ಹಾಸನ: ರಾಜ್ಯದಲ್ಲಿ ನಾಳೆ ಮೊದಲ ಹಂತದ ಲೋಕಸಭಾ ಚುನಾವಣೆ ನಡೆಯಲಿದ್ದು,
ಚುನಾವಣೆಗೂ ಮುನ್ನವೇ ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳ ನಡುವೆ ಎಲ್ಲವೂ ಸರಿಯಿಲ್ಲ ಎಂಬುದು ಈಗ ಜಗಜ್ಜಾಹೀರಾಗಿದೆ.
ಸ್ವತಃ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರೇ ಈ ಸುಳಿವು ನೀಡಿದ್ದು, ಮಂಡ್ಯದಲ್ಲಿ ಬಿಜೆಪಿ ನಾಯಕಿ, ಸಂಸದೆ ಬೆಂಬಲ ನೀಡಿಲ್ಲ ಎಂದು ಹೇಳಿದ್ದಾರೆ. ನಿನ್ನೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹಾಸನದಲ್ಲೂ ಬಿಜೆಪಿಯ ಕೆಲವು ವ್ಯಕ್ತಿಗಳು ಬೆಂಬಲ ನೀಡಿಲ್ಲ ಎಂದರು. ಹಾಗಿದ್ದರೂ ತಮ್ಮ ಪಕ್ಷ ಗೆಲ್ಲುತ್ತದೆ ಎಂಬ ಆತ್ಮವಿಶ್ವಾಸ ವ್ಯಕ್ತಪಡಿಸಿದರು.
ದೇವೇಗೌಡರ ಹೇಳಿಕೆಯ ವಿಡಿಯೋ ಪೋಸ್ಟ್ ಮಾಡಿರುವ ಕಾಂಗ್ರೆಸ್ ಪಕ್ಷ, ದೋಸ್ತಿ ಪಕ್ಷಗಳು ಡಿವೋರ್ಸ್ ಹಂತಕ್ಕೆ ಬಂದಿರುವಂತಿದೆ.
ಒತ್ತಾಯದ ಮದುವೆ, ಒಲ್ಲದ ಸಂಸಾರದ ಆಯಸ್ಸು ಕಡಿಮೆ ಎನ್ನುವ ಸಂಗತಿ ಎರಡೂ ಪಕ್ಷಗಳಿಗೆ ಅರ್ಥವಾದಂತಿದೆ ಎಂದು ಲೇವಡಿ ಮಾಡಿದೆ.
ಹಾಸನದಲ್ಲಿ ಬಿಜೆಪಿಯ ಪ್ರೀತಮ್ ಗೌಡ ಶತಾಯಗತಾಯ ಜೆಡಿಎಸ್ ಗೆಲ್ಲಬಾರದು ಎಂದು ತೊಡೆ ತಟ್ಟಿದ್ದಾರಂತೆ, ಮಂಡ್ಯದಲ್ಲಿ ಸುಮಲತಾ ದೂರದೂರವಂತೆ! ಕೋಲಾರದಲ್ಲಿ ಬಿಜೆಪಿ ಕಾರ್ಯಕರ್ತರು ಮನೆ ಸೇರಿದ್ದಾರಂತೆ ಎಂದು ಕಾಂಗ್ರೆಸ್ ಗೇಲಿ ಮಾಡಿದೆ.
ಜೆಡಿಎಸ್ ಪಕ್ಷಕ್ಕೆ ಬಿಜೆಪಿಯ ಅಪಾಯಕಾರಿ ಸಾಂಗತ್ಯ ಅರಿವಾಗುವುದರ ಒಳಗಾಗಿ ಕಾಲ ಮಿಂಚಿದೆ, ನಂಬಿಸಿ ಕತ್ತು ಕೊಯ್ಯುವ ಬಿಜೆಪಿಯ ಸಖ್ಯ ಜೆಡಿಎಸ್ ಪಕ್ಷವನ್ನು ಮುಳುಗಿಸಲಿದೆ. ದೇವೇಗೌಡರ ಮಾತುಗಳೇ ಇದಕ್ಕೆ ಸಾಕ್ಷಿ ಹೇಳುತ್ತಿವೆ ಎಂದು ಕಾಂಗ್ರೆಸ್ ಪಕ್ಷ ಹೇಳಿದೆ.