ಬೆಂಗಳೂರು: ರೈತರ ಭೂಮಿಯನ್ನು ಕಿತ್ತುಕೊಂಡು ಬಡವರನ್ನಾಗಿ ಮಾಡಿ, ಭೂಮಿ ಬದಲಿಗೆ ಅಕ್ಕಿ ಕೊಡುತ್ತೇವೆ ಎಂಬ ನಿಮ್ಮ ನೀತಿ ನಮಗೆ ಬೇಡ ಎಂದು ಭಾರತೀಯ ಕಿಸಾನ್ ಯೂನಿಯನ್ ಮುಖಂಡ ರಾಕೇಶ್ ಟಿಕಾಯತ್ ಗುಡುಗಿದ್ದಾರೆ.
ದೇವನಹಳ್ಳಿಯ ಚನ್ನರಾಯಪಟ್ಟಣ ಮೊದಲಾದ ಗ್ರಾಮಗಳಲ್ಲಿ ರೈತರ ಜಮೀನುಗಳನ್ನು ವಶಪಡಿಸಿಕೊಳ್ಳಬಾರದು ಎಂದು ನಗರದ ಫ್ರೀಡಂ ಪಾರ್ಕ್ ನಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ವಿಮಾನ ನಿಲ್ದಾಣ ಅಥವಾ ನಗರ ಭಾಗ ಯಾವುದೇ ಆಗಿದ್ದರೂ ನಗರದಲ್ಲಿ ಸರಕಾರ ಫಲವತ್ತಾದ ಭೂಮಿಯನ್ನು ವಶಪಡಿಸಿಕೊಳ್ಳುತ್ತಿದೆ. ಸರ್ಕಾರದ ಇಂತಹ ನೀತಿ ವಿರುದ್ಧ ವಿರುದ್ಧ ಹೋರಾಟ ಮುಂದುವರೆಸಬೇಕು. ಸರಕಾರ ಎಲ್ಲ ಕಡೆಯಲ್ಲಿ ಭೂಮಿಯನ್ನು ಕಿತ್ತುಕೊಳ್ಳುವ ಪ್ರಯತ್ನ ಮುಂದುವರೆಸಿದೆ. ಕೈಗಾರಿಕೆಗಳಿಗೆ ಕೊಟ್ಟಿರುವ ಭೂಮಿಯನ್ನು ಕಿತ್ತು ನಾವು ಅಲ್ಲಿ ಬೆಳೆ ಬೆಳೆಯುತ್ತೇವೆ ಎಂದರೆ ಅವರು ಕೊಡುತ್ತಾರೆಯೇ? ಎಂದು ಟಿಕಾಯತ್ ಪ್ರಶ್ನಿಸಿದರು.
ರೈತರ ಭೂಮಿಯನ್ನು ಕಿತ್ತು ಕೈಗಾರಿಕೋದ್ಯಮಿಗಳಿಗೆ ಕೊಡುವುದನ್ನು ವಿರೋಧಿಸುತ್ತೇವೆ. ಹಿಂದೆ ದೇವನಹಳ್ಳಿ ಹೋರಾಟಕ್ಕೆ ಸಿದ್ದರಾಮಯ್ಯ ಬೆಂಬಲಿಸಿದ್ದರು. ಈಗ ಅವರದ್ದೇ ಸರಕಾರ ಬಂದ ನಂತರ ಈ ಉಲ್ಟಾ ಹೊಡೆಯುತ್ತಿದ್ದಾರೆ. ಅವರ ಈ ನಡೆಯನ್ನು ನಾವು ಒಪ್ಪುವುದಿಲ್ಲ ಎಂದರು.
ಈ ಆಂದೋಲನದಲ್ಲಿ ರೈತರು ಮತ್ತು ಮಹಿಳೆಯರು ಭಾಗವಹಿಸಿದ್ದಾರೆ. ಇಲ್ಲಿಯವರೆಗೂ ಈ ಹೋರಾಟ ಶಾಂತಿಯುತವಾಗಿ ನಡೆದಿದೆ. ಈ ಚಳವಳಿ ಮುಂದುವರೆಯಬೇಕಾಗಿದೆ.ಅಧಿಕಾರಿಗಳು ಭೂಮಿ ಕಿತ್ತುಕೊಳ್ಳಲು ಊರಿಗೆ ಬಂದಾಗ ನಾವೆಲ್ಲರೂ ಪ್ರಬಲವಾದ ಪ್ರತಿರೋಧ ಒಡ್ಡಬೇಕು. ಬೆದರಿಸಿ ಕಿತ್ತುಕೊಳ್ಳುವ ಪ್ರಯತ್ನ ಮಾಡಿದರೆ ವಿರೋಧಿಸಬೇಕು. ಊರಿನ ಕಮಿಟಿ ಒಪ್ಪಿಗೆ ಇಲ್ಲದೆ ಕೊಡುವುದಿಲ್ಲ ಎನ್ನುವ ತೀರ್ಮಾನವನ್ನು ಅವರಿಗೆ ತಿಳಿಸಬೇಕು. ಅಷ್ಟೇ ಅಲ್ಲದೆ, ಬೆದರಿಕೆಗೆಳಿಗೆ ಜಗ್ಗದೇ ಹೋರಾಟ ಮುನ್ನಡೆಸುವ ತೀರ್ಮಾನ ಮಾಡಬೇಕು ಎಂದು ಮನವಿ ಮಾಡಿಕೊಂಡರು
ಈ ಆಂದೋಲನದ ಜೊತೆಗೆ ನಾವಿದ್ದೇವೆ. ಸಂಯುಕ್ತ ಹೋರಾಟ ಕರ್ನಾಟಕ ನಾಯಕತ್ವ ಇದೆ. ಆಂದೋಲನ ಮುಂದುವರೆಸಿರಿ. ನಿಮ್ಮ ನಾಯಕತ್ವ ಮತ್ತು ಮುಖಂಡರ ಮೇಲೆ ವಿಶ್ವಾಸ ಇಡಿ. ಜಾತಿವಾದಿಗಳು ಅಥವಾ ಮತೀಯವಾದಿಗಳ ಮಾತುಗಳಿಗೆ ಮರುಳಾಗದೆ, ಒಗ್ಗಟ್ಟಾಗಿ ನಾವೆಲ್ಲರೂ ಹೋರಾಟವನ್ನು ಮುಂದುವರೆಸೋಣ ಎಂದು ರಾಕೇಶ್ ಟಿಕಾಯತ್ ಕರೆ ನೀಡಿದರು.