ಧರ್ಮಸ್ಥಳ: ‘ನಮ್ಮ ಜಮೀನು ಧಣಿಗಳಿಗೆ ಬೇಕು ಅನ್ನಿಸಿದರೆ ಕೊಡಬೇಕು. ಕೊಡುವುದಿಲ್ಲ ಎಂದಾದರೆ ಕೊಲೆಯಾಗಬೇಕು. ಆದರೆ ಕೊಲೆಯನ್ನು ಅವರು ಮಾಡುವುದಿಲ್ಲ. ಆ ಕೆಲಸಕ್ಕೆ ನಮ್ಮದೇ ಸಂಬಂಧಿಕರು, ನೆರೆಹೊರೆಯವರನ್ನು ಬಳಸುತ್ತಾರೆ. ಕೊಲೆಯಾದ ಕುಟುಂಬದ ಉಳಿದ ಸದಸ್ಯರು ಧಣಿ ಕೊಟ್ಟ ಪುಡಿಗಾಸು ತೆಗೆದುಕೊಂಡು ಜಮೀನು ಬರೆದುಕೊಟ್ಟು ಊರು ಬಿಡಬೇಕು. ವಿಚಿತ್ರ ಎಂದರೆ ಧಣಿಗಳ ಮಾತು ಕೇಳಿ ಕೊಲೆ ಮಾಡಿದವರೂ ಕೂಡಾ ಅವರ ಭೂಮಿಯನ್ನು ಧಣಿಗಳಿಗೇ ಮಾರಾಟ ಮಾಡಿ ಊರು ಬಿಡಬೇಕು’ ಇದು ಧರ್ಮಸ್ಥಳ ಗ್ರಾಮ ವ್ಯಾಪ್ತಿಯಲ್ಲಿರುವ ಬಹುತೇಕ ಮನೆಗಳಲ್ಲಿ ಕೇಳಿ ಬರುವ ಮನೆ ಮಾತಾಗಿದೆ.
ಸಿಪಿಐಎಂ ರಾಜ್ಯ ಕಾರ್ಯದರ್ಶಿ, ಚಿಂತಕ ಡಾ ಕೆ ಪ್ರಕಾಶ್, ಮಹಿಳಾ ಹೋರಾಟಗಾರ್ತಿ ಕೆ ಎಸ್ ವಿಮಲಾ, ಹೋರಾಟಗಾರರಾದ ಮುನೀರ್ ಕಾಟಿಪಳ್ಳ, ಬಿ ಎಂ ಭಟ್, ಈಶ್ವರಿ ಪದ್ಮುಂಜ, ಕಾವ್ಯ ಅಚ್ಯುತ್, ಸತೀಶ್ ನಾಯಕ್ ಸೇರಿದಂತೆ ಹಲವು ಸಾಮಾಜಿಕ ಹೋರಾಟಗಾರರು ಎರಡು ದಿನಗಳ ಕಾಲ ಧರ್ಮಸ್ಥಳ ನಿವಾಸಿಗಳ ಜೊತೆ ಮಾತುಕತೆ ನಡೆಸಿದ್ದಾರೆ. ಸಿಪಿಐಎಂನ ಡಾ ಕೆ ಪ್ರಕಾಶ್ ನೇತೃತ್ವದ ನಿಯೋಗ ಪ್ರತ್ಯೇಕವಾಗಿ ಪದ್ಮಲತಾ ಕುಟುಂಬಸ್ಥರನ್ನು ಭೇಟಿ ಮಾಡಿ ಚರ್ಚೆ ನಡೆಸಿದೆ.
ಪ್ರಕಾಶ್ ನಿಯೋಗದ ಜೊತೆ ಮಾತನಾಡಿದ ಪದ್ಮಲತಾ ಸಹೋದರಿ ಇಂದ್ರವತಿ “ಧಣಿಗಳ ಭೂಹಗರಣ, ದರ್ಪ, ಸ್ಥಳೀಯ ಪಂಚಾಯಿತಿ ಚುನಾವಣೆ ನಡೆಸದೇ ಇರುವುದನ್ನು ಪ್ರಶ್ನೆ ಮಾಡಿದ ನನ್ನ ತಂದೆ ದೇವಾನಂದ ಅವರ ಮೇಲಿನ ದ್ವೇಷದಿಂದ ನನ್ನ ತಂಗಿಯನ್ನು ಅಪಹರಣ ಮಾಡಿ ಭೀಕರವಾಗಿ ಹತ್ಯೆ ಮಾಡಲಾಯಿತು. ತಂಗಿಯ ಅಪಹರಣ ಮತ್ತು ಕೊಲೆಗೆ ನಮ್ಮ ಸಂಬಂಧಿಕರನ್ನೇ ಬಳಸಿಕೊಂಡರು. ಕಾಲೇಜು ಪ್ರಿನ್ಸಿಪಾಲರೇ ನಮ್ಮ ಸಂಬಂಧಿಕ ಮಹಿಳೆಯನ್ನೇ ಬಳಸಿಕೊಂಡು ತಂಗಿ ಪದ್ಮಲತಾರನ್ನು ಅಪಹರಣ ಮಾಡಿಸಿದರು ಅಪಹರಣ ಮಾಡುವಾಗ ಕಾರಿನಲ್ಲಿ ಚಿಕ್ಕಧಣಿ ಇದ್ದರು. ” ಎಂದು ವಿವರಿಸಿದರು.
“ಪದ್ಮಲತಾ ಕೊಲೆಯಾದ ಬಳಿಕ ನನ್ನ ತಂದೆ ಹೋರಾಟ ಬಿಟ್ಟು ಕುಟುಂಬದೊಂದಿಗೆ ಊರು ಬಿಟ್ಟು ಹೋಗುತ್ತಾರೆ ಎಂದು ಅವರು ನಿರೀಕ್ಷಿಸಿದ್ದರು. ಆದರೆ ನಮ್ಮ ಕುಟುಂಬದ ಜೊತೆ ಸಿಪಿಐಎಂ ಪಕ್ಷ ಗಟ್ಟಿಯಾಗಿ ನಿಂತಿತ್ತು. ಹಾಗಾಗಿ ನಾವು ಊರು ಬಿಡಲಿಲ್ಲ. ಊರು ಬಿಡಲಿಲ್ಲ ಎಂಬ ಕೋಪದಲ್ಲಿ ತಂದೆಯ ಕೊಲೆ ಯತ್ನವೂ ನಡೆದಿತ್ತು. ತಂಗಿಯ ಅಪಹರಣದ ಹಿಂದೆ ಇರುವ ಸ್ಥಳೀಯರು, ಸಂಬಂಧಿಕರ ಬಗ್ಗೆ ಊರಲ್ಲಿ ಚರ್ಚೆ ಶುರುವಾಯಿತು. ಧಣಿಗಳ ಆದೇಶದಂತೆ ಅಪಹರಣ ಮಾಡಿ ಕೊಲೆ ಮಾಡಿದವರು ಊರು ಬಿಟ್ಟರು. ಕೊಲೆಗಾರರು, ಅಪಹರಣಕಾರರು ಊರು ಬಿಡುವ ಸಂದರ್ಭದಲ್ಲಿ ಅವರ ಜಮೀನನ್ನು ಧಣಿಗಳಿಗೆ ಮಾರಿದರು. ಈಗಲೂ ಅವರ ಜಮೀನುಗಳು ಧಣಿಗಳ ಹೆಸರಿನಲ್ಲಿದೆ” ಎಂದು ಇಂದ್ರವತಿಯವರು ನಿಯೋಗಕ್ಕೆ ತಿಳಿಸಿದರು.
ಸುತ್ತಮುತ್ತ ಜಮೀನುಗಳನ್ನೆಲ್ಲಾ ಅವರೇ ಖರೀದಿಸುತ್ತಾರೆ. ಅವರೇ ನಿರ್ಧರಿಸಿದ ಬೆಲೆಗೆ ಜಮೀನು ನೀಡದೇ ಇದ್ದರೆ ದೌರ್ಜನ್ಯ ನಡೆಸುತ್ತಾರೆ. ಯಾರಾದರೊಬ್ಬರು ದೌರ್ಜನ್ಯಗಳನ್ನು ಎದುರಿಸಿದರೆ, ಸುತ್ತಮುತ್ತಲ ಜಮೀನುಗಳನ್ನು ಖರೀದಿಸಿ ನಡೆದಾಡಲೂ ಸ್ಥಳವಿಲ್ಲದಂತೆ ಮಾಡುತ್ತಾರೆ. ಜಮೀನುಗಳಿಗೆ ನೀರು ನುಗ್ಗುವಂತೆ ಮಾಡಿ ಜಮೀನು ಕೊಡಲೇಬೇಕಾದ ಅನಿವಾರ್ಯ ಪರಿಸ್ಥಿತಿಯನ್ನು ನಿರ್ಮಿಸುತ್ತಾರೆ ಎಂದು ನಿಯೋಗದ ಮುಂದೆ ಅವಲತ್ತುಕೊಂಡರು.
ಆದ್ದರಿಂದ ಕಳೇಬರ ಪತ್ತೆ ಪ್ರಕರಣದ ಜೊತೆಗೆ ಭೂ ಅಕ್ರಮಗಳ ತನಿಖೆಯನ್ನೂ ಎಸ್ ಐ ಟಿಗೆ ವಹಿಸಬೇಕು ಎಂದು ನಿಯೋಗ ಅಭಿಪ್ರಾಯಪಟ್ಟಿದೆ. ಭೂಹಗರಣ ಮತ್ತು ಮೈಕ್ರೊ ಫೈನಾನ್ಸ್ ತನಿಖೆಯ ಜೊತೆ ಜೊತೆಗೆ ಅತ್ಯಾಚಾರ, ಅಪಹರಣ, ಕೊಲೆ, ದೌರ್ಜನ್ಯಗಳ ತನಿಖೆ ನಡೆಯಬೇಕಿದ್ದು, ಈಗಿರುವ ಎಸ್ ಐಟಿ ಅಥವಾ ಹೊಸ ಎಸ್ ಐಟಿ ರಚನೆ ಮಾಡಿ ತನಿಖೆ ನಡೆಸಬೇಕು ಎಂದು ಡಾ ಕೆ ಪ್ರಕಾಶ್ ಆಗ್ರಹಿಸಿದ್ದಾರೆ.