ಬೆಂಗಳೂರು: ಧರ್ಮಸ್ಥಳ ಗ್ರಾಮದ ಸುತ್ತಮುತ್ತ ನಡೆದಿರುವ ಅತ್ಯಾಚಾರ ಮತ್ತು ಹತ್ಯೆ ಪ್ರಕರಣಗಳನ್ನು ಕುರಿತು ತನಿಖೆ ನಡೆಸಲು ರಾಜ್ಯ ಸರ್ಕಾರ ವಿಶೇಷ ತನಿಖಾ ತಂಡ (ಎಸ್ ಐ ಟಿ) ರಚಿಸಿರುವುದನ್ನು ‘ಜಾಗೃತ ನಾಗರಿಕರು ಕರ್ನಾಟಕ’ ಸಂಘಟನೆ ಸ್ವಾಗತಿಸಿದೆ. ಎಸ್ ಐ ಟಿಯು ನಿಷ್ಪಕ್ಷಪಾತ ತನಿಖೆ ನಡೆಸಿ, ಸತ್ಯವನ್ನು ಪತ್ತೆಮಾಡಬೇಕು ಎಂದು ಸಂಘಟನೆಯು ರಾಜ್ಯ ಸರ್ಕಾರಕ್ಕೆ ಪತ್ರ ಬರೆದು ಮನವಿ ಮಾಡಿದೆ.
ಮನವಿ ಪತ್ರಕ್ಕೆ ಸಾಹಿತ ಎಸ್ ಜಿ ಸಿದ್ದರಾಮಯ್ಯ, ಕೆ.ಮರುಳಸಿದ್ದಪ್ಪ, ಕೆ ವಿಜಯಾ, ಜಾಣಗೆರೆ ವೆಂಕಟರಾಮಯ್ಯ, ಕೆ ಎಸ್ ವಿಮಲಾ ವಸುಂಧರಾ ಭೂಪತಿ, ಬಂಜಗೆರೆ ಜಯಪ್ರಕಾಶ್ ಮೊದಲಾದವರು ಸಹಿ ಹಾಕಿದ ಪ್ರಮುಖರು.
ದಶಕಗಳ ಹಿಂದಿನ ಪ್ರಕರಣಗಳು ಇವಾಗಿದ್ದು, ಕೂಲಂಕಷ ತನಿಖೆ ನಡೆಯಬೇಕಿದೆ. ಈ ಪ್ರಕರಣಗಳ ಬೆನ್ನು ಹತ್ತಿ ಹೋರಾಟ ಮತ್ತು ಪ್ರತಿಭಟನೆಗಳನ್ನು ಮಾಡಿದ ಸಂಘ, ಸಂಸ್ಥೆಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಕಾಲಮಿತಿಯೊಳಗೆ ತನಿಖೆ ನಡೆಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಲಾಗಿದೆ.
ಶಿವಮೊಗ್ಗದ ಸೌಜನ್ಯ ಪ್ರಕರಣದಲ್ಲಿ, ಪ್ರಾಥಮಿಕ ಹಂತದಲ್ಲೇ ತನಿಖೆಯ ದಾರಿ ತಪ್ಪಿಸಲಾಗಿದೆ ಮತ್ತು ಸಾಕ್ಷ್ಯ ನಾಶ ಮಾಡಲಾಗಿದೆ ಎಂದು ನ್ಯಾಯಾಲಯವು ತೀರ್ಪಿನಲ್ಲಿ ಹೇಳಿದೆ. ಅದಕ್ಕೆ ಕಾರಣರಾದ ತನಿಖಾಧಿಕಾರಿಗಳನ್ನೂ ತೀವ್ರ ವಿಚಾರಣೆಗೆ ಒಳಪಡಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.