ನಮಾಜ್‌ ಮಾಡುತ್ತಿದ್ದ ವ್ಯಕ್ತಿಯನ್ನು ಕಾಲಿನಿಂದ ಒದ್ದ ಪೊಲೀಸ್‌ ಅಧಿಕಾರಿ ಅಮಾನತು

Most read

ದೆಹಲಿ ಪೊಲೀಸ್‌ ಅಧಿಕಾರಿಯೊಬ್ಬರು ರಸ್ತೆಯ ನಡುವೆ ನಮಾಜ್‌ ಮಾಡುತ್ತಿದ್ದ ಮುಸ್ಲಿಂ ವ್ಯಕ್ತಿಗಳನ್ನು ಒದ್ದು ಕಳಿಸಿರುವ ವಿಡಿಯೋ ವೈರಲ್‌ ಆದ ಬೆನ್ನಲ್ಲಿಯೇ, ಈಗ ಆ ಪೊಲೀಸ್ ಅನ್ನು ಅಮಾನತು ಮಾಡಲಾಗಿದೆ.

ನವದೆಹಲಿಯ ಇಂದರ್‌ಲೋಕ್‌ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಈ ಘಟನೆಯ ಕುರಿತಾಗಿ ತನಿಖೆಗೆ ಆದೇಶ ನೀಡಲಾಗಿದ್ದು, ಸೂಕ್ತ ಕ್ರಮವನ್ನು ಕೈಗೊಳ್ಳಲಾಗುವುದು ಎಂದು ದೆಹಲಿಯ ಉತ್ತರ ವಿಭಾಗದ ಡಿಸಿಪಿ ತಿಳಿಸಿದ್ದಾರೆ.

ರಾಜಕೀಯ ನಾಯಕರು ಹಾಗೂ ವಿವಿಧ ಗಣ್ಯರು ವ್ಯಾಪಕವಾಗಿ ಹಂಚಿಕೊಂಡಿರುವ ವೈರಲ್‌ ವಿಡಿಯೋದಲ್ಲಿ ಕೆಲವು ಮುಸ್ಲಿಂ ವ್ಯಕ್ತಿಗಳು ನಡುರಸ್ತೆಯಲ್ಲೇ ನಮಾಜ್‌ ಮಾಡಲು ಆರಂಭಿಸಿದ್ದಾರೆ.

ಈ ಹಂತದಲ್ಲಿ ಅಲ್ಲಿಗೆ ಬರುವ ಪೊಲೀಸ್‌ ಅಧಿಕಾರಿ, ನಮಾಜ್‌ ಮಾಡುತ್ತಿದ್ದ ವ್ಯಕ್ತಿಗಳನ್ನು ಕಾಲಿನಿಂದ ಒದ್ದಿದ್ದಾರೆ. ಕೆಲವೊಬ್ಬರನ್ನು ಗುದ್ದಿದ ಅವರು ಅಲ್ಲಿಂದ ಮೇಲೇಳುವಂತೆ ಹೇಳಿದ್ದಾರೆ. ಈ ವೇಲೆ ಅಲ್ಲಿದ್ದ ಒಬ್ಬ ವ್ಯಕ್ತಿ ಇಡೀ ಘಟನೆಯನ್ನು ವಿಡಿಯೋ ಮಾಡಿ ಸೋಶಿಯಲ್‌ ಮೀಡಿಯಾದಲ್ಲಿ ಶೇರ್‌ ಮಾಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ವಿರೋಧ ವ್ಯಕ್ತವಾಗುತ್ತಿದ್ದಂತೆ ಎಚ್ಚೆತ್ತುಕೊಂಡ ದೆಹಲಿ ಪೊಲೀಸರು ಅಧಿಕಾರಿಯನ್ನು ತಕ್ಷಣಕ್ಕೆ ಜಾರಿ ಬರುವಂತೆ ಅಮಾನತು ಮಾಡಿದ್ದಾರೆ.

ಈ ವೇಳೆ ಸಾಕಷ್ಟು ಮಂದಿ ಪೊಲೀಸ್‌ ಅಧಿಕಾರಿಯ ದರ್ಪಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಘಟನೆಯ ಬೆನ್ನಲ್ಲಿಯೇ ಪೊಲೀಸ್‌ ಅಧಿಕಾರಿಗಳು ಹಾಗೂ ಸ್ಥಳದಲ್ಲಿದ್ದ ವ್ಯಕ್ತಿಗಳ ನಡುವೆ ತೀವ್ರ ಮಾತಿನ ಚಕಮಕಿ ನಡೆದಿದೆ.

ಪ್ರಾರ್ಥನೆಯ ಸಮಯದಲ್ಲಿ, ಕೆಲವು ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಗುಂಪನ್ನು ಚದುರಿಸಲು ಪ್ರಯತ್ನಿಸಿದರು. ಘಟನೆಯ ವೀಡಿಯೊದಲ್ಲಿ ಅವರಲ್ಲಿ ಒಬ್ಬರು ಪ್ರಾರ್ಥನೆಗಾಗಿ ಮಂಡಿಯೂರಿ ಕುಳಿತಿದ್ದ ಮುಸ್ಲಿಂ ವ್ಯಕ್ತಿಗಳನ್ನು ಕಾಲಿನಿಂದ ಒದ್ದಿದ್ದಲ್ಲದೆ, ಅವರ ಮೇಲೆ ಹಲ್ಲೆ ಮಾಡಿರುವುದು ಕಂಡಿದೆ. ಘಟನೆಗೆ ಪ್ರತಿಕ್ರಿಯೆಯಾಗಿ ಉತ್ತರ ಡಿಸಿಪಿ ಮನೋಜ್ ಮೀನಾ ಅವರು ಈ ಬಗ್ಗೆ ತನಿಖೆ ಆರಂಭಿಸಲಾಗಿದೆ ಎಂದು ಹೇಳಿಕೆ ನೀಡಿದ್ದಾರೆ.

More articles

Latest article