ಬೆಳ್ತಂಗಡಿ: ಧರ್ಮಸ್ಥಳ ಪ್ರಕರಣ ಕುರಿತು ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್ಐಟಿ) ಇಂದು ಬೆಳ್ತಂಗಡಿ ನ್ಯಾಯಾಲಯಕ್ಕೆ ತನಿಖಾ ವರದಿ ಸಲ್ಲಿಸಿದೆ. ಬಿಎನ್ ಎಸ್ ಎಸ್- 215ರ ಅಡಿಯಲ್ಲಿ ಸುಳ್ಳು ಸಾಕ್ಷ್ಯ ಕುರಿತ ಪ್ರಕರಣದ ತನಿಖಾ ವರದಿ ಇದಾಗಿದ್ದು, ಸುಮಾರು 4 ಸಾವಿರ ಪುಟಗಳನ್ನು ಹೊಂದಿದೆ ಎಂದು ಮೂಲಗಳು ತಿಳಿಸಿವೆ. ಸುಳ್ಳು ಸಾಕ್ಷ್ಯದ ಕುರಿತ ಪ್ರಕರಣದ ತನಿಖಾ ವರದಿ ಇದಾಗಿದ್ದು, ಎಸ್‌ಐಟಿ ತನಿಖಾಧಿಕಾರಿ ಜಿತೇಂದ್ರ ಕುಮಾರ್ ದಯಾಮ ಅವರು ಇಂದು ಮಧ್ಯಾಹ್ನ 3:15 ಕ್ಕೆ ಬೆಳ್ತಗಂಡಿ ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ. ಆದರೆ ಯಾವುದೇ ಚಾರ್ಜ್ ಶೀಟ್ ಸಲ್ಲಿಸಲಾಗಿಲ್ಲ ಎಂದೂ ಏಳಲಾಗಿದೆ.
ಈ ತನಿಖಾ ವರದಿಯಲ್ಲಿನ ಅಂಶಗಳು ಬಹಿರಂಗವಾಗಿಲ್ಲವಾದರೂ ಅನೇಕ ಕುತೂಹಲಕಾರಿ ಮಾಹಿತಿಗಳನ್ನೊಳಗೊಂಡಿದೆ. ಸಾಕ್ಷಿದೂರುದಾರ ಚಿನ್ನಯ್ಯ, ಸೌಜನ್ಯ ಪರ ಹೋರಾಟಗಾರರಾದ ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟಣ್ಣವರ್, ಸುಜಾತ ಭಟ್, ವಿಠಲ್ ಗೌಡ ಹಾಗೂ ಜಯಂತ್ ಟಿ ಅವರನ್ನು ಕುರಿತು ಪ್ರಸ್ತಾಪ ಮಾಡಲಾಗಿದೆ ಎಂದು ತಿಳಿದು ಬಂದಿದೆ.
ಪ್ರಕರಣದಲ್ಲಿ ನ್ಯಾಯಾಲಯಕ್ಕೆ ಸುಳ್ಳು ಸಾಕ್ಷಿ ಹೇಳಿಕೆ ನೀಡಿರುವ ಪ್ರಕರಣದಲ್ಲಿ ಎಸ್ಐಟಿ ಅಧಿಕಾರಿಗಳು, ಸುಮಾರು ಮೂರು ತಿಂಗಳುಗಳ ಕಾಲ ತನಿಖೆ ನಡೆಸಿದ್ದಾರೆ.
ಈಗಾಗಲೇ ತಿಳಿದು ಬಂದಿರುವಂತೆ ರಾಜ್ಯ ಸರಕಾರಕ್ಕೂ ಎಸ್ ಐಟಿ ಮುಖ್ಯಸ್ಥರು ತನಿಖಾ ವರದಿ ಸಲ್ಲಿಸಲಿದ್ದಾರೆ.
ಈ ವರದಿ ಕುರಿತು ಪರಿಶೀಲನೆ ನಡೆಸಿ ಮುಂದಿನ ತನಿಖೆ ಕುರಿತು ನಿರ್ಧೇಶನ ನೀಡುವಂತೆ ನ್ಯಾಯಾಲಯವನ್ನು ಕೇಳಿಕೊಳ್ಳಲಾಗಿದೆ. ಪ್ರಕರಣದ ತನಿಖೆ ಪೂರ್ಣಗೊಂಡ ನಂತರ ಅಂತಿಮ ಚಾರ್ಜ್ ಶೀಟ್ ಅನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗುತ್ತದೆ.
ರಾಜ್ಯ ಸರ್ಕಾರ ಜುಲೈ 20 ರಂದು ಎಸ್‌ಐಟಿ ತಂಡವನ್ನು ರಚಿಸಿತ್ತು.

