ಬೆಂಗಳೂರು: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯ ಫಾರ್ಮ್ ಹೌಸ್ ಒಂದರಲ್ಲಿ ನಡೆಯುತ್ತಿದ್ದ ರೇವ್ ಪಾರ್ಟಿ ಮೇಲೆ ದೇವನಹಳ್ಳಿ ಪೊಲೀಸ್ ಠಾಣೆ ಪೊಲೀಸರು ದಾಳಿ ನಡೆಸಿ 7 ಯುವತಿಯರು ಸೇರಿದಂತೆ 31 ವ್ಯಕ್ತಿಗಳನ್ನು ಬಂಧಿಸಿದ್ದಾರೆ. ಡ್ರಗ್ಸ್ ಸೇವನೆ ಮಾಡಿರುವ ಹಿನ್ನೆಲೆಯಲ್ಲಿ ಎಲ್ಲರನ್ನೂ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ.
ಜಿಟಿಜಿಟಿ ಮಳೆಯ ನಡುವೆಯೂ ಡಿಜೆ ಹಾಕಿಕೊಂಡು ನರ್ತಿಸುತ್ತಾ ಡ್ರಗ್ಸ್ ಸೇವಿಸಿ ನಶೆಯಲ್ಲಿ ತೇಲಾಡುತ್ತಿದ್ದರು. ಪಾರ್ಟಿಯಲ್ಲಿ ಭಾಗವಹಿಸಿದ್ದವರಲ್ಲರೂ ಸಾಫ್ಟ್ ವೇರ್ ಇಂಜಿನಿಯರ್ ಗಳಾಗಿದ್ದು, ಇವರು ಗಾಂಜಾ, ಕೊಕೈನ್ ಮತ್ತು ಓಪಿಯಂ ಸೇವಿಸಿದ್ದರು ಎಂದು ತಿಳಿದು ಬಂದಿದೆ.
ಡಿಜೆ ಶಬ್ದದಿಂದ ಬೇಸತ್ತ ಸ್ಥಳೀಯ ಗ್ರಾಮಸ್ಥರು ರೇವ್ ಪಾರ್ಟಿ ನಡೆಯುತ್ತಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೊಲೀಸರನ್ನು ನೋಡುತ್ತಿದ್ದಂತೆ ಪಾರ್ಟಿಯಲ್ಲಿ ಭಾಗವಹಿಸಿದ್ದ ಕೆಲವರು ಪರಾರಿಯಾಗಿದ್ದಾರೆ. ಫಾರ್ಮ್ ಹೌಸ್ ಮಾಲೀಕ ಸಯದ್ ಅಸೀದ್ ಎಂದು ತಿಳಿದು ಬಂದಿದ್ದು, ಆತನಿಗಾಗಿ ಪೊಲೀಸರು ಶೋಧ ನಡೆಸಿದ್ದಾರೆ.
ಎನ್ ಡಿಪಿಎಸ್ ಕಾಯಿದೆ ಅಡಿಯಲ್ಲಿ ಪ್ರಕರಣ ದಾಖಲಿಸಿ ಫಾರ್ಮ್ ಹೌಸ್ ಮೇನೇಜರ್ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಹುಟ್ಟುಹಬ್ಬದ ಆಚರಣೆ ನೆಪದಲ್ಲಿ ಈ ರೇವ್ ಪಾರ್ಟಿ ಆಯೋಜಿಸಲಾಗಿತ್ತು. ಪಾರ್ಟಿಯಲ್ಲಿ ಡ್ರಗ್ ಪೆಡ್ಲರ್ ಗಳೂ ಭಾಗವಹಿಸಿರಬಹುದು ಎಂಬ ಅನುಮಾನವಿದೆ. ಎಲ್ಲ 31 ವ್ಯಕ್ತಿಗಳ ರಕ್ತ ಮತ್ತು ಮೂತ್ರವನ್ನು ಸಂಗ್ರಹಿಸಲಾಗಿದ್ದು ಪರೀಕ್ಷೆಗೆ ಕಳುಹಿಸಲಾಗಿದ್ದು ಫಲಿತಾಂಶಕ್ಕಾಗಿ ಕಾಯಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.