ಮಂಗಳೂರು: ಧರ್ಮಸ್ಥಳದಲ್ಲಿ ನಡೆದಿವೆ ಎನ್ನಲಾದ ಅಪರಾಧ ಪ್ರಕರಣದಲ್ಲಿ ಸಾಕ್ಷಿ ದೂರುದಾರನಾಗಿದ್ದು ಜೈಲಿನಲ್ಲಿರುವ ಚಿನ್ನಯ್ಯ ಅವರ ಜಾಮೀನು ಅರ್ಜಿಯನ್ನು ಬೆಳ್ತಂಗಡಿ ಕೋರ್ಟ್ ವಜಾಗೊಳಿಸಿದೆ. ಚಿನ್ನಯ್ಯಗೆ ಜಾಮೀನು ಕೋರಿ ಅವರ ಪರವಾಗಿ ಜಿಲ್ಲಾ ಕಾನೂನು ಪ್ರಾಧಿಕಾರದ ವಕೀಲರು ಅರ್ಜಿ ಸಲ್ಲಿಸಿದ್ದರು.
ಇಂದು ನಡೆದ ವಿಚಾರಣೆಯಲ್ಲಿ ಎಸ್ಐಟಿ ಪರ ವಕೀಲರು ಜಾಮೀನು ನೀಡದಂತೆ ವಾದಿಸಿದರು. ವಾದ ಪ್ರೆತಿವಾದ ಆಲಿಸಿದ ಬೆಳ್ತಂಗಡಿ ನ್ಯಾಯಾಲಯದ ನ್ಯಾಯಾಧೀಶ ವಿಜಯೇಂದ್ರ ಅವರು ಚಿನ್ನಯ್ಯನ ಜಾಮೀನು ಅರ್ಜಿ ವಜಾ ಮಾಡಿ ಆದೇಶಿಸಿದ್ದಾರೆ. ಹೀಗಾಗಿ ಚಿನ್ನಯ್ಯ ಶಿವಮೊಗ್ಗ ಕೇಂದ್ರ ಕಾರಾಗೃಹದಲ್ಲಿ ದಿನ ದೂಡಬೇಕಾಗಿದೆ.
ಶವಗಳನ್ನು ಹೂತಿರುವುದಾಗಿ ಚಿನ್ನಯ್ಯ ತೋರಿಸಿದ್ದ ಸ್ಥಳಗಳನ್ನು ಅಗೆದಾಗ ಯಾವುದೇ ಕುರುಹುಗಳು ಪತ್ತೆಯಾಗಿರಲಿಲ್ಲ. ಅಂತಿಮವಾಗಿ ಎಸ್ಐಟಿ ಅಧಿಕಾರಿಗಳು ಚಿನ್ನಯ್ಯನನ್ನು ಬಂಧಿಸಿ ಕಸ್ಟಡಿಗೆ ತೆಗೆದುಕೊಂಡು ತೀವ್ರ ವಿಚಾರಣೆಗೊಳಪಡಿಸಿದ್ದರು. ಇದೀಗ ಚಿನ್ನಯ್ಯಗೆ ನ್ಯಾಯಾಂಗ ಬಂಧನ ಅವಧಿ ವಿಸ್ತರಣೆಯಾಗಿದೆ.