ನವದೆಹಲಿ: ದೇಶದ ರಾಜಧಾನಿ ದೆಹಲಿಯಲ್ಲಿ ವಾಯುಮಾಲಿನ್ಯ ಅತ್ಯಂತ ಗಂಭೀರ ಮಟ್ಟ ತಲುಪಿದ್ದು, ದೆಹಲಿ ವಾಸಯೋಗ್ಯ ಅಲ್ಲ ಎಂಬ ಹಂತ ತಲುಪಿದೆ. 10 ಮತ್ತು 12ನೇ ಶಾಲಾ ತರಗತಿಗಳನ್ನು ಹೊರತುಪಡಿಸಿ, ಇತರ ಎಲ್ಲಾ ತರಗತಿಗಳು ಮುಂದಿನ ಆದೇಶದವರೆಗೆ ಆನ್‌ಲೈನ್ ಮೂಲಕ ನಡೆಸಲು ಸರ್ಕಾರ ಸೂಚಿಸಿದೆ. ನಗರದೊಳಗೆ ಭಾನುವಾರದಿಂದಲೇ ಟ್ರಕ್‌ಗಳ ಪ್ರವೇಶವನ್ನು ನಿಷೇಧಿಸಲಾಗಿದೆ. ವಾಯು ಗುಣಮಟ್ಟವನ್ನು ಸುಧಾರಿಸುವ ನಿಟ್ಟಿನಲ್ಲಿ ಸಾರ್ವಜನಿಕ ನಿರ್ಮಾಣ ಕಾಮಗಾರಿಗಳನ್ನು ತಾತ್ಕಾಲಿಕ ನಿಷೇಧಿಸಲಾಗಿದೆ.
ಮುಖ್ಯಮಂತ್ರಿ ಅತಿಶಿ ಮರ್ಲೆನಾ ಅವರು ಸಾಮಾಜಿಕ ಮಾಧ್ಯಮಗಳ ಮೂಲಕ ಈ ವಿಷಯ ಹಂಚಿಕೊಂಡಿದ್ದಾರೆ.
ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ಅಂಕಿ ಅಂಶಗಳ ಪ್ರಕಾರ, ಇವತ್ತು ಸೋಮವಾರ ಬೆಳಗ್ಗೆ 8 ಗಂಟೆಯ ವೇಳೆಗೆ ದೈನಂದಿನ ಸರಾಸರಿ ವಾಯು ಗುಣಮಟ್ಟ ಸೂಚ್ಯಂಕ ಅಥವಾ ಎಕ್ಯೂಐ 484 ರಷ್ಟಿತ್ತು. ಭಾನುವಾರ ಸಂಜೆ 4 ಗಂಟೆ ಹೊತ್ತಿಗೆ ಈ ಮಟ್ಟ 441 ಮತ್ತು ರಾತ್ರಿ 7 ಗಂಟೆಯ ವೇಳೆಗೆ 457 ರಷ್ಟಿತ್ತು.
ಅಂತಾರಾಷ್ಟ್ರೀಯ ಮಾನದಂಡಗಳ ಪ್ರಕಾರ, ಗಾಳಿಯ ಸೂಚ್ಯಂಕ 0 ಯಿಂದ 50 ರ ನಡುವೆ ಇದ್ದರೆ ಉತ್ತಮ ಗುಣಮಟ್ಟ, 51 ರಿಂದ 100ರ ನಡುವೆ ಇದ್ದರೆ ತೃಪ್ತಿದಾಯಕ, 101 ರಿಂದ 200ರ ನಡುವೆ ಇದ್ದರೆ ಮಧ್ಯಮ ಗುಣಮಟ್ಟ, 201 ರಿಂದ 300 ರ ನಡುವೆಯಿದ್ದರೆ ಕಳಪೆ ಗುಣಮಟ್ಟ, 301 ರಿಂದ 400ರ ನಡುವೆಯಿದ್ದರೆ ಅತ್ಯಂತ ಕಳಪೆ ಗುಣಮಟ್ಟ ಎಂದು ನಿರ್ಧರಿಸಲಾಗುತ್ತದೆ. ಆದರೆ, ದೆಹಲಿಯ ಗಾಳಿಯ ಸೂಚ್ಯಂಕ 400ರ ಗಡಿ ದಾಟಿದ್ದು ಆತಂಕ ಮೂಡಿಸಿದೆ.
ಈ ಹಂತದಲ್ಲಿ ವಾಸಿಸುವ ನಾಗರೀಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ.ವಿಶೇಷವಾಗಿ ಉಸಿರಾಟದ ತೊಂದರೆ ಉಂಟಾಗುತ್ತದೆ. ನಿರಂತರವಾಗಿ ಏರುತ್ತಿರುವ ವಾಯು ಮಾಲಿನ್ಯದ ಮಟ್ಟವನ್ನು ಗಮನದಲ್ಲಿಟ್ಟುಕೊಂಡು, ರಾಷ್ಟ್ರ ರಾಜಧಾನಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಾಯು ಗುಣಮಟ್ಟ ನಿರ್ವಹಣೆಯ ಆಯೋಗವು ಸೋಮವಾರದಿಂದ ‘ಗ್ರೇಡೆಡ್ ರೆಸ್ಪಾನ್ಸ್ ಆಕ್ಷನ್ ಪ್ಲಾನ್’ ಅಥವಾ GRAPಯ ಹಂತ 4ರ ಅನುಷ್ಠಾನಕ್ಕೆ ಆದೇಶ ನೀಡಿದೆ.
GRAP ಎಂಬುವುದು ಹೆಚ್ಚುತ್ತಿರುವ ಮಾಲಿನ್ಯವನ್ನು ತಡೆಗಟ್ಟಲು ಕೈಗೊಳ್ಳುವ ಕ್ರಮಗಳಲ್ಲಿ ಒಂದಾಗಿದೆ. ಇದರ ಅನುಷ್ಠಾನದ ಮೂಲಕ ದೆಹಲಿಯಲ್ಲಿ ಮಿತಿ ಮೀರಿದ ಮಾಲಿನ್ಯ ಮಟ್ಟವನ್ನು ಮತಷ್ಟು ಹೆಚ್ಚಾಗದಂತೆ ತಡೆಯಲು ಪ್ರಯತ್ನಿಸಲಾಗುತ್ತದೆ. ಅವಶ್ಯಕತೆ ಕಂಡು ಬಂದಲ್ಲಿ ಲಾಕ್‌ಡೌನ್‌ನಂತಹ ಕಠಿಣ ಕ್ರಮವನ್ನೂ ಕೈಗೊಳ್ಳಬಹುದಾಗಿದೆ. ಅಗತ್ಯ ವಸ್ತುಗಳು ಮತ್ತು ಶುದ್ಧ ಇಂಧನವನ್ನು ಬಳಸುವ ಟ್ರಕ್‌ಗಳನ್ನು ಹೊರತುಪಡಿಸಿ, ಇತರ ಟ್ರಕ್‌ಗಳ ಸಂಚಾರವನ್ನು ಸರ್ಕಾರ ನಿಷೇಧಿಸಿದೆ. ಕಚೇರಿಗಳು ಶೇ.50ರ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸುವಂತೆ ಆದೇಶಿಸಲಾಗಿದೆ. ಖಾಸಗಿ ಕಂಪನಿಗಳು ಉದ್ಯೋಗಿಗಳಿಗೆ ವರ್ಕ್ ಫ್ರಮ್ ಹೋಮ್ ಅವಕಾಶ ನೀಡುವಂತೆ ಸರ್ಕಾರ ಸೂಚಿಸಿದೆ.
ಎಲೆಕ್ಟ್ರಿಕ್, ಸಿಎನ್‌ಜಿ ಮತ್ತು ಬಿಎಸ್-VI ಹೊರತುಪಡಿಸಿ, ದೆಹಲಿಯ ಹೊರಗಿನ ನೋಂದಣಿ ಹೊಂದಿರುವ
ಲಘು ವಾಣಿಜ್ಯ ವಾಹನಗಳ ಪ್ರವೇಶಕ್ಕೆ ನಿಷೇಧ ಹೇರಲು ಸರ್ಕಾರ ಚಿಂತನೆ ನಡೆಸಿದೆ. ಮಕ್ಕಳು, ವೃದ್ಧರು ಮತ್ತು ಉಸಿರಾಟ ಅಥವಾ ಇತರ ದೀರ್ಘಕಾಲದ ರೋಗಗಳಿಂದ ಬಳಲುತ್ತಿರುವವರು ಮನೆಯಿಂದ ಹೊರಗೆ ಬರದಂತೆ ಸರ್ಕಾರ ಮನವಿ ಮಾಡಿ ಕೊಂಡಿದೆ.