ಡಿ. 16ರಂದು ಬೆಳ್ತಂಗಡಿಯಲ್ಲಿ ಮಹಿಳಾ ಜಾಥಾ ಮತ್ತು ಮಹಿಳಾ ನ್ಯಾಯ ಸಮಾವೇಶ: ಧರ್ಮಸ್ಥಳದಲ್ಲಿ ಕಾಣೆಯಾದ ಎಲ್ಲ ಹೆಣ್ಣು ಮಕ್ಕಳನ್ನು ಕುರಿತೂ ತನಿಖೆ ನಡೆಸಲು ಆಗ್ರಹ

Most read

ಮಂಗಳೂರು: ಡಿಸೆಂಬರ್‌ 16ರಂದು ಬೆಳ್ತಂಗಡಿಯಲ್ಲಿ ಕೊಂದವರು ಯಾರು ಸಂಘಟನೆಯ ಆಶ್ರಯದಲ್ಲಿ  ‘ಮಹಿಳಾ ಜಾಥಾ ಮತ್ತು ಮಹಿಳಾ ನ್ಯಾಯ ಸಮಾವೇಶʼ ಹಮ್ಮಿಕೊಳ್ಳಲಾಗಿದೆ. ಈ ಸಮಾವೇಶದ ಅಂಗವಾಗಿ ಮೆರವಣಿಗೆ ಮತ್ತು ಬೆಳ್ತಂಗಡಿ ತಾಲೂಕು ಮೈದಾನದಲ್ಲಿ ಬೃಹತ್‌ ಸಮಾವೇಶ ನಡೆಯಲಿದೆ.

ಮಂಗಳೂರಿನಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಕೊಂದವರು ಯಾರು ಸಂಘಟನೆಯ ಮುಖ್ಯಸ್ಥೆ, ಸಾಮಾಜಿಕ ಕಾರ್ಯಕರ್ತೆಪ್ರಸನ್ನ ರವಿ ಅವರು ಸಮಾವೇಶದ ವಿವರ ನೀಡಿದರು.

ಧರ್ಮಸ್ಥಳ ಗ್ರಾಮದ ಪ್ರಕರಣಗಳನ್ನು ಕುರಿತು ಎಸ್‌ ಐಟಿ ತನಿಖೆ ನಡೆಸುತ್ತಿದೆ. ಆದರೆ ಮಾಧ್ಯಮಗಳಲ್ಲಿ ಇದುವರೆಗೂ ಕೇವಲ ಶವಗಳನ್ನು ಹೂತು ಹಾಕಿರುವ ಪ್ರಕಣಗಳ ತನಿಖೆ ಮಾತ್ರ ನಡೆಯುತ್ತಿದೆ ಎಂದು ವರದಿಯಾಗುತ್ತಿದೆ. ಇಲ್ಲಿ ದಶಕಗಳಿಂದ ಕಾಣೆಯಾಗಿರುವ ಎಲ್ಲ ಹೆಣ್ಣು ಮಕ್ಕಳನ್ನು ಕುರಿತೂ ತನಿಖೆ ನಡೆಯಬೇಕು ಎನ್ನುವುದು ಕೊಂದವರು ಯಾರು ಸಂಘಟನೆಯ ಪ್ರಮುಖ ಆಗ್ರಹವಾಗಿದೆ ಎಂದರು.

ನಿರ್ಭಯ ಪ್ರಕರಣ ಡಿಸೆಂಬರ್‌ 16 ದೆಹಲಿಯಲ್ಲಿ ನಡೆದಿದ್ದು, ಕಳೆದ 13 ವರ್ಷಗಳಿಂದಲೂ ದೇಶದಾದ್ಯಂತ ಮಹಿಳಾ ಸಂಘಟನೆಗಳು ಅದನ್ನುಅತ್ಯಾಚಾರ ವಿರೋಧಿ ದಿನʼವನ್ನಾಗಿ ಆಚರಿಸುತ್ತಾ ಬಂದಿದ್ದು ಈ ಹೋರಾಟಕ್ಕೆ ಈ ದಿನವನ್ನೇ ಆರಸಿಕೊಳ್ಳಲಾಗಿದೆ ಎಂದರು.

ಎಸ್‌ಐಟಿ ತನಿಖೆಯು ಸಂಪೂರ್ಣವಾಗಿ ಮಹಿಳೆಯರು ಮತ್ತಿತರ ಅಮಾಯಕ ಹಾಗೂ ನೊಂದವರಿಗೆ ನ್ಯಾಯ ದೊರಕಿಸುವುದರ ಸುತ್ತ ಕೇಂದ್ರಿತವಾಗಿರಬೇಕೇ ಹೊರತು ಇನ್ನಾವುದೇ ಧಾರ್ಮಿಕ ಅಥವಾ ರಾಜಕೀಯ ವಿಚಾರಗಳ ಸುತ್ತ ಅಲ್ಲ ಎಂದು ನಾವು ಗಟ್ಟಿದನಿಯಲ್ಲಿ ಪ್ರತಿಪಾದಿಸಲು ಬಯಸುತ್ತೇವೆ ಎಂದೂ ಹೇಳಿದರು.

ರೈತಸಂಘದ ನಾಯಕಿ, ಕೊಂದವರು ಯಾರು ಸಂಘಟನೆಯ ಮುಖ್ಯಸ್ಥೆಯೂ ಆದ ಅನುಸೂಯಮ್ಮ ಅರಲಾಲುಸಂದ್ರ ಅವರು ಮಾತನಾಡಿ, ದಕ್ಷಿಣಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳದಲ್ಲಿ ಮಹಿಳೆಯರ ಮೇಲೆ ಅತ್ಯಾಚಾರ ಎಸಗಿ, ಹತ್ಯೆ ಮಾಡಿದವರು ಯಾರು ಎಂಬ ಸತ್ಯವನ್ನು ಹೊರತರುವ ದಿಕ್ಕಿನಲ್ಲಿ ಎಸ್‌ ಐಟಿ ತನಿಖೆ ನಡೆಸಿ ಸಂತ್ರಸ್ತರಿಗೆ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸುವುದು ಸಮಾವೇಶದ ಉದ್ದೇಶವಾಗಿದೆ ಎಂದರು. ಈ ಮೂಲಕ ಸಂಘಟನೆಯು ಸಂತ್ರಸ್ತರ ಕುಟುಂಬಗಳೊಂದಿಗೆ ನಿಲ್ಲಲಿದೆ ಎಂದೂ ಹೇಳಿದರು.

ಕೊಂದವರು ಯಾರು ಸಂಘಟನೆಯ ಕಾರ್ಯಕರ್ತೆ ಮಲ್ಲಿಗೆ ಸಿರಿಮನೆ ಅವರು ಮಾತನಾಡಿ, ಕಳೆದ ಮೂರು ನಾಲ್ಕು ದಶಕಗಳಿಂದ ಮಹಿಳೆಯರ ಹಕ್ಕುಗಳು ಮತ್ತು ಘನತೆಗಾಗಿ ನಿರಂತರ ಹೋರಾಟ ಮಾಡಿಕೊಂಡು ಬರುತ್ತಿರುವ ಮಹಿಳಾ ಸಂಘಟನೆಗಳು ಮತ್ತು ಮಹಿಳಾ ಸಮಾನತೆಯಲ್ಲಿ ನಂಬಿಕೆ ಇರಿಸಿದ ಪ್ರಜ್ಞಾವಂತರೆಲ್ಲರೂ ಸೇರಿ ಕೊಂದವರು ಯಾರು?ʼ ಎಂಬ ಆಂದೋಲನವನ್ನು ಆಗಸ್ಟ್‌ ತಿಂಗಳಿನಿಂದ ಆರಂಭಿಸಿದ್ದೇವೆ.

ಅಂದಿನಿಂದ ರಾಜ್ಯದಾದ್ಯಂತ ಜಾಗೃತಿ ಕಾರ್ಯಕ್ರಮಗಳು, ಪ್ರತಿಭಟನೆ, ಪತ್ರಿಕಾ ಗೋಷ್ಠಿ ನಡೆಸುತ್ತಾ ಬರಲಾಗಿದೆ. ಮುಖ್ಯಮಂತ್ರಿ ಸಚಿವರು, ಜನಪ್ರತಿನಿಧಿಗಳು ರಾಜ್ಯ ಪೊಲೀಸ್‌ ಮಹಾ ನಿರ್ಧೇಶಕರು ಮತ್ತು ಎಸ್‌ ಐಟಿ ಮುಖ್ಯಸ್ಥರನ್ನೂ ಭೇಟಿ ಮಾಡಿ ಸಂತ್ರಸ್ತರಿಗೆ ನ್ಯಾಯ ಒದಗಿಸುವಂತೆ ಮನವಿ ಮಾಡಿಕೊಂಡಿದ್ದೇವೆ. ಸೆ.16ರಂದು ಬೆಂಗಳೂರಿನ ಗಾಂಧಿಭವನದಲ್ಲಿ ನಡೆದ ‘ನೊಂದವರೊಂದಿಗೆ ನಾವೂ ನೀವೂʼ ಕಾರ್ಯಕ್ರಮ ನಡೆಸಿದ್ದೇವೆ. ನವೆಂಬರ್‌ 1 ರ ಕನ್ನಡ ರಾಜ್ಯೋತ್ಸವ ಅಂಗವಾಗಿ  ರಾಜ್ಯಾದ್ಯಂತ ಸಹಿ ಸಂಗ್ರಹ ಹಾಗೂ ಪೋಸ್ಟ್‌ ಕಾರ್ಡ್‌ ಅಭಿಯಾನವನ್ನು ಆರಂಭಿಸಿ, ಈಗಾಗಲೇ ಕಾಲೇಜುಗಳು, ಕಾರ್ಮಿಕರ ಸಂಘಗಳು, ಸ್ವಸಹಾಯ ಸಂಘಗಳು, ಹಳ್ಳಿಗಳು ಮೊದಲಾದೆಡೆಗಳಲ್ಲಿ ಜನರೊಂದಿಗೆ ಸಂವಾದ ನಡೆಸುತ್ತಾ, ಸಹಿಸಂಗ್ರಹ ನಡೆಸಿದ್ದೇವೆ ಎಂದು ವಿವರಿಸಿದರು.

ಈಗಲೂ ಧ್ವನಿ ಎತ್ತದಿದ್ದರೆ ಇಂತಹ ಪ್ರಕರಣಗಳು ಮರುಕಳಿಸುವ ಸಾಧ್ಯತೆಗಳಿರುತ್ತವೆ. ಆದ್ದರಿಂದ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಮತ್ತು ಭವಿಷ್ಯದಲ್ಲಿ ಹೆಣ್ಣುಮಕ್ಕಳ ಮೇಲಿನ ಅಪರಾಧ ಕೃತ್ಯಗಳನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಸರ್ಕಾರವನ್ನು ಎಚ್ಚರಿಸಲು ಈ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಸುದ್ದಿಗೋಷ್ಠಿಯಲ್ಲಿ ಕಲಾವಿದೆ ಮತ್ತು ಲೇಖಕಿ ಗೀತಾ ಸುರತ್ಕಲ್, ಸೌಜನ್ಯಾ ಪರ ಹೋರಾಟಗಾರರಾದ ಶಶಿಕಲಾ, ಭಾರತಿ ಪ್ರಶಾಂತ್‌, ಸುನೀತಾ ಲಂಬಾಣಿ ಹಾಜರಿದ್ದರು.

More articles

Latest article