ಮಂಗಳೂರು: ಧರ್ಮಸ್ಥಳ ಗ್ರಾಮದಲ್ಲಿ ಅತ್ಯಾಚಾರ ಎಸಗಿ ಹತ್ಯೆ ಮಾಡಿ ಶವಗಳನ್ನು ನನ್ನಿಂದ ಹೂತು ಹಾಕಿಸಿದ್ದಾರೆ ಎಂದು ದೂರು ನೀಡಿದ್ದ ಸಾಕ್ಷಿ ದೂರುದಾರ ಚಿನ್ನಯ್ಯ ಅವರನ್ನು ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ) ಇಂದು ಬೆಳ್ತಂಗಡಿಯ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದೆ.
ಹೆಚ್ಚಿನ ವಿಚಾರಣೆ ನಡೆಸಲು ಸಾಕ್ಷಿ ದೂರುದಾರರನ್ನು ಮತ್ತೆ ತಮ್ಮ ವಶಕ್ಕೆ ಒಪ್ಪಿಸುವಂತೆ ಎಸ್‌ಐಟಿ ಪರ ವಕೀಲರು ನ್ಯಾಯಾಲಯದಲ್ಲಿ ವಾದ ಮಂಡಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಕಾನೂನು ಸೇವಾ ಪ್ರಾಧಿಕಾರದ ವಕೀಲರು ಚಿನ್ನಯ್ಯ ಪರ ವಾದ ಮಂಡಿಸಲಿದ್ದಾರೆ.
ಚಿನ್ನಯ್ಯ ತಾನು ಹೂತಿದ್ದ ಮೃತದೇಹವೊಂದರ ತಲೆ ಬುರುಡೆಯನ್ನು ಎಸ್ ಐಟಿ ಅಧಿಕಾರಿಗಳ ಮುಂದೆ ಹಾಜರುಪಡಿಸಿದ್ದ. ಆದರೆ ವಿಚಾರಣೆ ಸಂದರ್ಭದಲ್ಲಿ ಈ ತಲೆಬುರುಡೆ ಕುರಿತು ಹೆಚ್ಚಿನ ಮಾಹಿತಿ ನೀಡಲು ನಿರಾಕರಿಸಿದ್ದ. ಈ ಸುಳ್ಳಿನ ಆಧಾರದಲ್ಲಿ ಆತನನ್ನು ಎಸ್ಐಟಿ ಅಧಿಕಾರಿಗಳು ಆ. 22ರಂದು ಬಂಧಿಸಿ ನ್ಯಾಯಾಲಯಕ್ಕೆ ಆ.23ರಂದು ಹಾಜರುಪಡಿಸಿದ್ದರು. ಈ ಪ್ರಕರಣದ ಹೆಚ್ಚಿನ ವಿಚಾರಣೆ ನಡೆಸಲು ನ್ಯಾಯಾಲಯ, ಚಿನ್ನಯ್ಯನನ್ನು ಸೆ.3ರವರೆಗೆ ಎಸ್‌ಐಟಿ ವಶಕ್ಕೆ ಒಪ್ಪಿಸಿತ್ತು. ಇಂದು ಆತನ ಕಸ್ಟಡಿ ಅಂತ್ಯಗೊಂಡಿರುವ ಹಿನ್ನೆಲೆಯಲ್ಲಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಬೆಳ್ತಂಗಡಿ ನ್ಯಾಯಾಲಯದ ಕೋರ್ಟ್ ಹಾಲ್ ನ ಬಾಗಿಲು ಮುಚ್ಚಿ ವಿಚಾರಣೆ ನಡೆಸಲಾಗುತ್ತಿದೆ. ಎಸ್ ಐಟಿ ತನಿಖಾಧಿಕಾರಿ, ಸರ್ಕಾರಿ ಅಭಿಯೋಜಕ, ಚಿನ್ನಯ್ಯ ಕಾನೂನು ಸೇವಾ ಪ್ರಾಧಿಕಾರದ ಇಬ್ಬರು ವಕೀಲರ ಉಪಸ್ಥಿತಿಗೆ ಮಾತ್ರ ಅವಕಾಶ ನೀಡಲಾಗಿದೆ.
ಪ್ರಕರಣದ ಸರ್ಕಾರಿ ಅಭಿಯೋಜಕರೂ ನ್ಯಾಯಾಲಯಕ್ಕೆ ತನಿಖೆಯ ಪ್ರಗತಿ ವರದಿ ಸಲ್ಲಿಸಿದ್ದಾರೆ.
ಚಿನ್ನಯ್ಯನ ಬಂಧನದ ನಂತರ ಎಸ್ ಐಟಿ ಅಧಿಕಾರಿಗಳು ಆತನನ್ನು ವಿಸ್ತೃತ ತನಿಖೆಗೊಳಪಡಿಸಿದ್ದರು. ಬೆಂಗಳೂರು ಮತ್ತಿತರ ಕಡೆ ಯಾರೆಲ್ಲಾ ಆಶ್ರಯ ನೀಡಿದ್ದರು, ಯಾರೆಲ್ಲಾ ಬೆಂಬಲ ನೀಡಿದ್ದರು ಎಂಬ ಮಾಹಿತಿಯನ್ನು ಕಲೆ ಹಾಕಲಾಗಿತ್ತು.
ಆತ ಎಲ್ಲೆಲ್ಲ ಆಶ್ರಯ ಪಡೆದಿದ್ದ ಎಂಬ ಬಗ್ಗೆ ಎಸ್‌ಐಟಿ ಅಧಿಕಾರಿಗಳು ಮಾಹಿತಿ ಕಲೆಹಾಕಿದ್ದರು. ಚಿನ್ನಯ್ಯ ಉಳಿದುಕೊಂಡಿದ್ದ ಬೆಂಗಳೂರಿನ ಪೀಣ್ಯದಲ್ಲಿರುವ ಜಯಂತ್ ಟಿ. ವಾಸವಿದ್ದ ಮನೆ, ವಿದ್ಯಾರಣ್ಯಪುರದ ಸರ್ವಿಸ್ ಅಪಾರ್ಟ್‌ಮೆಂಟ್, ತಿಮರೋಡಿಯ ಮಹೇಶ್ ಶೆಟ್ಟಿ ಅವರ ನಿವಾಸ ಮತ್ತು ಉಜಿರೆ–ಚಾರ್ಮಾಡಿ ರಸ್ತೆ ಸಮೀಪದ ರೆಸಾರ್ಟ್ ಸೇರಿದಂತೆ ಅನೇಕ ಸ್ಥಳಗಳಿಗೆ ಚಿನ್ನಯ್ಯನನ್ನು ಕರೆದೊಯ್ದು ಎಸ್‌ಐಟಿ ಅಧಿಕಾರಿಗಳು ಮಹಜರು ಮಾಡಿದ್ದರು.