ಧರ್ಮಸ್ಥಳದಲ್ಲಿ ಮಹಿಳೆಯರ ಸಾವು, ಭೂ ಕಬಳಿಕೆ, ಬಡ್ಡಿ ಅವ್ಯವಹಾರ, ದಲಿತರಿಗೆ ಆದ ಅನ್ಯಾಯ ಪ್ರತಿಭಟಿಸಿ ಬೆಂಗಳೂರಿನಲ್ಲಿ ಸೆ.25 ರಂದು ಬೃಹತ್ ನ್ಯಾಯ ಸಮಾವೇಶ

Most read

ಬೆಂಗಳೂರು : ಧರ್ಮಸ್ಥಳ ಮತ್ತು ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದಾಖಲಾದ ನೂರಾರು ಅಸಹಜ ಸಾವು, ಅತ್ಯಾಚಾರ, ಹಲ್ಲೆ, ಕೊಲೆ ಯುವತಿಯರ ನಾಪತ್ತೆ ಪ್ರಕರಣಗಳನ್ನು ಕುರಿತು ಎಸ್ಐಟಿ ಸಮಗ್ರ ತನಿಖೆ ನಡೆಸಬೇಕು, ಧರ್ಮಸ್ಥಳದ ಭೂ ಅಕ್ರಮ, ಭೂ ಕಬಳಿಕೆ, ಬಡ್ಡಿ ವ್ಯವಹಾರಗಳನ್ನು ಕುರಿತೂ ತನಿಖೆ ನಡೆಯಬೇಕು. ಪದ್ಮಲತಾ ವೇದವಲ್ಲಿ, ನಾರಾಯಣ ಮಾವುತ, ಯಮುನಾ, ಸೌಜನ್ಯ ಸಾವಿಗೆ ನ್ಯಾಯ ದಗಿಸಬೇಕು. ಧರ್ಮಸ್ಥಳದ ಅಶೋಕನಗರ, ಮುಂಡ್ರುಪಾಡಿಯ ದಲಿತ ಕುಟುಂಬಗಳಿಗೆ ಮೂಲಭೂತಸೌಕರ್ಯ ನೀಡಿ, ಹಕ್ಕು ಪತ್ರ ಒದಗಿಸಿ, ತಲಾ ಒಂದು ಎಕರೆ ಜಮೀನು ನೀಡಬೇಕು ಎಂಬ ಬೇಡಿಕೆಗಳನ್ನು ಮುಂದಿಟ್ಡುಕೊಂಡು ಧರ್ಮಸ್ಥಳ ದೌರ್ಜನ್ಯ ವಿರೋಧಿ ವೇದಿಕೆ ಸಮಾವೇಶ ಹಮ್ಮಿಕೊಂಡಿದೆ.  ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಸೆಪ್ಟೆಂಬರ್ 25 ರಂದು ಬೃಹತ್ ನ್ಯಾಯ ಸಮಾವೇಶ ನಡೆಯಲಿದೆ.

ಕರ್ನಾಟಕದ ಹಲವು ಸಮಾನ ಮನಸ್ಕ ಪಕ್ಷಗಳು, ಎಡ, ದಲಿತ, ಕಾರ್ಮಿಕ, ವಿದ್ಯಾರ್ಥಿ, ಯುವಜನ, ಮಹಿಳಾ, ಸಾಂಸ್ಕೃತಿಕ ಸಂಘಟನೆಗಳ ಜಂಟಿ ಸಹಯೋಗದಲ್ಲಿ ‘ಧರ್ಮಸ್ಥಳ ದೌರ್ಜನ್ಯ ವಿರೋಧಿ ವೇದಿಕೆ’ಯು ಈ ಸಮಾವೇಶವನ್ನು ಆಯೋಜಿಸಿದೆ. ಅಂದು ಬೆಳಿಗ್ಗೆ 10.30 ಕ್ಕೆ ಕಾರ್ಯಕ್ರಮ ಆರಂಭವಾಗಲಿದ್ದು, ದೇಶ ಮತ್ತು ರಾಜ್ಯದ ಹಲವು ಚಿಂತಕರು, ಹೋರಾಟಗಾರರು, ಸಾಹಿತಿಗಳು ಈ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ.

ಹಕ್ಕೊತ್ತಾಯಗಳು : ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಾಖಲಾಗಿರುವ ನೂರಾರು ಅಸಹಜ ಸಾವು, ಕೊಲೆ, ನಾಪತ್ತೆ ಪ್ರಕರಣಗಳನ್ನು ಕುರಿತು ಎಸ್ಐಟಿ ಸಮಗ್ರ ತನಿಖೆ ನಡೆಸಬೇಕು. SIT ತನಿಖೆಯ ಕುರಿತು ನಾಡಿನ ಜನತೆಗೆ ನಂಬಿಕೆ ಹಾಗು ನಿರೀಕ್ಷೆಗಳಿವೆ. ಆದರೂ ಬಿಜೆಪಿ ಹಾಗು ಪಟ್ಟಭದ್ರ ಶಕ್ತಿಗಳು SIT ತನಿಖೆಯನ್ನು ಸ್ಥಗಿತಗೊಳಿಸಲು ಇನ್ನಿಲ್ಲದ ಪ್ರಯತ್ನ ನಡೆಸುತ್ತಿವೆ. SIT ಯನ್ನು ಒತ್ತಡಕ್ಕೆ ಒಳಪಡಿಸಲು, ದೂರುದಾರರು, ಸಾಕ್ಷಿದಾರನ್ನು ಬೆದರಿಸುವ, ತೇಜೋವಧೆ ನಡೆಸಿ ಹಿಮ್ಮಟ್ಟಿಸುವ ಯತ್ನವೂ ಆಗುತ್ತಿದೆ. ಇಂತಹ ಪಿತೂರಿ, ಒತ್ತಡಕ್ಕೆ ಒಳಗಾಗದೆ SIT ಅದರ  ವ್ಯಾಪ್ತಿಯಲ್ಲಿ ಪೂರ್ಣ ಪ್ರಮಾಣದಲ್ಲಿ ಸ್ವತಂತ್ರ ತನಿಖೆ ಸಡೆಸಲು ಅನುವು ಮಾಡಿಕೊಡಬೇಕು.

 ಧರ್ಮಸ್ಥಳ ಗ್ರಾಮದ ಸಿಪಿಐಎಂ ಶಾಖಾ ಕಾರ್ಯದರ್ಶಿ ಎಂ ಕೆ ದೇವಾನಂದರ ಹದಿಹರೆಯದ ಪುತ್ರಿ ಪದ್ಮಲತಾ ಅವರನ್ನು1986 ಡಿಸೆಂಬರ್ ತಿಂಗಳಲ್ಲಿ ಅಪಹರಿಸಿ‌ ಒಂದು ತಿಂಗಳ ನಂತರ ನೆರಿಯಾ ಹೊಳೆಗೆ ಎಸೆದ ಪ್ರಕರಣದಲ್ಲಿ‌ ಈವರೆಗೂ ನ್ಯಾಯ ಸಿಕ್ಕಿಲ್ಲ. ಪದ್ಮಲತಾ ತಂದೆ ಎಂ ಕೆ ದೇವಾನಂದರು ಸ್ಥಳೀಯ ಫ್ಯೂಡಲ್ ಶಕ್ತಿಗಳ ಅಲಿಖಿತ ನಿಯವನ್ನು ಮುರಿದು ಮಂಡಲ ಪಂಚಾಯತ್ ಗೆ ಚುನಾವಣೆಗೆ ಸ್ಪರ್ಧಿಸಿದ್ದು, ಮಲೆಕುಡಿಯರ ಒಕ್ಕಲೆಬ್ಬಿಸುವಿಕೆಯ ವಿರುದ್ಧ ಚಳವಳಿ ಕಟ್ಟಿದ್ದು ಮಗಳ ಕೊಲೆಗೆ ಕಾರಣ ಎಂದು ದಿವಂಗತ ದೇವಾನಂದರು ತಮ್ಮ ಕೊನೆಯುಸಿರಿರುವರೆಗೂ ಪ್ರತಿಪಾದಿಸುತ್ತಾ ಬಂದಿರುತ್ತಾರೆ.

1979 ರಲ್ಲಿ ಧರ್ಮಸ್ಥಳ ಎಸ್ ಡಿ ಎಮ್ ಅನುದಾನಿತ ಹೈಸ್ಕೂಲಿನಲ್ಲಿ ಅಧ್ಯಾಪಕಿ‌ಯಾಗಿದ್ದ ವೇದವಲ್ಲಿ ಅವರು ಅನುಮಾನಾಸ್ಪದವಾಗಿ ಸಾವನ್ನಪ್ಪುತ್ತಾರೆ. ನ್ಯಾಯಯುತವಾಗಿ ದೊರಕಬೇಕಾದ ಮುಖ್ಯೋಪಾದ್ಯಾಯಿನಿ ಹುದ್ದೆಗೆ ಹಕ್ಕು ಮಂಡಿಸಿದ್ದಕ್ಕಾಗಿ ಊರಿನ ಫ್ಯೂಡಲ್ ಶಕ್ತಿಗಳು ವೇದವಲ್ಲಿ ಅವರನ್ನು ಬೆಂಕಿ ಹಚ್ಚಿ ಕೊಲೆ ಮಾಡಿದ್ದಾರೆ ಎಂದು ಅವರ  ಕುಟುಂಬದವರು ಆರೋಪಿಸುತ್ತಲೇ ಬಂದಿದ್ದಾರೆ.

 2012 ಸೆಪ್ಟಂಬರ್ ನಲ್ಲಿ ಧರ್ಮಸ್ಥಳದಲ್ಲಿ ಆನೆಮಾವುತ ಆಗಿದ್ದ ನಾರಾಯಣ ಹಾಗೂ ಅವರ ಸಹೋದರಿಯನ್ನು ಕಲ್ಲಿನಿಂದ ಜಜ್ಜಿ ಕೊಲೆ ಮಾಡಲಾಗಿದೆ. ಆ ಕೊಲೆ ಪ್ರಕರಣವನ್ನು ಪೊಲೀಸ್ ಇಲಾಖೆ ಪತ್ತೆಯಾಗದ ಪ್ರಕರಣ ಎಂದು ವರದಿ ನೀಡಿ ಮುಚ್ಚಿಹಾಕಿರುತ್ತದೆ.  ಸಧ್ಯ ಮಾವುತ ನಾರಾಯಣ ವಾಸ ಇದ್ದ ಜಮೀನಿನಲ್ಲಿ ಈಗ ಪ್ರಭಾವಿಗಳ ಭವ್ಯ ಕಟ್ಟಡ ತಲೆ ಎತ್ತಿದೆ.

2012 ರಲ್ಲಿ ಅತ್ಯಾಚಾರಕ್ಕೆ ಒಳಗಾಗಿ ಕೊಲೆಯಾದ ಧರ್ಮಸ್ಥಳದ ವಿದ್ಯಾರ್ಥಿನಿ ಸೌಜನ್ಯ ಪ್ರಕರಣದಲ್ಲಿ ಸಿಬಿಐ ಸಲ್ಲಿಸಿದ ಆರೋಪಪಟ್ಟಿಯಲ್ಲಿ‌ ಆರೋಪಿಯಾಗಿದ್ದ ಸ‌ಂತೋಷ್ ರಾವ್ ರನ್ನು ನ್ಯಾಯಾಲಯ ನಿರಪರಾಧಿ‌ ಎಂದು ಬಿಡುಗಡೆಗೊಳಿಸಿದೆ. ಆ ಮೂಲಕ ಸೌಜನ್ಯ ಕುಟುಂಬ ಹಾಗು ಜನಾಭಿಪ್ರಾಯಕ್ಕೆ ನ್ಯಾಯಲಯದಲ್ಲಿ  ಮನ್ನಣೆ ದೊರಕಿದೆ. ಅಂದಿನಿಂದ ಸೌಜನ್ಯ ಕುಟುಂಬ ಹಾಗು ಜನ ಚಳವಳಿಗಳು, ನಾಗರಿಕ ಸಮಾಜ ಸೌಜನ್ಯ ಪ್ರಕರಣದ ಮರು ತನಿಖೆಗೆ ಬಲವಾದ ಆಗ್ರಹ ಮಾಡುತ್ತಲೇ ಬಂದಿವೆ. ಈ ಎಲ್ಲಾ ಅಪಹರಣ, ಅತ್ಯಾಚಾರ, ಕೊಲೆಪ್ರಕರಣಗಳನ್ನು ಈಗ ರಚಿಸಿರುವ SIT ತನಿಖೆಯ ವ್ಯಾಪ್ತಿಗೆ ತರಬೇಕು. ಅದು ಸಾಧ್ಯವಿಲ್ಲದಿದ್ದರೆ  ಪತ್ತೆಯಾಗದ ಈ ಪ್ರಕರಣಗಳ ತನಿಖೆಗೆ ಪ್ರತ್ಯೇಕ ತನಿಖಾ ತಂಡ ರಚಿಸಬೇಕು.

ಧರ್ಮಸ್ಥಳದಲ್ಲಿ ನೂರಾರು ದಲಿತರು ಸ್ವಚ್ಚತಾ ಕಾರ್ಮಿಕರಾಗಿ ತಲೆತಲಾಂತರಗಳಿಂದ ದುಡಿಯುತ್ತಿದ್ದಾರೆ. ಈ ರೀತಿ ದುಡಿಯುವ ಸ್ವಚ್ಚತಾ ಕಾರ್ಮಿಕರಿಗೆಂದೇ ಧರ್ಮಸ್ಥಳದಲ್ಲಿ ಅಶೋಕ ನಗರ ದಲಿತ ಕಾಲನಿಯನ್ನು ನಿರ್ಮಿಸಲಾಗಿದೆ. ತಲೆತಲಾಂತರಗಳಿಂದ ಅಶೋಕನಗರದಲ್ಲೇ ವಾಸಿಸುತ್ತಿದ್ದರೂ ಈ ಕ್ಷಣದವರೆಗೂ ಮನೆಯ ಹಕ್ಕು ಪತ್ರ ನೀಡಲಾಗಿಲ್ಲ. ಸ್ವಚ್ಚತಾ ಕಾರ್ಮಿಕರು ಕುಸಿದ, ಸೋರುತ್ತಿರುವ ಮನೆಗಳಲ್ಲಿ ಹೀನಾಯ ಸ್ಥಿತಿಯಲ್ಲಿ ವಾಸಿಸುತ್ತಿದ್ದಾರೆ. ಸ್ವಚ್ಚತಾ ಕಾರ್ಯ ಮಾಡುವ ದಲಿತರಿಗೆ ಕಾರ್ಮಿಕ ಕಾಯ್ದೆಯ ಪ್ರಕಾರ ಕನಿಷ್ಠ ಸಂಬಳವನ್ನೂ ನೀಡುತ್ತಿಲ್ಲ.

ಆದ್ದರಿಂದ ಧರ್ಮಸ್ಥಳ ಅಶೋಕನಗರದ 128 ದಲಿತ ಕುಟುಂಬಗಳು, ಮುಂಡ್ರುಪಾಡಿಯ 42 ದಲಿತ ಕುಟುಂಬಗಳು ಮತ್ತು ಗ್ರಾಮದ ಇತರ ದಲಿತ ಕುಟುಂಬಗಳಿಗೆ ತಲಾ ಒಂದು ಎಕರೆ ಸರಕಾರಿ ಭೂಮಿಯನ್ನು ಸರ್ಕಾರ ಕೊಡಿಸಬೇಕು.

 ಧರ್ಮಸ್ಥಳ ಹಾಗು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭೂಕಬಳಿಕೆ ಪ್ರಕರಣಗಳು ನಡೆದಿರುವ ಆರೋಪ ನಾಲ್ಕೈದು ದಶಕಗಳಿಂದ ವ್ಯಾಪಕವಾಗಿ ಕೇಳಿ ಬರುತ್ತಿದೆ. ಸರಕಾರಿ ಜಮೀನುಗಳ ಕಬಳಿಕೆ, ದಲಿತರು, ಆದಿವಾಸಿಗಳು, ಹಿಂದುಳಿದವರು ಸಹಿತ ದುರ್ಬಲ ವಿಭಾಗದ ಜನರನ್ನು ಬಲವಂತವಾಗಿ ಒಕ್ಕಲೆಬ್ಬಿಸಿದ, ಅವರ ಜಮೀನು ಸ್ವಾಧೀನ ಪಡಿಸಿದ ಆರೋಪಗಳು ಹಲವಾರು‌ ಇವೆ. ಭೂಸುಧಾರಣಾ ಕಾಯ್ದೆಯಲ್ಲಿ ಕೃಷಿಕರಿಗೆ ನೀಡಬೇಕಿದ್ದ ಜಮೀನುಗಳನ್ನು ಕಸಿದುಕೊಳ್ಳಲಾಗಿದೆ.

ಗ್ರಾಮೀಣಾಭಿವೃದ್ದಿ ಯೋಜನೆಯ ಹೆಸರಿನಲ್ಲಿ ಮೈಕ್ರೊ ಫೈನಾನ್ಸ್ ನಡೆಸಿ ಸಾಲ ನೀಡಿಕೆ, ವಸೂಲಾತಿ ವಿಧಾನದಲ್ಲಿ ಕಾನೂನು, ನಿಯಮಗಳನ್ನು ಉಲ್ಲಂಘಿಸುವುದು, ತೀರಾ ಅವಮಾನಕಾರಿ, ಅಮಾನವೀಯವಾಗಿ ವಸೂಲಾತಿ ನಡೆಸುವ ದೂರುಗಳು ರಾಜ್ಯದ ಹಲವು ಭಾಗಗಳಲ್ಲಿ ಕೇಳಿಬಂದಿವೆ.  ವಸೂಲಾತಿಯ ಸಂದರ್ಭದ ಅಪಮಾನ, ಹಿಂಸೆ ಭರಿಸಲಾಗದೆ ಆತ್ಮಹತ್ಯೆಗಳು ಘಟಿಸಿರುವುದು, ಮರ ಮಟ್ಟು ಸಹಿತ ಅವರ ಸ್ವತ್ತುಗಳನ್ನು ಬಲವಂತವಾಗಿ ಸ್ವಾಧೀನ ಪಡಿಸಿರುವ ಪ್ರಕರಣಗಳು ಹತ್ತಾರು ಸಂಖ್ಯೆಯಲ್ಲಿ ನಡೆದಿದೆ.

ಹಾಗಾಗಿ, ಧರ್ಮಸ್ಥಳ ಠಾಣೆಯಲ್ಲಿ ದಾಖಲಾದ ನೂರಾರು ಅತ್ಯಾಚಾರ, ಅಸಹಜ ಸಾವು, ಕೊಲೆ ಪ್ರಕರಣಗಳನ್ನು ಎಸ್ಐಟಿ ರಚನೆಯ ಸಂಬಂಧ  ಹೊರಡಿಸಲಾದ ಆದೇಶದಲ್ಲಿ ಇರುವಂತೆಯೇ ಪರಿಪೂರ್ಣವಾದ ತನಿಖೆಗೆ ಒಳಪಡಿಸಬೇಕು. ಪದ್ಮಲತಾ, ವೇದದಲ್ಲಿ, ಮಾವುತ ನಾರಾಯಣ, ಯಮುನ, ಸೌಜನ್ಯ ಕೊಲೆ ಪ್ರಕರಣಗಳು, ಭೂಕಬಳಿಕೆ, ಮೈಕ್ರೊ ಫೈನಾನ್ಸ್ ದೌರ್ಜನ್ಯಗಳು, ದಲಿತರ ಮೀಸಲು ಭೂಮಿ ಕಬಳಿಕೆ, ಆರ್ಥಿಕ ಅಪರಾಧದ ಆರೋಪದ ಪ್ರಕರಣಗಳನ್ನು ಈಗ ರಚಿಸಲಾಗಿರುವ SIT ಗೆ ವಹಿಸಲು ಸಮಸ್ಯೆಗಳಿದ್ದಲ್ಲಿ ಪ್ರತ್ಯೇಕವಾದ ವಿಶೇಷ ತನಿಖಾ ತಂಡವನ್ನು ರಚಿಸಿ ತನಿಖೆಗೆ ಒಳಪಡಿಸಬೇಕು ಎಂದು ಆಗ್ರಹಿಸಲು ‘ನ್ಯಾಯ ಸಮಾವೇಶ’ ನಡೆಯುತ್ತಿದೆ ಎಂದು ಧರ್ಮಸ್ಥಳ ದೌರ್ಜನ್ಯ ವಿರೋಧಿ ವೇದಿಕೆ ಆಗ್ರಹಪಡಿಸಿದೆ.

More articles

Latest article