ಬಿಬಿಎಂಪಿ ವ್ಯಾಪ್ತಿಯಲ್ಲಿ ಮೂರು ತಿಂಗಳಲ್ಲಿ 329 ಡೆಂಗಿ ಪ್ರಕರಣ ದಾಖಲು

Most read

ಬೆಂಗಳೂರು: ಬೆಂಗಳೂರಿನಲ್ಲಿ ಮೂರು ತಿಂಗಳಲ್ಲಿ 329 ಡೆಂಗಿ ಪ್ರಕರಣಗಳು ದಾಖಲಾಗಿವೆ. 2024ರಲ್ಲಿ 15,282 ಡೆಂಗಿ ಪ್ರಕರಣಗಳು ಪತ್ತೆಯಾಗಿದ್ದು, ವಲಯವಾರು ಸಮಗ್ರ ಯೋಜನೆ ರೂಪಿಸಿಕೊಂಡು ಡೆಂಗಿ ಹರಡುವಿಕೆಯನ್ನು ನಿಯಂತ್ರಿಸಲಾಗುತ್ತಿದೆ. ಕಳೆದ ವರ್ಷ ಸೊಳ್ಳೆ ಉತ್ಪತ್ತಿ ತಾಣಗಳನ್ನು ಗುರುತಿಸಿ ರೂ.24 ಲಕ್ಷ ದಂಡ ವಿಧಿಸಲಾಗಿದೆ ಎಂದು ಬಿಬಿಎಂಪಿ ಆರೋಗ್ಯ ವಿಭಾಗದ ವಿಶೇಷ ಆಯುಕ್ತ ಸುರಳ್ಕರ್ ವಿಕಾಸ್ ಕಿಶೋರ್ ತಿಳಿಸಿದ್ದಾರೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ ಡೆಂಗಿ ನಿಯಂತ್ರಣಕ್ಕಾಗಿ ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಕುರಿತು ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಅವರು ನಡೆಸಿದ ವರ್ಚ್ಯುವಲ್ ಸಭೆಯಲ್ಲಿ ಅವರು ಮಾಹಿತಿ ನೀಡಿದರು.

ನಗರದಲ್ಲಿ ಮಳೆ ಪ್ರಾರಂಭವಾಗಿದ್ದು, ಡೆಂಗಿ ನಿಯಂತ್ರಣಕ್ಕೆ ಈಗಿನಿಂದಲೇ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು. ನಾಗರಿಕರಲ್ಲಿ ಜಾಗೃತಿ ಮೂಡಿಸಬೇಕು. ಜೊತೆಗೆ ಸ್ವಚ್ಛತೆ ಕಾಪಾಡದವರಿಗೆ ದಂಡ ವಿಧಿಸಬೇಕು ಎಂದು ತುಷಾರ್‌ ಗಿರಿನಾಥ್‌ ಸೂಚಿಸಿದರು.

ಆರೋಗ್ಯ ವಿಭಾಗವು ತೋಟಗಾರಿಕೆ, ಅರಣ್ಯ, ಘನತ್ಯಾಜ್ಯ, ಬೃಹತ್ ನೀರುಗಾಲುವೆ, ರಸ್ತೆ ಮೂಲಸೌಕರ್ಯ ವಿಭಾಗ ಸೇರಿದಂತೆ ವಿವಿಧ ವಿಭಾಗಗಳ ಜೊತೆ ವಲಯವಾರು ಸಮನ್ವಯ ಸಾಧಿಸಿ ನೀರು ನಿಲ್ಲುವ ಪ್ರದೇಶಗಳನ್ನು ಗುರುತಿಸಿ, ಸ್ವಚ್ಛತೆಗೆ ಕ್ರಮವಹಿಸಬೇಕು ಎಂದು ಸೂಚಿಸಿದರು.

ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹರ್ಷ ಗುಪ್ತ ಮಾತನಾಡಿ, ನಗರದಲ್ಲಿ ಡೆಂಗಿಯನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಬೇಕು. ಲಾರ್ವಾ ಉತ್ಪತ್ತಿ ಪ್ರದೇಶಗಳನ್ನು ಗುರುತಿಸಿ ಫಾಗಿಂಗ್ ಮಾಡಬೇಕು. ‘ಫೀವರ್ ಕ್ಲಿನಿಕ್ಗಳನ್ನು ಸ್ಥಾಪಿಸಬೇಕು. ಪ್ರತಿ ವಲಯಕ್ಕೆ ನೋಡಲ್ ಅಧಿಕಾರಿ, ಕೀಟವಿಜ್ಞಾನ ತಜ್ಞರನ್ನು ನಿಯೋಜನೆ ಮಾಡಿಕೊಳ್ಳಬೇಕು. ಡೆಂಗಿ ಪರೀಕ್ಷೆಗೆ ‘ಟೆಸ್ಟ್ ಕಿಟ್ಗಳನ್ನು ದಾಸ್ತಾನು ಇರಿಸಿಕೊಳ್ಳಬೇಕು ಎಂದರು.

More articles

Latest article