ದೆಹಲಿಯಲ್ಲಿ ಹೆಚ್ಚುತ್ತಿವೆ ಅಪರಾಧಗಳು : ಬರ್ಗರ್ ಕಿಂಗ್ ರೆಸ್ಟೋರೆಂಟ್​ನೊಳಗೆ ಗುಂಡಿನ ದಾಳಿ, ಓರ್ವ ಸಾವು

ಪಶ್ಚಿಮ ದೆಹಲಿಯ ರಜೌರಿ ಗಾರ್ಡನ್‌ನಲ್ಲಿರುವ ಪ್ರಸಿದ್ಧ ಬರ್ಗರ್ ಔಟ್‌ಲೆಟ್ ಬರ್ಗರ್ ಕಿಂಗ್‌ ರೆಸ್ಟೋರೆಂಟ್​ನಲ್ಲಿ ಭಾರಿ ಗುಂಡಿನ ದಾಳಿ ನಡೆದಿದೆ. ಈ ಗುಂಡಿನ ದಾಳಿಯಲ್ಲಿ ಓರ್ವ ವ್ಯಕ್ತಿ ಸಾವನ್ನಪ್ಪಿದ್ದಾನೆ.

ಮಾಹಿತಿ ಪ್ರಕಾರ, ಮಂಗಳವಾರ ರಾತ್ರಿ ಪಶ್ಚಿಮ ದೆಹಲಿಯ ರಾಜೌರಿ ಗಾರ್ಡನ್‌ನಲ್ಲಿರುವ ಬರ್ಗರ್ ಕಿಂಗ್‌ ಹೋಟೆಲ್​​​​​​​​ಗೆ ಬಂದ ದುಷ್ಕರ್ಮಿಗಳು ಮನಬಂದಂತೆ ಗುಂಡು ಹಾರಿಸಿದ್ದಾರೆ. ರೆಸ್ಟೋರೆಂಟ್​ನಲ್ಲಿ ಕುಳಿತಿದ್ದ ವ್ಯಕ್ತಿಯ ಮೇಲೆ ಗುಂಡು ಹಾರಿಸಿ ಸ್ಥಳದಿಂದ ಪರಾರಿಯಾಗಿದ್ದಾರೆ. ಈ ಗುಂಡಿನ ದಾಳಿಯಲ್ಲಿ ಓರ್ವ ವ್ಯಕ್ತಿ ಸಾವನ್ನಪ್ಪಿದ್ದಾನೆ. ಆದರೆ, ಮೃತರ ಗುರುತು ಪತ್ತೆಯಾಗಿಲ್ಲ. ಈ ಪ್ರಕರಣದ ಕುರಿತು ಪೊಲೀರು ತನಿಖೆ ಆರಂಭಿಸಿದ್ದಾರೆ.

ಮಾಹಿತಿ ನೀಡಿದ ಪಶ್ಚಿಮ ದೆಹಲಿ ಜಿಲ್ಲೆಯ ಡಿಸಿಪಿ ವಿಚಿತ್ರಾ ವೀರ್ ಅವರು, ಬರ್ಗರ್ ಕಿಂಗ್ ರೆಸ್ಟೋರೆಂಟ್​ನಲ್ಲಿ ನಡೆದ ಗುಂಡಿನ ದಾಳಿ ನಡೆದಿರುವ ಕುರಿತು ಮಂಗಳವಾರ ರಾತ್ರಿ 9.45ರ ಸುಮಾರಿಗೆ ರಾಜೌರಿ ಗಾರ್ಡನ್ ಪೊಲೀಸ್ ಠಾಣೆಗೆ ಮಾಹಿತಿ ಬಂದಿದೆ. ಬಳಿಕ ಬೀಟ್ ಅಧಿಕಾರಿಗಳನ್ನು ಸ್ಥಳಕ್ಕೆ ಕಳುಹಿಸಲಾಯಿತು. ಅವರು ಘಟನೆ ನಿಜವೆಂದು ದೃಢಪಡಿಸಿದರು.

ನಂತರ ವಿಶೇಷ ಸಿಬ್ಬಂದಿ, ಮಾದಕ ದ್ರವ್ಯ ವಿರೋಧಿ, ಎಎಟಿಎಸ್ ಹಾಗೂ ವಿವಿಧ ತಂಡಗಳು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿದರು. ಸುಮಾರು 10 ಅಥವಾ ಅದಕ್ಕಿಂತ ಹೆಚ್ಚು ಸುತ್ತು ಗುಂಡು ಹಾರಿಸಲಾಗಿದೆ ಎಂದು ತಿಳಿದು ಬಂದಿದೆ. ಒಬ್ಬ ವ್ಯಕ್ತಿ ಸಾವನ್ನಪ್ಪಿದ್ದಾನೆ. ಆ ವ್ಯಕ್ತಿಯ ಗುರುತು ಇನ್ನು ಪತ್ತೆಯಾಗಿಲ್ಲ. ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾದ ದೃಶ್ಯಗಳಿಂದ ಇನ್ನಷ್ಟು ಮಾಹಿತಿ ಲಭಿಸಲಿದೆ. ಗುಂಡಿನ ದಾಳಿ ನಡೆಸಿದವರನ್ನು ಬಂಧಿಸಲು ತಂಡಗಳನ್ನು ರಚಿಸಲಾಗುತ್ತಿದೆ. ಪ್ರಕರಣದ ತನಿಖೆಯನ್ನು ತೀವ್ರಗೊಳಿಸಲಾಗಿದೆ ಎಂದು ತಿಳಿಸಿದರು.

More articles

Latest article

Most read