ಹೊಸದಿಲ್ಲಿ: ರಾಜಧಾನಿ ದಿಲ್ಲಿ ಬಿಸಿಲಿನಲ್ಲಿ ಬೇಯುತ್ತಿದೆ. ಕಳೆದ ಎರಡು ದಿನಗಳಲ್ಲಿ ಶಾಖಾಘಾತಕ್ಕೆ ಸತ್ತವರ ಸಂಖ್ಯೆ 5ಕ್ಕೆ ಏರಿದೆ. 12 ಮಂದಿ ರಾಮಮನೋಹರ್ ಲೋಹಿಯಾ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಶಾಖತರಂಗದಿಂದ ಹಲವಾರು ಮಂದಿ ಅಸ್ವಸ್ಥರಾಗುತ್ತಿದ್ದು, 22 ಮಂದಿ ಆಸ್ಪತ್ರೆಗೆ ದಾಖಲಾಗಿದ್ದರು, ಅವರ ಪೈಕಿ ಐವರು ಮೃತಪಟ್ಟಿದ್ದಾರೆ, ಹನ್ನೆರಡು ಮಂದಿಯನ್ನು ವೆಂಟಿಲೇಟರ್ ಸಹಾಯದೊಂದಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಅಜಯ್ ಶುಕ್ಲಾ ಹೇಳಿದ್ದಾರೆ.
ಉರಿಬಿಸಿಲಿನ ಶಾಖದಿಂದ ಆಘಾತಕ್ಕೆ ಒಳಗಾಗುವವರ ಪೈಕಿ ಸಾಯುವವರ ಸಂಖ್ಯೆ ಹೆಚ್ಚಾಗಿ ಇರುತ್ತದೆ. ಶೇ.60 ರಿಂದ 70 ರಷ್ಟು ಜನರು ಸಾಯುವ ಸಾಧ್ಯತೆ ಇದೆ ಎಂದು ಹಿರಿಯ ವೈದ್ಯರೊಬ್ಬರು ಎಚ್ಚರಿಸಿದ್ದು, ಆಸ್ಪತ್ರೆಗೆ ಕರೆತರಲಾಗುವ ರೋಗಿಗಳ ಪೈಕಿ ಬಹುತೇಕರು ಒಂದಲ್ಲ ಒಂದು ಅಂಗ ವೈಫಲ್ಯವನ್ನು ಹೊಂದುತ್ತಿದ್ದಾರೆ. ಇದು ಆಘಾತಕಾರಿ ಬೆಳವಣಿಗೆ ಎಂದು ಹೇಳಿದ್ದಾರೆ.
ಶಾಖಾಘಾತಕ್ಕೆ ಸಂಬಂಧಿಸಿದಂತೆ ಜನರಲ್ಲಿ ತಿಳಿವಳಿಕೆಯ ಕೊರತೆ ಇದೆ. ಆಸ್ಪತ್ರೆಗೆ ದಾಖಲಾಗುತ್ತಿರುವ ಬಹುತೇಕರು ವಲಸೆ ಕಾರ್ಮಿಕರು. ಶಾಖಾಘಾತವನ್ನು ತಲೆ ಸುತ್ತುವಿಕೆ ಎಂದು ಭಾವಿಸಲಾಗುತ್ತಿದೆ. ಆಸ್ಪತ್ರೆಗೆ ದಾಖಲಿಸಿದರೆ ಸರಿಹೋಗುತ್ತಾರೆ ಎಂದು ರೋಗಿಗಳ ಸಂಬಂಧಿಕರು ಭಾವಿಸುತ್ತಾರೆ. ಆದರೆ ಪರಿಸ್ಥಿತಿ ಹಾಗಿಲ್ಲ ಎಂದು ಅವರು ಹೇಳಿದ್ದಾರೆ.