ನವದೆಹಲಿ: ಕುಖ್ಯಾತ ದರೋಡೆಕೋರ, ಗ್ಯಾಂಗ್ ಶೀಟರ್ ಹಾಶಿಂ ಬಾಬಾ ಪತ್ನಿ ಜೋಯಾ ಖಾನ್ ಳನ್ನು ಮಾದಕವಸ್ತು ಪ್ರಕರಣದಲ್ಲಿ ಪೊಲೀಸರು ಬಂಧಿಸಿದ್ದಾರೆ. ದೆಹಲಿಯ ಲೇಡ್ ಡಾನ್ ಎಂದೇ ಜೋಯಾ ಖಾನ್ ಕುಖ್ಯಾತಿ ಪಡೆದಿದ್ದಳು. 33 ವರ್ಷದ ಜೋಯಾ ಖಾನ್ ವಿರುದ್ಧ ಅನೇಕ ಕ್ರಿಮಿನಲ್ ಪ್ರಕರಣಗಳಿದ್ದು ಪೊಲೀಸರಿಂದ ತಪ್ಪಿಸಿಕೊಂಡು ಓಡಾಡುತ್ತಿದ್ದಳು. ಈಕೆಯ ಅಪರಾಧಗಳನ್ನು ಸಾಬೀತುಪಡಿಸಲು ಸಾಕ್ಷ್ಯಾಧಾರಗಳ ಕೊರತೆ ಉಂಟಾಗಿತ್ತು. ಆದರೆ ಇದೀಗ ದೆಹಲಿ ಪೊಲೀಸರು ಜೋಯಾ ಖಾನ್‌ಳನ್ನು ಡ್ರಗ್ಸ್ ಪ್ರಕರಣದಲ್ಲಿ ಬಂಧಿಸಿದ್ದಾರೆ. ಈಕೆಯ ಬಳಿ ಇದ್ದ ಸುಮಾರು 1 ಕೋಟಿ ರೂ. ಮೌಲ್ಯದ 270 ಗ್ರಾಂ ಹೆರಾಯಿನ್ ವಶಪಡಿಸಿಕೊಳ್ಳಲಾಗಿದೆ.
ತಿಹಾರ್ ಜೈಲಿನಲ್ಲಿರುವ ಜೋಯಾ ಪತಿ ಹಾಶಿಂ ಬಾಬಾ ವಿರುದ್ಧ ಕೊಲೆ, ಸುಲಿಗೆ ಮತ್ತು ಶಸ್ತ್ರಾಸ್ತ್ರ ಕಾಯ್ದೆಯಡಿ ಹಲವು ಪ್ರಕರಣಗಳಿವೆ. 2017 ರಲ್ಲಿ ಹಾಶಿಂ ಬಾಬಾನನ್ನು ಜೋಯಾ ಖಾನ್ ಮದುವೆಯಾಗಿದ್ದಳು. ಹಾಶಿಂ ಬಾಬಾನ ಮೂರನೇ ಪತ್ನಿ ಜೋಯಾ. ತನ್ನ ಮೊದಲ ಪತಿಗೆ ವಿಚ್ಛೇದನ ನೀಡಿದ ನಂತರ ಜೋಯಾ ಹಾಶಿಂ ಬಾಬಾನನ್ನು ವಿವಾಹವಾಗಿದ್ದಳು.
ಜೈಲಿನಲ್ಲಿದ್ದರೂ ಹಾಶಿಂ ಬಾಬಾ ತನ್ನ ಅಕ್ರಮ ಚಟುವಟಿಕೆಗಳನ್ನು ಬಿಟ್ಟಿರಲಿಲ್ಲ. ಜೈಲಿನೊಳಗಿದ್ದುಕೊಂಡೇ ಅಕ್ರಮ ಚಟುವಟಿಕೆಗಳನು ನಿಯಂತ್ರಿಸುತ್ತಿದ್ದ,. ಈತನ ಅಕ್ರಮ ಚಟುವಟಿಕೆಗಳಿಗೆ ಜೋಯಾ ಕುಮ್ಮಕ್ಕು ನೀಡುತ್ತಿದ್ದಳು. ಹಾಶಿಂ ಬಾಬಾ ನಡೆಸುತ್ತಿದ್ದ ಎಲ್ಲಾ ಚಟುವಟಿಕೆಗಳನ್ನ ಹೊರಗಡೆ ಇದ್ದು ಕೊಂಡು ಪತ್ನಿ ಜೋಯಾ ನಡೆಸುತ್ತಿದ್ದಳು ಎಂದು ಪೊಲೀಸರು ಹೇಳಿದ್ದಾರೆ.