ಹಾಸನ: ದೇವೇಗೌಡರು ಮೊಮ್ಮಗನಿಗೆ ಒಂದು ಎಚ್ಚರಿಕೆ ಪತ್ರ ಬರೆದಿದ್ರಿ, ಎಲ್ಲಿದ್ದರೂ ಬಂದು ಶರಣಾಗು ಎಂದು ಹೇಳಿದ್ರಿ. ಆದರೆ ನಾನು ನಿಮಗೆ ನೇರವಾಗಿ ಒಂದು ಮಾತನ್ನು ಹೇಳ್ತೇನೆ, ನಿಮಗೆ ನೈತಿಕತೆ ಇದ್ರೆ ಈ ಪ್ರಕರಣದ ಹೊಣೆ ಹೊತ್ತು ರಾಜಕೀಯ ನಿವೃತ್ತಿ ಘೋಷಿಸಿ, ಈ ನಾಡಿದ ಹೆಮ್ಮೆಯ ಪ್ರಧಾನಿ ಅನ್ನೋ ಹೆಸರನ್ನು ಪಡೆದಿದ್ದೀರಲ್ಲ ಅದನ್ನ ಉಳಿಸಿಕೊಳ್ಳಿ ಎಂದು ಚಿಂತಕ ಸಿದ್ಧನಗೌಡ ಪಾಟೀಲ್ ಆಗ್ರಹಿಸಿದ್ದಾರೆ.
ಕಾಮಕಾಂಡ ನಡೆಸಿ ವಿದೇಶಕ್ಕೆ ಪರಾರಿಯಾಗಿರುವ ಸಂಸದ, ಎನ್ ಡಿಎ ಅಭ್ಯರ್ಥಿ ಪ್ರಜ್ವಲ್ ರೇವಣ್ಣನನ್ನು ಬಂಧಿಸಬೇಕು ಮತ್ತು ಸಂತ್ರಸ್ತೆಯರಿಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಒತ್ತಾಯಿಸಿ ಹಾಸನದಲ್ಲಿ ಇಂದು ನಡೆಯುತ್ತಿರುವ ಬೃಹತ್ ಹೋರಾಟದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ನಾವಿಲ್ಲಿ ಸೇರಿರುವುದು ಹೆಮ್ಮೆಯ ಸಂಗತಿಯಲ್ಲವಾದರೂ ಇಂತಹ ಪರಿಸ್ಥಿತಿಯನ್ನು ಈ ಜಿಲ್ಲೆಯ ರಾಜಕೀಯ ಪರಿಸ್ಥಿತಿ ತಂದುಕೊಟ್ಟಿದೆ. ಜಾತಿಯ ಬಲದಿದಂದ, ಹಣದ ಬಲದಿಂದ ತಾನು ಇರುವ ಪ್ರದೇಶದಲ್ಲಿ ಅಲ್ಲಿನ ಪರಿಸ್ಥಿತಿಯನ್ನು ನಿಯಂತ್ರಿಸುವ ಪರಿಸ್ಥಿತಿ ಇಂದು ನಿನ್ನೆಯದಲ್ಲ. ಹಾಸನದಲ್ಲಿ ನಡೆದಿರುವ ಈ ದೌರ್ಜನ್ಯವನ್ನು ಸರ್ಕಾರದ ಹೆಗಲಿಗೆ ಬಿಡದೆ ಈ ರಾಜ್ಯದ ಜನಪರ ಚಳುವಳಿಗಳು ಜವಾಬ್ದಾರಿ ವಹಿಸಿ ಮಾಡುತ್ತಿರುವ ಹೋರಾಟ ಈ ರಾಜ್ಯದಲ್ಲಿ ಯಾವುದೇ ಪ್ರಭಾವಿ ವ್ಯಕ್ತಿ ದೌರ್ಜನ್ಯ ಎಸಗಿದರೆ ನಾವು ಸುಮ್ಮನಿರುವುದಿಲ್ಲ ಎಂಬ ಎಚ್ಚರಿಕೆಯ ಸಂದೇಶವನ್ನು ನೀಡಿದೆ ಎಂದರು.
ಕ್ರಿಮಿನಲ್ ಗಳು, ಅತ್ಯಾಚಾರಿಗಳು, ಭ್ರಷ್ಟಾಚಾರಿಗಳು ಈ ದೇಶದಲ್ಲಿ ರಾಜಕಾರಣಿಗಳು ಆಗ್ತಾ ಇರುವ ಸಂದರ್ಭದಲ್ಲಿ ಜನಪರ ಸಂಘಟನೆಗಳು ಕಾವಲುನಾಯಿಗಳ ರೀತಿ ಕೆಲಸ ಮಾಡಬೇಕಿದೆ ಎಂದು ಅವರು ಹೇಳಿದರು.
ಹಾಸನದಲ್ಲಿ ಹಲವು ದಶಕಗಳ ಹಿಂದೆ ನಡೆದ ಬಾಗೂರು ನವಿಲೆ ಹೋರಾಟದ ಸಂದರ್ಭದಲ್ಲಿ ಅಲ್ಲಿನ ಹಳ್ಳಿಯ ಮಹಿಳೆಯರ ಮೇಲೂ ಪೊಲೀಸ್ ದೌರ್ಜನ್ಯ ಎಸಗಿಸುವಂತಹ, ಜೈಲಿಗಟ್ಟುವ ಕೆಲಸ ಮಾಡಿದ್ದ ದೇವೇಗೌಡರಿಗೆ ಇಲ್ಲಿನ ಜನ ಅಂದೇ ಸರಿಯಾದ ಪಾಠ ಕಲಿಸಿದ್ದರೆ ಇಂದು ಈ ಸ್ಥಿತಿ ಬರುತ್ತಿರಲಿಲ್ಲ.
ಜೂನ್ 4ರಂದು ಫಲಿತಾಂಶ ಬಂದ ನಂತರ ದೇವೇಗೌಡರ ಕುಟುಂಬದ ದನಿಗಳು ಏನಾಗುತ್ತವೋ ಗೊತ್ತಿಲ್ಲ ಆದ್ರೆ, ನಾವಂತೂ ನಿಮ್ಮ ಕೃತ್ಯಗಳಿಗೆ ತಕ್ಕ ಪಾಠವನ್ನು ಕಲಿಸುತ್ತೇವೆ ಎಂಬ ಎಚ್ಚರಿಕೆಯನ್ನು ಕೊಟ್ಟು ಹೋಗುತ್ತಿದ್ದೇವೆ. ಪ್ರಜ್ವಲನಂತಹ ಅತ್ಯಾಚಾರಿಗಳನ್ನು ಶಿಕ್ಷೆಗೆ ಗುರಿಪಡಿಸಲು ಒಗ್ಗಟ್ಟಿನ ಹೋರಾಟ ಮಾಡುತ್ತೇವೆ ಎಂದು ಅವರು ಹೇಳಿದರು.