ದೇವನಹಳ್ಳಿ ಭೂಸ್ವಾಧೀನ ರದ್ದು: ಸರ್ಜಾಪುರ ಹಾಗೂ ಶಿಡ್ಲಘಟ್ಟ ತಾಲ್ಲೂಕಿನ ಜಂಗಮಕೋಟೆ ರೈತರ ಹೋರಾಟ ಚುರುಕು

Most read

ಬೆಂಗಳೂರು: ದೇವನಹಳ್ಳಿಯ ಚನ್ನರಾಯಪಟ್ಟಣದ 1777 ಎಕರೆ ಭೂಸ್ವಾಧೀನದಿಂದ ಸರ್ಕಾರ ಹಿಂದೆ ಸರಿದ ನಂತರ ಆನೇಕಲ್‌ ತಾಲ್ಲೂಕಿನ ಸರ್ಜಾಪುರ ಹಾಗೂ ಶಿಡ್ಲಘಟ್ಟ ತಾಲ್ಲೂಕಿನ ಜಂಗಮಕೋಟೆ ರೈತರ ಹೋರಾಟ ಚುರುಕುಗೊಂಡಿದೆ. ಭೂಸ್ವಾಧೀನ ವಿರುದ್ಧ ಸತತ ಮೂರು ವರ್ಷ ನಡೆದ ಹೋರಾಟ ಫಲ ನೀಡಿದ್ದು ಅದೇ ಮಾದರಿಯಲ್ಲಿ ರೈತ ಹೋರಾಟಗಾರರು ಹೋರಾಟವನ್ನು ತೀವ್ರಗೊಳಿಸಲು ಮುಂದಾಗಿದ್ದಾರೆ.

ಆನೇಕಲ್ ತಾಲ್ಲೂಕಿನ ಸರ್ಜಾಪುರ ಹೋಬಳಿ 12 ಗ್ರಾಮಗಳ 1,900 ಎಕರೆ ಕೃಷಿ ಭೂಮಿ ಸ್ವಾಧೀನಕ್ಕೆ ಕೆಐಎಡಿಬಿ ಹೊರಡಿಸಿರುವ ಅಧಿಸೂಚನೆ ವಿರೋಧಿಸಿ 462 ದಿನಗಳಿಂದ ರೈತರು ನಡೆಸುತ್ತಿರುವ ಹೋರಾಟ ಕಲೆವು ದಿನಗಳಿಂದ ಕಾವು ಪಡೆದುಕೊಂಡಿದೆ.

ಆರು ತಿಂಗಳ ಹಿಂದೆ ಸಮೀಕ್ಷೆಗೆ ಬಂದಿದ್ದ ಕೆಐಎಡಿಬಿ ಅಧಿಕಾರಿಗಳ ಲ್ಯಾಪ್‌ ಟಾಪ್‌ ಮತ್ತು ಡ್ರೋನ್‌ ಸುಡುವ ಮೂಲಕ ರೈತರು ಆಕ್ರೋಶ ಹೊರಹಾಕಿದ್ದರು.  

ಬೆಂಗಳೂರಿಗೆ ಸಮೀಪದಲ್ಲಿದ್ದರೂ ಸರ್ಜಾಪುರ ವ್ಯಾಪ್ತಿಯ ರೈತರು ಕೃಷಿಯನ್ನೇ ಅವಲಂಬಿಸಿದ್ದಾರೆ. ಇಲ್ಲಿಂದ ಬೆಂಗಳೂರಿಗೆ ತರಕಾರಿ, ಹಣ್ಣು, ಹೂವು ಭಾರಿ ಪ್ರಮಾಣದಲ್ಲಿ ಪೂರೈಕೆಯಾಗುತ್ತದೆ. 

ಭೂಮಿಯನ್ನು ಉಳಿಸಿಕೊಳ್ಳಲು ರೈತರು ‘ನಮ್ಮ ಭೂಮಿ ನಮ್ಮ ಹಕ್ಕು’ ಘೋಷಣೆಯೊಂದಿಗೆ ಹೋರಾಟವನ್ನು ತೀವ್ರಗೊಳಿಸಿದ್ದಾರೆ. ಹತ್ತು ದಿನಗಳಿಂದ ಮುತ್ತನಲ್ಲೂರು ಗ್ರಾಮದಲ್ಲಿ ಅಹೋರಾತ್ರಿ ಹೋರಾಟ ಆರಂಭಿಸಿದ್ದಾರೆ. ಇಂದು ತಾಲ್ಲೂಕಿನ ಕೊಮ್ಮಸಂದ್ರದಿಂದ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದವರೆಗೂ ಬೈಕ್‌ ರ‍್ಯಾಲಿ ನಡೆಸಿ ಪ್ರತಿಭಟನೆ ನಡೆಸಿದರು.

ಚಿಕ್ಕಬಳ್ಳಾಪುರ ಜಿಲ್ಲೆಯ ಜಂಗಕೋಟೆ ಹೋಬಳಿಯ 13 ಗ್ರಾಮಗಳ 2,823 ಎಕರೆ ಜಮೀನನ್ನು ‘ಡೀಪ್ ಟೆಕ್ ಪಾರ್ಕ್’ ಸ್ಥಾಪನೆಗೆ ನೀಡಲು ಸರ್ಕಾರ ಮುಂದಾಗಿದೆ. ಭೂಸ್ವಾಧೀನ ವಿರುದ್ಧ ರೈತರು 13 ತಿಂಗಳ ಹಿಂದೆಯೇ ಹೋರಾಟ ಆರಂಭಿಸಿದ್ದರಾದರೂ ಚುರುಕುಗೊಂಡಿರಲಿಲ್ಲ. ಈಗ ದೊಡ್ಡಮಟ್ಟದಲ್ಲಿ ಹೋರಾಟ ನಡೆಸಲು ರೈತರು ವೇದಿಕೆ ಸಿದ್ಧ ಪಡಿಸಿದ್ದಾರೆ.

More articles

Latest article