ಹೊಸದಿಲ್ಲಿ: ದೇಶದ ಹಲವು ಭಾಗಗಳಲ್ಲಿ ಶಾಖಾಘಾತದಿಂದ ಮೃತಪಟ್ಟವರ ಸಂಖ್ಯೆ 110ಕ್ಕೆ ಏರಿದೆ.
ಕಳೆದ ಮಾರ್ಚ್ 1ರಿಂದ ಜೂನ್ 18ರವರೆಗೆ ಒಟ್ಟು 110 ಮಂದಿ ಮೃತಪಟ್ಟಿರುವುದಾಗಿ ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ಈ ಹೇಳಿಕೆಯ ಬೆನ್ನಲ್ಲೇ ಕಳೆದ 24 ಗಂಟೆಗಳಲ್ಲಿ ದಿಲ್ಲಿಯೊಂದರಲ್ಲೇ 17 ಮಂದಿ ಮೃತಪಟ್ಟಿರುವ ಆಘಾತಕಾರ ಮಾಹಿತಿ ಹೊರಬಂದಿದೆ.
ಈ ಬಾರಿ ಅತಿಯಾದ ಉಷ್ಣಾಂಶ ಮತ್ತು ಶಾಖಾಘಾತದಿಂದ ಸುಮಾರು 40,000 ಕ್ಕೂ ಹೆಚ್ಚು ಮಂದಿ ಆರೋಗ್ಯ ಸಮಸ್ಯೆಗಳನ್ನು ಎದುರಿಸಿದ್ದಾರೆ ಎಂದು ಇಲಾಖೆ ತಿಳಿಸಿದೆ.
ಶಾಖಾಘಾತದಿಂದ ನಲುಗಿ ರಾಜ್ಯಗಳ ಪೈಕಿ ಉತ್ತರಪ್ರದೇಶ ಮೊದಲಸ್ಥಾನದಲ್ಲಿದ್ದು, 36 ಮಂದಿ ಮೃತಪಟ್ಟಿದ್ದಾರೆ. ಬಿಹಾರ, ಒಡಿಶಾ ಮತ್ತು ದಿಲ್ಲಿಯಲ್ಲಿ ಶಾಖಾಘಾತದಿಂದ ಜನರು ತೀವ್ರ ಸಮಸ್ಯೆ ಎದುರಿಸುತ್ತಿದ್ದಾರೆ ಎಂದು ರೋಗ ನಿಯಂತ್ರಣ ರಾಷ್ಟ್ರೀಯ ಕೇಂದ್ರ (the National Centre for Disease Control (NCDC) ತಿಳಿಸಿದೆ.
ರಾಜ್ಯಗಳು ತಮ್ಮಅಂತಿಮ ವರದಿಗಳನ್ನು ಸಲ್ಲಿಸಿದ ನಂತರ ಮೃತಪಟ್ಟವರ ಸಂಖ್ಯೆಯಲ್ಲಿ ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ಅಧಿಕ ತಾಪಮಾನ, ಶಾಖಾಘಾತದಿಂದ ದಿಲ್ಲಿಯ ಸಫ್ದರ್ ಜಂಗ್ ಆಸ್ಪತ್ರೆಗೆ ದಾಖಲಾಗಿದ್ದ 33 ರೋಗಿಗಳ ಪೈಕಿ 13 ಮಂದಿ ಕಳೆದ 24 ಗಂಟೆಗಳಲ್ಲಿ ಮೃತಪಟ್ಟಿದ್ದು, ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಗೆ ದಾಖಲಾಗಿದ್ದ 22 ಮಂದಿಯಲ್ಲಿ ನಾಲ್ವರು ಮೃತಪಟ್ಟಿದ್ದಾರೆ.