ಬೆಂಗಳೂರು: ಧರ್ಮಸ್ಥಳದಲ್ಲಿ ಹತ್ಯೆಗೀಡಾದ ಮಹಿಳೆಯರಿಗೆ ನ್ಯಾಯ ಒದಗಿಸಲು ಹೋರಾಟ ನಡೆಸುತ್ತಿರುವ “ಕೊಂದವರು ಯಾರು?” ತಂಡವು ಇಂದು ಸಾಂಸ್ಕೃತಿಕ ಅಭಿವ್ಯಕ್ತಿ, ತಮಟೆ ವಾದನ, ಹಾಡು, ಕಿರುಪುಸ್ತಕ ಬಿಡುಗಡೆ, ಕಾರ್ಯಕ್ರಮ ಹಮ್ಮಿಕೊಂಡಿತ್ತು.
ಗಾಂಧಿ ಭವನದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಸಹಿ ಸಂಗ್ರಹವನ್ನು ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಮೂಲಕ ಸರ್ಕಾರಕ್ಕೆ ಸಹಿ ಸಂಗ್ರಹವನ್ನು ಸಲ್ಲಿಸಲಾಯಿತು. ಕೇವಲ ಹತ್ತು ದಿನಗಳಲ್ಲಿ 20 ಸಾವಿರ ಸಹಿ ಮಾಡಿರುವುದು ಈ ಹೋರಾಟ ಕುರಿತು ಇರುವ ಜಾಗೃತಿಯನ್ನು ತೋರಿಸುತ್ತದೆ.
ಈ ಸಂದರ್ಭದಲ್ಲಿ ಮಾತನಾಡಿದ ನಾಗಲಕ್ಷ್ಮೀ ಅವರು, “ಹೆಣ್ಣು ಮಕ್ಕಳು ಎಂತಹ ಕಷ್ಟ ಪಟ್ಟರೂ, ಅವಮಾನ ಅನುಭವಿಸಿದರೂ, ಸವಾಲು ಎದುರಾದರೂ, ಅಪಹಾಸ್ಯಕ್ಕೆ ಒಳಗಾದರೂ ಎದೆಗುಂದಬಾರದು. ಯಾವುದೇ ಹೋರಾಟಕ್ಕೆ ನೀಡುವ ಘೋಷಣೆ ಬಹಳ ದೊಡ್ಡ ಪಾತ್ರವನ್ನು ವಹಿಸುತ್ತದೆ. ಕೊಂದವರು ಯಾರು? ಎಂಬ ಎರಡು ಪದ ಕಾಣೆಯಾದವರ ನ್ಯಾಯಕ್ಕೆ ಕೂಗುತ್ತಿರುವ ಅಷ್ಟೂ ಜೀವಗಳು ಹೇಳುತ್ತಿರುವ ಭಾಸ ಅಡಗಿದೆ” ಎಂದು ತಿಳಿಸಿದರು.
” ಎಸ್‌ಐಟಿ ತನಿಖೆ ದಾರಿ ತಪ್ಪಿದಾಗ ನಾವು ಮತ್ತೆ ಸರ್ಕಾರಕ್ಕೆ ಪತ್ರ ಬರೆಯಬೇಕಾಯಿತು. ಸರ್ಕಾರಕ್ಕೆ ಮತ್ತೆ ಬುರುಡೆ ಚಿನ್ನಯ್ಯನ ವಿಚಾರದ ತನಿಖೆಗಾಗಿ ಪತ್ರ ಬರೆದಿದ್ದು ಅಲ್ಲ. ನಾವು 20 ವರ್ಷ ನೂರಾರು ಮಕ್ಕಳು ಕಾಣೆಯಾದರಲ್ಲ, ಅದರ ತನಿಖೆಗೆ ಎಸ್‌ಐಟಿ ಕೋರಿದ್ದು. ನಾಪತ್ತೆಯಾದ ಹೆಣ್ಣು ಮಕ್ಕಳ ಬಗ್ಗೆ ನಿಜವಾಗಿ ತನಿಖೆ ನಡೆಯಬೇಕಾಗಿದೆ. ನಾನು ಪತ್ರ ಬರೆದಾಗ ನನ್ನ ಎಡಪಂಥೀಯಳು ಎಂದು ಕರೆದರು. ಈ ಮೂಲಕ ಜನರ ನಡುವೆ ವಿಷ ಬೀಜ ಬಿತ್ತಲಾಗುತ್ತಿದೆ” ಎಂದು ದೂರಿದರು.
“ಕೊಲೆಯಾಗಿರುವ, ಕಾಣೆಯಾಗಿರುವ, ಅತ್ಯಾಚಾರಕ್ಕೆ ಒಳಗಾಗಿದ್ದು ಹಿಂದೂ ಹೆಣ್ಣು ಮಕ್ಕಳು ಅಲ್ಲವೇ? ಹೆಣ್ಣು ಮಕ್ಕಳಿಗೆ ಯಾವುದೇ ಜಾತಿ, ಧರ್ಮ, ಮತವಿಲ್ಲ. ಹೆಣ್ಣೇ ಜಾತಿ, ಧರ್ಮ, ಮತ, ಹೆಣ್ಣೇ ಎಲ್ಲ. ಯಾವ ಧರ್ಮದಲ್ಲಿ ಹೆಣ್ಣಿನ ಮೇಲೆ ದೌರ್ಜನ್ಯವಾಗುವುದಿಲ್ಲ? ನಿಮ್ಮ ಧರ್ಮದಲ್ಲಿ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ, ದೌರ್ಜನ್ಯ, ವರದಕ್ಷಿಣೆ ಕಿರುಕುಳ ನಡೆಯುತ್ತಿಲ್ಲವೇ” ಎಂದು ಪ್ರಶ್ನಿಸಿದರು.
“ಈ ಹೋರಾಟದಿಂದ ನಾನು ಕಲಿಯುವುದು ಬಹಳಷ್ಟಿದೆ. ನೀವು ಎಡ-ಬಲ ಎಂದು ಕರೆದರೂ ನಾನು ನೊಂದ ಅಸಹಾಯಕ ಹೆಣ್ಣು ಮಕ್ಕಳ ಪರವಾಗಿ ಧ್ವನಿ ಎತ್ತುತ್ತೇನೆ. ಮಹಿಳೆ ಬಲವಾದಾಗ ರಾಷ್ಟ್ರ ಬಲವಾಗುತ್ತದೆ. ಭಾರತವನ್ನು ಭಾರತಾಂಬೆ ಎನುತ್ತೀರಿ, ಕರ್ನಾಟಕವನ್ನು ಭುವನೇಶ್ವರಿ ಎನ್ನುತ್ತೀರಿ. ಹಾಗಿರುವಾಗ ಮಹಿಳೆಯರು ಅಳುವುದನ್ನು ನೋಡಲಾಗದು. ಗೌರಿ ಸೇರಿದಂತೆ ನೊಂದ, ದೌರ್ಜನ್ಯದಿಂದ ಮೃತರಾದ ಎಲ್ಲರ ಆತ್ಮಕ್ಕೆ ಶಾಂತಿ ಸಿಗಲಿ” ಎಂದರು.
“ಒಬ್ಬ ಮಹಿಳೆ ಹೋರಾಡಿದರೆ ಅದು ಕಥೆಯಾಗುತ್ತದೆ. ಮಹಿಳೆಯರೆಲ್ಲರೂ ಹೋರಾಡಿದರೆ ಅದು ಕ್ರಾಂತಿಯಾಗುತ್ತದೆ. 20 ಸಾವಿರ ಸಹಿ ಸಂಗ್ರಹ ಸಾಲದು. ಪ್ರತಿಯೊಂದು ಕಾಲೇಜು, ವಿಶ್ವವಿದ್ಯಾಲಯ, ಮೊಹಲ್ಲಾ, ಗಲ್ಲಿಯಲ್ಲಿ ಕ್ರಾಂತಿ ಪ್ರಾರಂಭವಾಗಲಿ. ಇದು ಬರೀ ಮಹಿಳೆಯರ ಹೋರಾಟವಲ್ಲ, ಇದು ಮಾನವೀಯತೆಯ ಹೋರಾಟ” ಎಂದೂ ಅವರು ಹೇಳಿದರು.
ಪ್ರಾಸ್ತವಿಕವಾಗಿ ಮಾತನಾಡಿದ ನಾವೆದ್ದು ನಿಲ್ಲದಿದ್ದರೆ ಸಂಘಟನೆಯ ಮಮತಾ ಯಜಮಾನ್ ಅವರು, “ಮಹಿಳಾ ಹಕ್ಕುಗಳು ಕೂಡಾ ಮಾನವ ಹಕ್ಕುಗಳೇ. ನನ್ನ ಸಹಿ ನನ್ನ ದನಿಯಾಗಿದೆ. ಒಂದೊಂದು ಸಹಿಗೂ ಬೆಲೆಯಿದೆ. ಎಸ್‌ಐಟಿಯ ಸಮಗ್ರ ತನಿಖೆಯಾಗಬೇಕು ಎಂಬುದು ನಮ್ಮೆಲ್ಲರ ಆಗ್ರಹ. ಕಳೆದ 20 ವರ್ಷಗಳಿಂದ ಹೆಣ್ಣು ಮಕ್ಕಳ ಮೇಲೆ ಆಗಿರುವ ದೌರ್ಜನ್ಯಕ್ಕೆ ನ್ಯಾಯಕ್ಕಾಗಿ ಎಸ್‌ಐಟಿ ಸಮಗ್ರ ತನಿಖೆ ನಡೆಸಲು ಸರ್ಕಾರ ಆದೇಶಿಸಬೇಕು” ಎಂದು ಆಗ್ರಹಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಕವಿತಾ ಲಂಕೇಶ್, “ದೇಶಕ್ಕೆ ಸ್ವಾತಂತ್ರ್ಯ ಲಭಿಸಿ 78 ವರ್ಷಗಳಾಗಿವೆ. ಆದರೆ ನಾವು ಇಂದಿಗೂ ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯಗಳ ಬಗ್ಗೆಯೇ ಮಾತನಾಡುವಂತಹ ಸ್ಥಿತಿಯಿದೆ. ಚಲನಚಿತ್ರ ನಟಿ ಶೃತಿ ಹರಿಹರನ್ ಲೈಂಗಿಕ ದೌರ್ಜನ್ಯದ ವಿರುದ್ಧ ದೂರು ನೀಡಿದಾಗ ಅದಕ್ಕೆ ಮೋದಿ ವಿರೋಧಿ, ಎಡಪಂಥೀಯರ ಹುನ್ನಾರ ಎಂಬ ಕಲ್ಪನೆ ಕಟ್ಟಲಾಯಿತು. ಗೌರಿ ಲಂಕೇಶ್ ಮೇಲೆಯೂ ಇದೇ ರೀತಿ ಅನ್ಯಾಯವಾಯಿತು, ಕೊಲೆಯಾಯಿತು. ಇತ್ತೀಚೆಗೆ ನಟಿ ರಮ್ಯಾ ಅವರನ್ನೂ ಟ್ರೋಲ್ ಮಾಡಲಾಯಿತು. ಅವರು ದೂರು ನೀಡಿದರು. ಇವೆಲ್ಲವೂ ಮಹಿಳೆಯರು ಧ್ವನಿ ಎತ್ತಲು ಸ್ಫೂರ್ತಿಯಾಗುತ್ತದೆ. ಸೌಜನ್ಯ, ಆಸೀಫಾ, ಫಾತಿಮಾ- ಹೀಗೆ ಜಾತಿ ಧರ್ಮ ಇಲ್ಲದೆ ಮಹಿಳೆಯರ ಹೋರಾಟಕ್ಕೆ ನಿಲ್ಲೋಣ ನಿಮ್ಮ ಜತೆ ನಾನು ಎಂದಿಗೂ ಇರುತ್ತೇನೆ” ಎಂದು ಭರವಸೆ ನೀಡಿದರು.
ಸಹಿ ಸಂಗ್ರಹ ಕುರಿತು ಮಾತನಾಡಿದ ಮಹಿಳಾಪರ ಹೋರಾಟಗಾರ್ತಿ ಗೌರಮ್ಮ, “ಕೊಲೆಯಾದಾಗ ಕೊಂದವರು ಯಾರು ಎಂಬ ಉತ್ತರ ಸಿಗಬೇಕು. ಆದರೆ ಧರ್ಮಸ್ಥಳದಲ್ಲಿ ಹತ್ತಾರು ವರ್ಷವಾದರೂ ಉತ್ತರ ಸಿಗಲಿಲ್ಲ. ಕನ್ನಡ ನಾಡಿನಲ್ಲಿ ನ್ಯಾಯ ಉಳಿದಿದೆ ಎಂಬ ಭರವಸೆಯಿಂದ ಕರ್ನಾಟಕ ರಾಜ್ಯೋತ್ಸವ ದಿನದಿಂದ ಸಹಿ ಸಂಗ್ರಹ ಆರಂಭಿಸಿದೆವು. ಸರ್ಕಾರಕ್ಕೆ ನಮ್ಮ ಧ್ವನಿ ಮುಟ್ಟಿಸಲು ಈ ಹೋರಾಟ. ಎಸ್‌ಐಟಿ ತನಿಖೆಗಾಗಿ ಒತ್ತಾಯಿಸಿದ ಫಲವಾಗಿ ಎಸ್‌ಐಟಿ ರಚನೆಯಾಗಿದೆ. ನೋವಿನಲ್ಲಿರುವವರಿಗೆ ದನಿಯಾಗಲು ಸಹಿ ಸಂಗ್ರಹ ನಡೆಸಿದ್ದೇವೆ” ಎಂದು ತಿಳಿಸಿದರು.
ಹಾಗೆಯೇ, ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಸಹಿ ಸಂಗ್ರಹ ಪ್ರತಿ ಸಲ್ಲಿಸಲಾಗಿದೆ. ಮಹಿಳೆಯರಿಗಿಂತ ಹೆಚ್ಚು ಪುರುಷರು ಸಹಿ ಮಾಡಿದ್ದಾರೆ. ಸರ್ಕಾರಿ ನೌಕರರು, ಪೊಲೀಸರೂ ಸಹಿ ಹಾಕಿದ್ದಾರೆ. ಸಂವಿಧಾನದ ಮೇಲೆ ನಂಬಿಕೆಯಿದೆ. ನ್ಯಾಯ ಸಿಗುವವರೆಗೂ ನಮ್ಮ ಹೋರಾಟ ಮುಂದುವರೆಯಲಿದೆ” ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲೇ ಮಹಿಳಾ ಆಯೋಗದ ಅಧ್ಯಕ್ಷರು ಪುಸ್ತಕ ಬಿಡುಗಡೆ ಮಾಡಿದರು. ಕಾದಂಬರಿಗಾರ್ತಿ ಚಂಪಾವತಿ ಎಚ್.ಎಸ್ ಕಿರುಹೊತ್ತಿಗೆಯ ಪರಿಚಯ ನೀಡಿ, “ಈ ಕಿರುಪುಸ್ತಕ ಸ್ತ್ರೀವಾದಿ ನೆಲೆಗಟ್ಟಿನಲ್ಲಿ ಕಟ್ಟಲಾಗಿದೆ. ಮೊದಲ ಅಧ್ಯಾಯದಲ್ಲಿ ದೌರ್ಜನ್ಯಗಳ ಇತಿಹಾಸ, ಮೈಕ್ರೋಫೈನಾನ್ಸ್ ಧಾರ್ಮಿಕ-ರಾಜಕೀಯ ಅಧ್ಯಾಯ ಈ ಪುಸ್ತಕದಲ್ಲಿದೆ. ಎಸ್‌ಐಟಿ ರಚನೆ, ಮಾಧ್ಯಮಗಳ ಬಗ್ಗೆ, ಕೊಂದವರು ಯಾರು? ಆಂದೋಲನ ಹುಟ್ಟಿಕೊಂಡ ಬಗ್ಗೆ ವಿವರಗಳಿವೆ” ಎಂದು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ದು. ಸರಸ್ವತಿ ಅವರ ನಾಟಕ ಪ್ರದರ್ಶನ ನಡೆಯಿತು. ಲೇಖಕಿ ವಿ. ಗಾಯತ್ರಿ, ಬೆಂಗಳೂರಿನ ಮೀನಾಕ್ಷಿ, ಬಸಮ್ಮ, ಉಮಾ, ಮೈಸೂರಿನ ಮಹಾದೇವಮ್ಮ, ಕೋಲಾರದ ಲಕ್ಷ್ಮೀ, ಮಂಡ್ಯ ಪೂರ್ಣಿಮಾ, ದಾವಣಗೆರೆಯ ಜಬೀನಾ ಸಹಿ ಸಂಗ್ರಹದ ವೇಳೆ ಜನರ ಅಭಿಪ್ರಾಯ ಕುರಿತು ತಮ್ಮ ಅನುಭವಗಳನ್ನು ಹಂಚಿಕೊಂಡರು.
ಕೊಂದವರು ಯಾರು? ಅಭಿಯಾನದ ಕುರಿತು:
ಕಳೆದ ಮೂರು, ನಾಲ್ಕು ದಶಕಗಳಿಂದ ಮಹಿಳೆಯರ ಹಕ್ಕುಗಳು ಮತ್ತು ಘನತೆಗಾಗಿ ನಿರಂತರ ಕೆಲಸ ಮಾಡಿಕೊಂಡು ಬರುತ್ತಿರುವ ಮಹಿಳಾ ಸಂಘಟನೆಗಳು ಮತ್ತು ಮಹಿಳಾ ಸಮಾನತೆಯಲ್ಲಿ ನಂಬಿಕೆ ಇರಿಸಿದ ವ್ಯಕ್ತಿಗಳೆಲ್ಲರೂ ಸೇರಿಕೊಂಡು ‘ಕೊಂದವರು ಯಾರು?ʼ ಎಂಬ ಆಂದೋಲನವನ್ನು ಈ ವರ್ಷದ ಆಗಸ್ಟ್ ತಿಂಗಳಿನಲ್ಲಿ ಆರಂಭಿಸಲಾಗಿದೆ.
ಎಸ್‌ಐಟಿ ರಚನೆಯ ಆದೇಶವು ಸ್ಪಷ್ಟವಾಗಿ ಸೂಚಿಸುವಂತೆ, ತನಿಖೆಯು ಧರ್ಮಸ್ಥಳದಲ್ಲಿ ಈ ಹಿಂದೆ ನಡೆದ ಮಹಿಳೆಯರ ನಾಪತ್ತೆ, ಅಸಹಜ ಸಾವು, ಅತ್ಯಾಚಾರ, ಕೊಲೆಗಳನ್ನೂ ಒಳಗೊಂಡಂತೆ, ಎಲ್ಲ ಬಗೆಹರಿಯದ ಪ್ರಕರಣಗಳ ಸಮಗ್ರ ತನಿಖೆಯನ್ನು ಕೈಗೆತ್ತಿಕೊಳ್ಳಬೇಕೆಂದು ಆಗ್ರಹಿಸುವುದು, ಈವರೆಗೆ ಧರ್ಮಸ್ಥಳದ ಸುತ್ತಮುತ್ತ ನಡೆದಿರುವ ಮಹಿಳೆಯರ ಮೇಲಿನ ಘೋರವಾದ ದೌರ್ಜನ್ಯ ಪ್ರಕರಣಗಳಲ್ಲಿ ನಿಜವಾದ ಅಪರಾಧಿಗಳನ್ನು ಕಂಡುಹಿಡಿಯಲಾರದೆ ಹೋದ ವ್ಯವಸ್ಥೆಯೊಳಗಿನ ಲೋಪದೋಷಗಳೆಡೆಗೆ ಬೆಳಕು ಚೆಲ್ಲಿ, ಅವುಗಳನ್ನು ಪ್ರಶ್ನಿಸುವುದು ಈ ಸಂದರ್ಭದಲ್ಲಿ ನಾವು ನೊಂದ ಕುಟುಂಬಗಳ ಜೊತೆಗೆ ನಿಲ್ಲುವುದು ಸಂಘಟನೆಯ ಉದ್ದೇಶವಾಗಿದೆ.
ಹೀಗೆ ಆರಂಭವಾದ ಈ ಆಂದೋಲನದ ಭಾಗವಾಗಿ, ಆಗಸ್ಟ್ ತಿಂಗಳಿನಿಂದ ರಾಜ್ಯದಾದ್ಯಂತ ಅನೇಕ ಚಟುವಟಿಕೆಗಳನ್ನು ನಡೆಸುತ್ತಾ ಬಂದಿದ್ದೇವೆ. ನವೆಂಬರ್ 1ರ ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ, ರಾಜ್ಯದಾದ್ಯಂತ ಸಹಿ ಸಂಗ್ರಹ ಹಾಗೂ ಪೋಸ್ಟ್ ಕಾರ್ಡ್ ಅಭಿಯಾನವನ್ನು ಆರಂಭಿಸಿ, ಈಗಾಗಲೇ ಕಾಲೇಜುಗಳು, ಕಾರ್ಮಿಕರ ಸಂಘಗಳು, ಸ್ವಸಹಾಯ ಸಂಘಗಳು, ಹಳ್ಳಿಗಳು ಮೊದಲಾದ ಕಡೆಗಳಲ್ಲಿ ಜನರೊಂದಿಗೆ ಈ ಕುರಿತು ಸಂವಾದ ನಡೆಸುತ್ತಾ, ಸಹಿಗಳನ್ನು ಸಂಗ್ರಹಿಸಲಾಗಿದೆ.

