ನವದೆಹಲಿ: ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರ ಸಹೋದರ ಹರ್ಷೇಂದ್ರ ಕುಮಾರ್ ಕುರಿತು ವರದಿ ಮಾಡಲು ಮಾಧ್ಯಮಗಳಿಗೆ ವಿಧಿಸಿರುವ ನಿರ್ಬಂಧ (ಗ್ಯಾಗ್) ಆದೇಶವನ್ನು ತೆರವುಗೊಳಿಸಬೇಕು ಎಂದು ಕೋರಿ ಸಲ್ಲಿಸಲಾದ ಅರ್ಜಿಯ ವಿಚಾರಣೆ ಮಂದಿನ ಎರಡು ಮೂರು ದಿನಗಳಲ್ಲಿ ಸುಪ್ರೀಂಕೋರ್ಟ್ ನಲ್ಲಿ ವಿಚಾರಣೆಗೆ ಬರಲಿದೆ.
ಈ ಅರ್ಜಿಯ ವಿಚಾರಣೆಗೂ ಸುಪ್ರೀಂಕೋರ್ಟ್ ಇಂದು ಹೊರಡಿಸಿರುವ ಆದೇಶಕ್ಕೂ ಸಂಬಂಧ ಇರುವುದಿಲ್ಲ ಎಂದು ಥರ್ಡ್ ಐ ಸ್ಪಷ್ಟಪಡಿಸಿದೆ.
ಈ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಮತ್ತು ನ್ಯಾಯಮೂರ್ತಿಗಳಾದ ಕೆ. ವಿನೋದ್ ಚಂದ್ರನ್ ಹಾಗೂ ಜಾಯ್‌ಮಲ್ಯ ಬಾಗ್ಚಿ ಅವರ ತ್ರಿಸದಸ್ಯ ಪೀಠ, ಹೈಕೋರ್ಟ್‌ನಲ್ಲಿ ಏಕೆ ಅರ್ಜಿ ಸಲ್ಲಿಸಿಲ್ಲ ಎಂದು ಅರ್ಜಿದಾರರನ್ನು ಪ್ರಶ್ನಿಸಿತು. ನಂತರ ಮೊದಲು ಹೈಕೋರ್ಟ್ ನಲ್ಲಿ ನಿಮ್ಮ ಅಹವಾಲು ಸಲ್ಲಿಸಿ ಎಂದು ನಿರ್ದೇಶನ ನೀಡಿತು.
ಧರ್ಮಸ್ಥಳ ಮಂಜುನಾಥ ಸ್ವಾಮಿ ದೇಗುಲ ಸಂಸ್ಥೆಗಳ ಕಾರ್ಯದರ್ಶಿ ಹರ್ಷೇಂದ್ರ ಕುಮಾರ್ ಅವರು ಸಲ್ಲಿಸಿದ ಮಾನಹಾನಿ ಪ್ರಕರಣದಲ್ಲಿ ಬೆಂಗಳೂರಿನ ನ್ಯಾಯಾಲಯ ಈ ಗ್ಯಾಗ್ ಆದೇಶವನ್ನು ಹೊರಡಿಸಿತ್ತು. ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರ ಸಹೋದರ ಹರ್ಷೇಂದ್ರ ಕುಮಾರ್ ಕುರಿತು ವರದಿ ಮಾಡಲು ಮಾಧ್ಯಮಗಳಿಗೆ ವಿಧಿಸಿರುವ ಗ್ಯಾಗ್ ಆದೇಶವನ್ನು ತೆರವುಗೊಳಿಸಬೇಕು ಎಂದು ಕೋರಿ ಥರ್ಡ್ ಐ ಅರ್ಜಿ ಸಲ್ಲಿಸಿತ್ತು.
ಯಾವುದೇ ಎಫ್ ಐ ಆರ್ ನಲ್ಲಿ ತಮ್ಮ ವಿರುದ್ಧ ಅಥವಾ ದೇವಾಲಯದ ಅಧಿಕಾರಿಗಳ ವಿರುದ್ಧ ಯಾವುದೇ ನಿರ್ದಿಷ್ಟ ಆರೋಪಗಳಿಲ್ಲದಿದ್ದರೂ, ಆನ್ ಲೈನ್ ನಲ್ಲಿ ಸುಳ್ಳು ಮತ್ತು ಮಾನಹಾನಿಕರ ವಿಷಯವನ್ನು ಹಬ್ಬಿಸಲಾಗುತ್ತಿದೆ ಎಂದು ಹರ್ಷೇಂದ್ರ ಕುಮಾರ್ ವಾದಿಸಿದ್ದರು.