ಮುಂಬೈ: ಎಂದು ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನಾ (ಯುಬಿಟಿ) ನಾಯಕ ಆದಿತ್ಯ ಠಾಕ್ರೆ ಸೋಮವಾರ ಒತ್ತಾಯಿಸಿದ್ದಾರೆ. ಬೆಳಗಾವಿಯಲ್ಲಿ ವಾರ್ಷಿಕ ಸಮಾವೇಶ ನಡೆಸಲು ಮಹಾರಾಷ್ಟ್ರ ಏಕೀಕರಣ ಸಮಿತಿಗೆ (ಎಂಇಎಸ್) ಕರ್ನಾಟಕ ಸರ್ಕಾರ ಅನುಮತಿ ನಿರಾಕರಿಸಿರುವ ಹಿನ್ನೆಲೆಯಲ್ಲಿ ಅವರು ಈ ಹೇಳಿಕೆ ನೀಡಿದ್ದಾರೆ. ವೊರ್ಲಿ ಕ್ಷೇತ್ರದ ಶಾಸಕ ಹಾಗೂ ಮಹಾರಾಷ್ಟ್ರ ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕರೂ ಆಗಿರುವ ಆದಿತ್ಯ ಠಾಕ್ರೆ ಕೇಂದ್ರ ಸರ್ಕಾರದ ಮುಂದೆ ಈ ಬೇಡಿಕೆ ಇಟ್ಟಿದ್ದಾರೆ. ವಿಧಾನಭವನ ಆವರಣದಲ್ಲಿ ಮಾತನಾಡಿದ ಆದಿತ್ಯ, ಮಹಾರಾಷ್ಟ್ರದಲ್ಲಿ ಹೊಸ ಸರ್ಕಾರ ರಚನೆಯಾಗಿದ್ದು, ಸಂಭ್ರಮಾಚರಣೆ ನಡೆಯುತ್ತಿದೆ. ಮತ್ತೊಂದು ಕಡೆ ಬೆಳಗಾವಿಯ ಪರಿಸ್ಥಿತಿಯನ್ನು ನೋಡಿ. ನೆರೆಯ ಈ ಪ್ರದೇಶದಲ್ಲಿ, ಮರಾಠಿ ಭಾಷಿಕರ ಹಕ್ಕುಗಳು ಮತ್ತು ಸ್ವಾತಂತ್ರ್ಯವನ್ನು ಕಸಿದುಕೊಳ್ಳಲಾಗುತ್ತಿದೆ ಎಂದು ಹೇಳಿದ್ದಾರೆ. ಗಡಿಯತ್ತ ತೆರಳುತ್ತಿದ್ದ ಶಿವಸೇನಾ (ಯುಬಿಟಿ) ನಾಯಕರು ಹಾಗೂ ಕಾರ್ಯಕರ್ತರ ಗುಂಪನ್ನು ಕೊಲ್ಲಾಪುರದಲ್ಲಿ ತಡೆಯಲಾಗಿದೆ. ಬೆಳಗಾವಿ, ಕಾರವಾರ, ನಿಪ್ಪಾಣಿ, ಬೀಡ್ ಸೇರಿದಂತೆ ಗಡಿಯಲ್ಲಿರುವ ಸುಮಾರು 814 ಗ್ರಾಮಗಳ ಮೇಲಿನ ಹಕ್ಕನ್ನು ಪ್ರತಿಪಾದಿಸುತ್ತಿರುವ ಮಹಾರಾಷ್ಟ್ರ, ಮರಾಠಿ ಭಾಷಿಕರು ಹೆಚ್ಚಿನ ಸಂಖ್ಯೆಯಲ್ಲಿರುವ, ಈ ಪ್ರದೇಶಗಳನ್ನು ರಾಜ್ಯಕ್ಕೆ ಸೇರಿಸಬೇಕು ಎಂದು ಒತ್ತಾಯಿಸುತ್ತಿದೆ. ಉಭಯ ರಾಜ್ಯಗಳ ನಡುವಣ ದೀರ್ಘ ಕಾಲದಿಂದಲೂ ಚಾಲ್ತಿಯಲ್ಲಿರುವ ಗಡಿ ಬಿಕ್ಕಟ್ಟು, ಮತ್ತಷ್ಟು ತೀವ್ರಗೊಳ್ಳುವ ಸಾಧ್ಯತೆ ಇದೆ. ಈ ವಿಚಾರವು ಸದ್ಯಕ್ಕೆ ಸುಪ್ರೀಂ ಕೋರ್ಟ್ ಅಂಗಳದಲ್ಲಿದೆ.
ಇಂದು ಮಹಾಮೇಳಾವ ನಡೆಸಲು ಎಂಇಎಸ್ ಅನುಮತಿ ಕೋರಿತ್ತು. ಆದರೆ ಬೆಳಗಾವಿ ಜಿಲ್ಲಾಡಳಿತ ನಿರಾಕರಿಸಿತ್ತು. ಮುನ್ನೆಚ್ಚರಿಕೆಯ ಕ್ರಮವಾಗಿ ಎಂಇಎಸ್ ನಾಯಕರನ್ನು ಬಂಧಿಸಲಾಗಿದೆ.