ಮಂಗಳೂರು: ಧರ್ಮಸ್ಥಳ ಗ್ರಾಮದಲ್ಲಿ ನಡೆದಿರುವ ಅತ್ಯಾಚಾರ ಮತ್ತು ಕೊಲೆ ಪ್ರಕರಣಗಳಿಗೆ ಸಂಭಂಧಪಟ್ಟಂತೆ ಶವಗಳನ್ನು ಹೂತು ಹಾಕಿದ್ದಾಗಿ ದೂರು ನೀಡಿದ್ದ ಚಿನ್ನಯ್ಯ ಅವರ ಮೊಬೈಲ್ ಅನ್ನು ವಿಶೇಷ ತನಿಖಾ ತಂಡ (ಎಸ್ ಐಟಿ) ವಶಪಡಿಸಿಕೊಂಡಿದೆ. ಚಿನ್ನಯ್ಯಗೆ ಆಶ್ರಯ ನೀಡಿದ್ದ ಸೌಜನ್ಯ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಅವರ ನಿವಾಸದಲ್ಲೂ ಎಸ್ ಐಟಿ ಅಧಿಕಾರಿಗಳು ಶೋಧ ನಡೆಸುತ್ತಿದ್ದಾರೆ. ಎಸ್ ಐಟಿ ಅದಿಕಾರಿ ಜಿತೇಂದ್ರ ದಯಾಮ ಮತ್ತಿತರ ಅಧಿಕಾರಿಗಳು ಶೋಧ ನಡೆಸುತ್ತಿದ್ದಾರೆ.
ಮಹೇಶ್ ಶೆಟ್ಟಿ ತಿಮರೋಡಿ ಮನೆಯ ಶೋಧಕ್ಕೆ ಸರ್ಚ್ ವಾರಂಟ್ (ನ್ಯಾಯಾಲಯದ ಅನುಮತಿ) ಪಡೆದಿದ್ದ ಎಸ್ ಐ ಟಿ, ಆರೋಪಿ ಚಿನ್ನಯ್ಯ ಅವರನ್ನು ತಿಮರೋಡಿ ನಿವಾಸಕ್ಕೆ ಕರೆ ತಂದು ಮಹಜರು ನಡೆಸಿತು. ತಿಮರೋಡಿ ಅವರ ನಿವಾಸದ ಹಾರ್ಡ್ ಡಿಸ್ಕ್ ಅನ್ನೂ ವಶಕ್ಕೆ ಪಡೆಯಲಾಗಿದೆ ಎಂದು ಮೂಲಗಳು ತಿಳಿಸಿವೆ.