಜಾಲತಾಣದ ಮೂಲಕ ಅಭಿಪ್ರಾಯ ವ್ಯಕ್ತಪಡಿಸುತ್ತಿರುವವರಿಗೆ ‘ನಿಮ್ಮನ್ನು ನೀವು ನಿಯಂತ್ರಿಸಿಕೊಳ್ಳದೇ ಹೋದರೆ ನಾವು ನಿಯಂತ್ರಿಸಬೇಕಾಗುತ್ತದೆ‘ ಎಂದು ಎಚ್ಚರಿಕೆ ನೀಡಿದ್ದಾರೆ. ಮಹಿಳೆ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀಹೆಬ್ಬಾಳ್ಕರ್ ಅವರೂ ಸಹ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಸಹಿ ಹಾಕಿದ ಪ್ರಮುಖರು: ವಿಜಯಮ್ಮ ಹಿರಿಯ ಪತ್ರಕರ್ತರು; ಅರುಂಧತಿ ನಾಗ್ ರಂಗಕರ್ಮಿ; ಪದ್ಮಾವತಿ ರಾವ್ ರಂಗಕರ್ಮಿ; ಕವಿತಾ ಲಂಕೇಶ್ ಚಿತ್ರ ನಿರ್ಮಾಪಕರು; ಡಿ.ಸುಮನ ಕಿತ್ತೂರು ಪತ್ರಕರ್ತರು; ಅಕ್ಕೈ ಪದ್ಮಶಾಲಿ, ಲಿಂಗ ಮತ್ತು ಲೈಂಗಿಕ ಹಕ್ಕುಗಳ ಕಾರ್ಯಕರ್ತರು; ಪ್ರೊ.ಜಾನಕಿ ನಾಯರ್ ನಿವೃತ್ತ ಇತಿಹಾಸ ಪ್ರಾಧ್ಯಾಪಕರು; ಡಾ. ವಸುಂಧರಾ ಭೂಪತಿ ವೈದ್ಯೆ, ಲೇಖಕಿ; ಡಾ.ಸಬಿಹಾ ಭೂಮಿಗೌಡ ನಿವೃತ್ತ ಉಪಕುಲಪತಿ, ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ; ಡಾ.ಎಚ್.ಎಸ್. ಅನುಪಮಾ ಸ್ತ್ರೀರೋಗ ತಜ್ಞೆ ಮತ್ತು ಅನೇಕ ಸಮಘಟನೆಗಳ ಮುಖಂಡರು ಪತ್ರಕ್ಕೆ ಸಹಿ ಹಾಕಿದ್ದಾರೆ.