ಬೆಂಗಳೂರು: ಧರ್ಮಸ್ಥಳ ಪ್ರಕರಣದಲ್ಲಿ ಸಾಕ್ಷಿ ದೂರುದಾರನಾಗಿದ್ದ ಚಿನ್ನಯ್ಯ ಇದೀಗ ತನ್ನ ಜೀವಕ್ಕೆ ಬೆದರಿಕೆ ಇದ್ದು, ರಕ್ಷಣೆ ನೀಡುವಂತೆ ನ್ಯಾಯಾಲಯದ ಮೊರೆ ಹೋಗಿದ್ದಾನೆ. ಸಾಕ್ಷಿದೂರುದಾರನಾಗಿ ಪ್ರವೇಶಿಸಿ ನಂತರ ಆಪಾದಿತನಾಗಿದ್ದ ಚಿನ್ನಯ್ಯನಿಗೆ ಕೋರ್ಟ್ ಈಗಾಗಲೇ ಜಾಮೀನು ನೀಡಿದೆ. ಆದರೆ ಜಾಮೀನಿನಲ್ಲಿ ಪದೇ ಪದೇ ಪೊಲೀಸ್ ಠಾಣೆಗೆ ಹಾಜರಾಗುವ ಷರತ್ತು ವಿಧಿಸಲಾಗಿದ್ದು, ಇದಕ್ಕೆ ವಿನಾಯಿತಿ ನೀಡಬೇಕು ಎಂದು ಚಿನ್ನಯ್ಯ ಕೋರಿದ್ದಾನೆ ಎಂದು ಬಿಎಲ್ ಆರ್ ಪೋಸ್ಟ್ ವರದಿ ಮಾಡಿದೆ.
ಮಾಧ್ಯಮಗಳ ಎದುರು ಮಾತನಾಡುವಂತಿಲ್ಲ ಎನ್ನುವುದೂ ಸೇರಿದಂತೆ 12 ಷರತ್ತುಗಳನ್ನು ಹೇರಿ ದಕ್ಷಿಣ ಕನ್ನಡ ಜಿಲ್ಲಾ ನ್ಯಾಯಾಲಯ ನವಂಬರ್ 25ರಂದು ಚಿನ್ನಯ್ಯಗೆ ಜಾಮೀನು ನೀಡಿತ್ತು. ತಾನು ಹಾಜರಾಗುವುದನ್ನು ಸಾಬೀತುಪಡಿಸಲು ಧರ್ಮಸ್ಥಳ ನ್ಯಾಯಾಲಯಕ್ಕೆ ಹಾಜರಾಗಬೇಕು ಎಂಬ ಷರತ್ತನ್ನೂ ವಿಧಿಸಲಾಗಿತ್ತು.
ಸುಳ್ಳು ಆಪಾಪದನೆ ಮಾಡಿದ ಆರೋಪದ ಮೇಲೆ ಚಿನ್ನಯ್ಯನನ್ನು ಆಗಸ್ಟ್ 23ರಂದು ಬಂಧಿಸಲಾಗಿತ್ತು. ಆತ 14 ದಿನ ಪೊಲೀಸ್ ಕಸ್ಟಡಿ ಮತ್ತು ಎರಡೂವರೆ ತಿಂಗಳು ನ್ಯಾಯಾಂಗ ಬಂಧನದಲ್ಲಿ ಕಳೆದಿದ್ದಾನೆ. ಚಿನ್ನಯ್ಯಗೆ ಜಾಮೀನು ದೊರೆತಿದ್ದರೂ ಶ್ಯೂರಿಟಿ ನೀಡುವವವರು ಇಲ್ಲದ ಕಾರಣ ಶಿವಮೊಗ್ಗ ಜೈಲಿನಲ್ಲೇ ಕಾಲ ಕಳೆಯುವಂತಾಗಿದೆ.
ತನ್ನ ರಕ್ಷಣೆ ಮತ್ತು ಸುರಕ್ಷತೆಗಾಗಿ ಚಿನ್ನಯ್ಯ ರಕ್ಷಣೆಗಾಗಿ ನ್ಯಾಯಾಲಯದ ಮೊರೆ ಹೋಗಿದ್ದಾನೆ. ಒಂದು ವೇಳೆ ಭದ್ರತೆ ನೀಡಲು ನ್ಯಾಯಾಲಯ ಆದೇಶಿಸಿದರೆ ಸರ್ಕಾರ ಚಿನ್ನಯ್ಯನಿಗೆ ರಕ್ಷಣೆ ಒದಗಿಸಬೇಕಾಗುತ್ತದೆ. ಧರ್ಮಸ್ಥಳ ಪ್ರಕರಣದಲ್ಲಿ ತನಿಖೆ ನಡೆಸುತ್ತಿರುವ ಎಸ್ ಐಟಿ ಆಪಾದಿತನಾಗಿ ಬದಲಾಗುವುದಕ್ಕೂ ಮುನ್ನ, ಸಾಕ್ಷಿ ರಕ್ಷಣಾ ಯೋಜನೆಯಡಿಯಲ್ಲಿ ಚಿನ್ನಯ್ಯನಿಗೆ ಭದ್ರತೆ ಒದಗಿಸಿತ್ತು.
ಎಸ್ಐಟಿಯು ಅಸ್ವಾಭಾವಿಕ ಸಾವುಗಳು, ನಾಪತ್ತೆ ಪ್ರಕರಣಗಳು ಹಾಗೂ ಬಂಗ್ಲೆಗುಡ್ಡದಲ್ಲಿ ಪತ್ತೆಯಾಗಿರುವ ಏಳು ಮಾನವ ಅವಶೇಷಗಳನ್ನು ಕುರಿತು ತನಿಖೆಯನ್ನು ಮುಂದುವರೆಸಲಿದೆ.
ರಾಜ್ಯ ಮಹಿಳಾ ಆಯೋಗದ ಮನವಿಗೆ ಸ್ಪಂದಿಸಿದ ಸರ್ಕಾರ, ದಕ್ಷಿಣಕನ್ನಡ ಜಿಲ್ಲೆಯ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಕ್ರಿಮಿನಲ್ ಮೊಕದ್ದಮೆ ಸಂಖ್ಯೆ 39/2025, ಕಲಂ211 (ಎ), ಬಿಎನ್ ಎಸ್ ಎಸ್ ಪ್ರಕರಣದ ಸಮಗ್ರ ತನಿಖೆಯನ್ನು ಕೈಗೊಳ್ಳಲು ವಿಶೇಷ ತನಿಖಾ ತಂಡವನ್ನು ಜುಲೈ 19 ರಂದು ರಚಿಸಿ ಆದೇಶಿಸಿತ್ತು.
ಚಿನ್ನಯ್ಯನನ್ನು ಅಗಸ್ಟ್ 23 ರಂದು ಬಂಧಿಸಲಾಗಿತ್ತು. ಈತ ಹಾಜರುಪಡಿಸಿದ ತಲೆ ಬುರುಡೆ ಮನುಷ್ಯರದ್ದು ಅಲ್ಲ ಎಂದು ವಿಧಿ ವಿಜ್ಞಾನ ಪ್ರಯೋಗಾಲಯಲ್ಲಿ ಸಾಬೀತಾಗಿತ್ತು. ನಂತರ ಚಿನ್ನಯ್ಯ ತನ್ನ ಮೊದಲ ಆರೋಪಗಳೆಲ್ಲವೂ ಸುಳ್ಳು ಮತ್ತು ಒತ್ತಡಕ್ಕೆ ಒಳಗಾಗಿ ಹೇಳಿಕೆ ನೀಡಿದ್ದಾಗಿ ತಪ್ಪೊಪ್ಪಿಗೆ ಹೇಳಿಕೆ ನೀಡುತ್ತಾನೆ.
ಬಂಧನದ ನಂತರ ಚಿನ್ನಯ್ಯ ಮತ್ತೊಂದು ಹೇಳಿಕೆ ದಾಖಲಿಸಲು ನಿರ್ಧರಿಸಿ ಸೆಪ್ಟಂಬರ್ 23, 25 ಮತ್ತು ಸೆ. 27 ರಂದು ಬೇರೆಯವರ ಚಿತಾವಣೆಗೆ ಒಳಗಾಗಿ ಸುಳ್ಳು ಹೇಳಿಕೆ ನೀಡಿದ್ದಾಗಿ ಹೇಳಿಕೆ ನೀಡಿರುತ್ತಾನೆ.
ಬೆಳ್ತಂಗಡಿ ಮ್ಯಾಜಿಸ್ಟ್ರೇಟ್ ಎದುರು ಬಿಎನ್ ಎಸ್ ಎಸ್ ಸೆ. 183 ಅಡಿಯಲ್ಲಿ ಸಾಕ್ಷಿ ದೂರುದಾರ ಚಿನ್ನಯ್ಯ ನೀಡಿರುವ ಮೊದಲ ಮತ್ತು ಎರಡನೇ ಹೇಳಿಕೆಗಳನ್ನು ಆಧರಿಸಿ ಎಸ್ ಐಟಿಯು ತನಿಖಾ ವರದಿಯನ್ನು ಸಿದ್ದಪಡಿಸಿ ನ್ಯಾಯಾಲಯಕ್ಕೆ ಸಲ್ಲಿಸಿದೆ. ಈ ಸಮಗ್ರ ವದಿಯಲ್ಲಿ ಚಿನ್ನಯ್ಯ ನೀಡಿದ ಮೊದಲ ಹೇಳಿಕೆ ನಂತರ ಸುಳ್ಳು ಎಂದು ಹೇಳಿದ್ದು, ಬೇರೆಯವರು ತಲೆ ಬುರುಡೆ ನೀಡಿದ್ದಾಗಿ ಹೇಳಿದ ವರದಿಗಳೆಲ್ಲವನ್ನೂ ಆಧರಸಿ ಈ ವರದಿ ನೀಡಿದೆ.

