ಮಂಗಳೂರು: ಧರ್ಮಸ್ಥಳದಲ್ಲಿ ನಿನ್ನೆ ನಡೆದ ಅಹಿತಕರ ಘಟನೆಗಳಿಗೆ ಸಂಬಂಧಪಟ್ಟಂತೆ ನಾಲ್ಕು ಹಾಗೂ ಬೆಳ್ತಂಗಡಿ ಠಾಣೆಯ ವ್ಯಾಪ್ತಿಯ ಉಜಿರೆಯಲ್ಲಿ ನಡೆದ ಅಹಿತಕರ ಘಟನೆ ಸಂಬಂಧ ಮೂರು ಪ್ರಕರಣಗಳು ದಾಖಲಾಗಿವೆ ಎಂದು ಜಿಲ್ಲಾ ಪೊಲೀಸ್ ಇಲಾಖೆ ತಿಳಿಸಿದೆ.
ಧರ್ಮಸ್ಥಳ ಗ್ರಾಮದ ಪಾಂಗಾಳ ರಸ್ತೆಯ ಸಮೀಪ ಯೂಟ್ಯೂಬರ್ ಗಳ ಮೇಲೆ ನಡೆದ ಹಲ್ಲೆ ಸಂಬಂಧ ಕುಡ್ಲ ರಾಂಪೇಜ್’ ಯೂಟ್ಯೂಬ್ ಚಾನೆಲ್ ನ ಮುಖ್ಯಸ್ಥ ಅಜಯ್ ಅಂಚನ್ ಧರ್ಮಸ್ಥಳ ಠಾಣೆಗೆ ದೂರು ನೀಡಿದ್ದಾರೆ.
ಅಜಯ್ ತಮ್ಮ ದೂರಿನಲ್ಲಿ ಧರ್ಮಸ್ಥಳದ ಪಾಂಗಾಳ ರಸ್ತೆ ಹತ್ತಿರ ಒಬ್ಬರ ವಿಡಿಯೊ ಹೇಳಿಕೆ ಪಡೆಯುತ್ತಿದ್ದಾಗ ಸುಮಾರು 15 ರಿಂದ 50 ಜನರ ಕಿಡಿಗೇಡಿಗಳ ಗುಂಪು ಆಗಮಿಸಿ ನನಗೆ ಮತ್ತು ನನ್ನ ತಂಡಕ್ಕೆ ಬೆದರಿಕೆ ಒಡ್ಡಿದ್ದಾರೆ. ನನಗೆ, ನನ್ನ ಕ್ಯಾಮೆರಾ ಮ್ಯಾನ್ ಸುಹಾಸ್, ಸಂಚಾರಿ ಸ್ಟುಡಿಯೊ ಯೂಟ್ಯೂಬ್ ಚಾನೆಲ್ ನ ಸಂತೋಷ್ ಹಾಗೂ ಯುನೈಟೆಡ್ ಮೀಡಿಯಾ ಯೂಟ್ಯೂಬ್ ಚಾನೆಲ್ ನ ಅಭಿಷೇಕ್ ಅವರ ಮೇಲೆ ಹಲ್ಲೆ ನಡೆಸಿ ಜೀವ ಬೆದರಿಕೆ ಒಡ್ಡಿದ್ದಾರೆ. ನನ್ನ ವಿಡಿಯೊ ಕ್ಯಾಮೆರಾವನ್ನು ಬೀದಿಗೆಸೆದು ಹಾನಿಗೊಳಿಸಿ ಅದರಲ್ಲಿದ್ದ ಮೆಮೊರಿ ಕಾರ್ಡ್ ಅನ್ನು ಕಿತ್ತುಕೊಂಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಈ ದೂರು ಕುರಿತು ಧರ್ಮಸ್ಥಳ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆಯ(ಬಿಎನ್ಎಸ್) ಸೆಕ್ಷನ್ 189(2), 191(2), 115(2), 324(5) , 352, 307 ಜೊತೆಗೆ 190 ಅಡಿ ಪ್ರಕರಣದ ದಾಖಲಾಗಿದೆ.
ಇಲ್ಲಿ ಘರ್ಷಣೆ ನಡೆಯುತ್ತಿರುವ ಮಾಹಿತಿ ತಿಳಿದು ಧರ್ಮಸ್ಥಳ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಸ್ಥಳಕ್ಕೆ ಧಾವಿಸಿದ್ದರು. ಅಲ್ಲಿ ಗುಂಪುಗೂಡಿದ್ದವರಿಗೆ ಸ್ಥಳದಿಂದ ತೆರಳುವಂತೆ ಸೂಚಿಸಿದ್ದರು. ಆದರೂ, ಅಲ್ಲಿದ್ದವರು ಈ ಸೂಚನೆ ಪಾಲಿಸದೇ ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಪಡ್ಡಿಪಡಿಸಿದ್ದಾರೆ. ಪರಸ್ಪರ ಗಲಾಟೆ ನಡೆಸಿದ್ದಾರೆ ಎಂದು ಧರ್ಮಸ್ಥಳ ಠಾಣೆಯ ಪೊಲೀಸರು ಬಿಎನ್ಎಸ್ ಸೆಕ್ಷನ್ 189(2), 191(2), 132, 324(6) ಮತ್ತು 190 ಬಿ ಅಡಿ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪಾಂಗಳ ರಸ್ತೆ ಬಳಿ ಸುಮಾರು 25 ರಿಂದ 50 ಮಂದಿ ಎರಡು ಕಡೆ ಪ್ರತ್ಯೇಕವಾಗಿ ಗುಂಪುಗೂಡಿದ್ದರು. ಅವರು ಅಪರಾಧ ಕೃತ್ಯ ನಡೆಸಲು ಅಕ್ರಮವಾಗಿ ಗುಂಪು ಗೂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿತ್ತು ಎಂದೂ ಪೊಲೀಸರು ಹೇಳಿದ್ದಾರೆ.
ಪಾಂಗಾಳ ರಸ್ತೆ ಹತ್ತಿರ ನಡೆದ ಘರ್ಷಣೆ ಸಂಬಂಧ ಸುಮಾರು 100 ಮಂದಿ, ಧರ್ಮಸ್ಥಳ ಪೊಲೀಸ್ ಠಾಣೆ ಎದುರು ಯಾವುದೇ ಪೂರ್ವಾನುಮತಿಯಿಲ್ಲದೇ ಕಾನೂನು ಬಾಹಿರವಾಗಿ ಪ್ರತಿಭಟನೆ ನಡೆಸಿದ್ದಾರೆ. ಅವರ ವಿರುದ್ದವೂ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಬಿಎನ್ಎಸ್ ಸೆಕ್ಷನ್ 189 (2) ಮತ್ತು 190 ಅಡಿ ಪೊಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಬೆಳ್ತಂಗಡಿ ನಿವಾಸಿ ಪ್ರಮೋದ್ ಕುಮಾರ್ ಶೆಟ್ಟಿ ಎಂಬುವರೂ ದೂರು ನೀಡಿದ್ದಾರೆ. ಅವರು ತಮ್ಮ ದೂರಿನಲ್ಲಿ ಪಾಂಗಾಳ ರಸ್ತೆಯಲ್ಲಿ ಯೂಟ್ಯೂಬರ್ ಗಳ ಮೇಲೆ ಹಲ್ಲೆ ನಡೆದ ವಿಚಾರ ತಿಳಿದು ಅಲ್ಲಿಗೆ ಬಂದಿದ್ದೆ. ಅಲ್ಲಿ ಸೇರಿದ್ದ ಸುಮಾರು 30 ರಿಂದ 40 ಜನರ ಗುಂಪು ಅವ್ಯಾಚವಾಗಿ ಬೈದು, ಹಲ್ಲೆ ನಡೆಸಿದೆ. ಸ್ಥಳದಲ್ಲಿದ್ದ ಎರಡು ವಾಹನಗಳಿಗೆ ಹಾಗೂ ಕ್ಯಾಮರಾಗಳಿಗೆ ಹಾನಿಗೊಳಿಸಿದ್ದನ್ನು ನೀಡಿದ್ದೇನೆ ಎಂದು ಉಲ್ಲೇಖಿಸಿದ್ದಾರೆ. ಈ ದೂರಿನನ್ವಯ ಧರ್ಮಸ್ಥಳ ಠಾಣೆಯಲ್ಲಿ ಬಿಎನ್ ಎಸ್ ಸೆಕ್ಷನ್ 189(2), 191(2), 115(2), 110, 324(3), 352, 351(2) ಹಾಗೂ 190ರ ಅಡಿ ಪ್ರಕರಣ ದಾಖಲಾಗಿದೆ.
ಉಜಿರೆಯ ಬೆನಕ ಆಸ್ಪತ್ರೆ ಬಳಿ ನಡೆದಿದೆ ಎನ್ನಲಾದ ಅಹಿತಕರ ಘಟನೆ ಸಂಬಂಧ ಬೆಳ್ತಂಗಡಿ ಠಾಣೆಯಲ್ಲಿ ಮೂರು ಪ್ರಕರಣಗಳು ದಾಖಲಾಗಿವೆ. ಪಾಂಗಾಳ ರಸ್ತೆ ಬಳಿ ನಡೆದ ಹಲ್ಲೆಯ ಗಾಯಾಳುಗಳನ್ನು ಕುರಿತು ವರದಿ ಮಾಡಲು ಉಜಿರೆಯ ಬೆನಕ ಆಸ್ಪತ್ರೆಗೆ ಆಗಮಿಸಿದ್ದೆ. ಅಲ್ಲಿಯೇ ಇದ್ದ ಗಿರೀಶ್ ಮಟ್ಟಣ್ಣನವರ್ ಅವರಿಗೆ ಬೈಟ್ ನೀಡುವಂತೆ ಕೇಳಿದಾಗ ಅವರು ನಿಂದಿಸಿದ್ದಾರೆ. ಜತೆಗೆ ಸ್ಥಳದಲ್ಲಿದ್ದ ಆರೋಪಿ ಮಹೇಶ್ ಶೆಟ್ಟಿ ತಿಮರೋಡಿ ಮತ್ತು ಅವರ ಸಂಗಾತಿಗಳು ಹಲ್ಲೆ ನಡೆಸಿ ಅವ್ಯಾಚವಾಗಿ ಬೈದಿದ್ದಾರೆ. ಆಗ ಅಲ್ಲಿಗೆ ಆಗಮಿಸಿದ ಯೂಟ್ಯೂಬರ್ ಸಮೀರ್ ಜೀವ ಬೆದರಿಕೆ ಒಡ್ಡಿದ್ದಾನೆ ಎಂದು ಏಷ್ಯಾನೆಟ್ ಸುವರ್ಣ ಸುದ್ದಿವಾಹಿನಿಯ ವರದಿಗಾರ ಹರೀಶ್ ಆರ್. (34) ಬೆಳ್ತಂಗಡಿ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ಬಿಎನ್ ಎಸ್ ಸೆಕ್ಷನ್ 189(2), 191(1) (2), 115(2), 351(2), 352 ಮತ್ತು 190ರ ಅಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಆದರೆ ಸುವರ್ಣ ಚಾನೆಲ್ ವರದಿಗಾರ ಮತ್ತೊಂದು ಕಡೆ ಮಾತನಾಡುತ್ತಾ ತನ್ನ ಮತ್ತು ಕ್ಯಾಮೆರಾಮನ್ ಮೇಲೆ ಯಾರೊಬ್ಬರೂ ಹಲ್ಲೆ ನಡೆಸಿಲ್ಲ ಎಂದು ಹೇಳಿರುವ ವಿಡಿಯೋ ವೈರಲ್ ಆಗಿದೆ.