ನವದೆಹಲಿ: 2020ರಲ್ಲಿ ದೆಹಲಿಯಲ್ಲಿ ನಡೆದ ಗಲಭೆಗೆ ಸಂಚು ರೂಪಿಸಿದ ಆರೋಪದಲ್ಲಿ ಕಾನೂನು ಬಾಹಿರ ಚುಟುವಟಿಕೆಗಳ ನಿಯಂತ್ರಣ ಕಾಯ್ದೆಯಡಿ (ಯುಎಪಿಎ) ಬಂಧನದಲ್ಲಿರುವ ಉಮರ್ ಖಾಲಿದ್ ಹಾಗೂ ಶಾರ್ಜಿಲ್ ಇಮಾಮ್ ಗೆ ಜಾಮೀನು ನೀಡಲು ಸುಪ್ರೀಂ ಕೋರ್ಟ್ ಇಂದು ನಿರಾಕರಿಸಿದೆ.
ಇವರ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಅರವಿಂದ ಕುಮಾರ್ ಹಾಗೂ ಎನ್.ವಿ ಅಂಜಾರಿಯ ಅವರ ದ್ವಿಸದಸ್ಯ ಪೀಠ ಇವರಿಬ್ಬರಿಗೂ ಜಾಮೀನು ನಿರಾಕರಿಸಿದೆ. ಇತರೆ ಐವರು ಆರೋಪಿಗಳಾದ ಗುಲ್‌ಫಿಶಾ ಫಾತಿಮಾ, ಮೀರನ್ ಹೈದರ್, ಶಿಫಾ ಉರ್ ರೆಹಮಾನ್ ಹಾಗೂ ಮೊಹಮ್ಮದ್ ಸಲೀಂ ಖಾನ್ ಅವರಿಗೆ ಜಾಮೀನು ನೀಡಿದೆ.
ಈ ಪ್ರಕರಣದಲ್ಲಿ ಇತರ ಆರೋಪಿಗಳಿಗಿಂತ ಉಮರ್ ಖಾಲಿದ್ ಮತ್ತು ಶಾರ್ಜೀಲ್ ಇಮಾಮ್ ಅವರ ಪಾತ್ರಗಳು ಇತರರಿಗಿಂತ ಭಿನ್ನವಾಗಿವೆ. ಎಲ್ಲಾ ಆರೋಪಿಗಳ ಪಾತ್ರ ಒಂದೇ ಆಗಿಲ್ಲ ಎನ್ನುವುದನ್ನು ದಾಖಲೆಗಳು ತೋರಿಸುತ್ತವೆ. ಇವರಿಬ್ಬರ ಮೇಲಿನ ಆರೋಪಗಳು ಪ್ರಬಲವಾಗಿವೆಯೇ ಎಂದು ನ್ಯಾಯಾಲಯ ಪರಿಶೀಲಿಸಬೇಕಿದೆ ಎಂದು ಪೀಠ ಅಭಿಪ್ರಾಯಪಟ್ಟಿದೆ.
ಪ್ರಕರಣದಲ್ಲಿ ಏಳು ಆರೋಪಿಗಳ ಪಾತ್ರ ಬೇರೆ ಬೇರೆ ಇರುವುದರಿಂದ ಪ್ರತಿಯೊಬ್ಬರ ಜಾಮೀನು ಅರ್ಜಿಯನ್ನು ಪ್ರತ್ಯೇಕವಾಗಿ ಪರಿಶೀಲನೆ ನಡೆಸಲಾಗುವುದು ಎಂದು ಕೋರ್ಟ್ ಹೇಳಿದೆ. ಇತರ ಆರೋಪಿಗಳಿಗೆ ಹೋಲಿಸಿದರೆ ಉಮರ್ ಖಾಲಿದ್ ಮತ್ತು ಶಾರ್ಜಿಲ್ ಇಮಾಮ್ ಅವರ ಪಾತ್ರ ಭಿನ್ನವಾಗಿದೆ. ಲಭ್ಯವಿರುವ ಸಾಕ್ಷಿಗಳ ಆಧಾರದಲ್ಲಿ ಹೇಳುವುದಾದರೆ ಖಾಲಿದ್ ಹಾಗೂ ಇಮಾಮ್ ಮೇಲೆ ಗಂಭೀರ ಆರೋಪಗಳಿರುವುದು ವ್ಯಕ್ತವಾಗುತ್ತದೆ ಎಂದೂ ಹೇಳಿದೆ.
ಇವರಿಬ್ಬರ ಜಾಮೀನು ಅರ್ಜಿಗಳನ್ನು ಬಲವಾಗಿ ವಿರೋಧಿಸಿದ ದೆಹಲಿ ಪೊಲೀಸರು, ಫೆಬ್ರವರಿ 2020 ರಲ್ಲಿ ನಡೆದ ಗಲಭೆ ಸ್ವಯಂಪ್ರೇರಿತವಲ್ಲ, ಬದಲಾಗಿ ಭಾರತದ ಸಾರ್ವಭೌಮತ್ವದ ಮೇಲೆ ಪೂರ್ವ ಯೋಜಿತ ಮತ್ತು ಸಂಚು ರೂಪಿಸಲಾಗಿತ್ತು ಎಂದು ವಾದಿಸಿದ್ದರು.
ದೆಹಲಿ ಪೊಲೀಸರ ಪರವಾಗಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಮತ್ತು ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್ ವಿ ರಾಜು ಮತ್ತು ಆರೋಪಿಗಳ ಪರವಾಗಿ ಕಪಿಲ್ ಸಿಬಲ್, ಅಭಿಷೇಕ್ ಸಿಂಘ್ವಿ, ಸಿದ್ಧಾರ್ಥ ದವೆ, ಸಲ್ಮಾನ್ ಖುರ್ಷಿದ್ ಮತ್ತು ಸಿದ್ಧಾರ್ಥ್ ಲುತ್ರಾ ವಾದ ಮಂಡಿಸಿದ್ದರು.
ಪೌರತ್ವ (ತಿದ್ದುಪಡಿ) ಕಾಯ್ದೆಯನ್ನು (ಸಿಎಎ) ವಿರೋಧಿಸಿ 2020ರಲ್ಲಿ ದೆಹಲಿಯಲ್ಲಿ ಪ್ರತಿಭಟನೆ ನಡೆದಿತ್ತು. ಈ ಪ್ರತಿಭಟನೆ ಸಂದರ್ಭದಲ್ಲಿ ದೆಹಲಿಯಲ್ಲಿ ಗಲಭೆ ನಡೆದಿತ್ತು. ಗಲಭೆಗೆ ಸಂಚು ರೂಪಿಸಿದ ಆರೋಪದ ಮೇಲೆ ಜೆಎನ್‌ಯು ಮಾಜಿ ವಿದ್ಯಾರ್ಥಿ ಉಮರ್ ಖಾಲಿದ್ ವಿರುದ್ಧ ಯುಎಪಿಎ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.

