ಈ ಬಾರಿ ಉತ್ತಮ ಮಳೆಯಾಗಿರುವ ಪರಿಣಾಮ ಈಗಾಗಲೇ ತಮಿಳುನಾಡಿಗೆ 84TMCಯಷ್ಟು ನೀರು ತಲುಪಿದೆ. ಮುಂದಿನ 10 ವರ್ಷವೂ ಬಾಗಿನ ಅರ್ಪಿಸುವಂತಹ ಆಶೀರ್ವಾದವನ್ನು ಕಾವೇರಿ ತಾಯಿ ನಮ್ಮ ಸರ್ಕಾರಕ್ಕೆ ನೀಡುತ್ತಾಳೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹರ್ಷ ವ್ಯಕ್ತಪಡಿಸಿದ್ದಾರೆ.
KRS ಅಣೆಕಟ್ಟಿಗೆ ಬಾಗಿನ ಸಮರ್ಪಿಸಿದ ನಂತರ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ಕನ್ನಂಬಾಡಿ ಕಟ್ಟೆ ನಮ್ಮೆಲ್ಲರ ಅನ್ನದ ತಟ್ಟೆ. ಮೈಸೂರು, ಚಾಮರಾಜನಗರ, ಹಾಸನ, ಮಂಡ್ಯ ಮತ್ತು ತಮಿಳುನಾಡಿನವರು ಈ ನದಿಯ ಮೂಲಕ ಅನ್ನ ಬೆಳೆಯುತ್ತಿದ್ದೇವೆ. ಎಲ್ಲರ ಪಾಲಿನ ಜೀವನದಿ ಕಾವೇರಿಗೆ 92 ವರ್ಷ ಕಳೆದರೂ ನಮನ ಸಲ್ಲಿಸುತ್ತಿದ್ದೇವೆ. ತಾಯಿ ಚಾಮುಂಡೇಶ್ವರಿಯಲ್ಲಿ ಈ ವರ್ಷ ಉತ್ತಮ ಮಳೆಯಾಗಲಿ ಎಂದು ಬೇಡಿಕೊಂಡಿದ್ದೆವು. ʼಜುಲೈ ತಿಂಗಳಿನಲ್ಲಿ ಪ್ರತಿದಿನ 1TMCಯಂತೆ ತಮಿಳುನಾಡಿಗೆ 40TMC ನೀರು ಹರಿಸಬೇಕಿತ್ತು. ಅದಕ್ಕಿಂತ ಹೆಚ್ಚಿನ ನೀರು ಹರಿದು ತಾಯಿ ಕಾವೇರಿ ನೆಮ್ಮದಿ ಶಾಂತಿ ತಂದಿದ್ದಾಳೆ ಎಂದು ಹೇಳಿದರು.
ತಮಿಳುನಾಡಿಗೆ ನಾನು ಅಥವಾ ಸಿದ್ದರಾಮಯ್ಯನವರು ನೀರು ಬಿಟ್ಟಿಲ್ಲ. ತಾಯಿ ಕೃಪೆಯಿಂದ ಹೆಚ್ಚು ಮಳೆ ಬಂದಿದೆ, ಆದ ಕಾರಣ ನೀರು ಅವರಿಗೆ ಹೋಗಿದೆ. ಮುಖ್ಯಮಂತ್ರಿಗಳು ಅಧಿಕಾರಕ್ಕೆ ಬಂದ ನಂತರ ಮಳೆ ಬರಲಿಲ್ಲ, ನೀರು ಬರಲಿಲ್ಲ ಎಂದು ಅಪಪ್ರಚಾರ ಮಾಡುತ್ತಿದ್ದರು. ಅವರಿಗೆಲ್ಲ ಈಗ ತಕ್ಕ ಉತ್ತರ ಸಿಕ್ಕಿದೆ ಎಂದು ಟೀಕಿಸಿದರು.
ಮೇಕೆದಾಟು ಯೋಜನೆಯಿಂದ ತಮಿಳುನಾಡಿಗೆ ಹೆಚ್ಚಿನ ಪ್ರಯೋಜನವಿದೆ. ಸಂಕಷ್ಟ ಕಾಲದಲ್ಲಿ ಅವರ ಪಾಲಿನ 177TMC ನೀರನ್ನು ಅವರಿಗೆ ಹರಿಸಬಹುದು. ಸುಮಾರು 400 ಮೆಗಾ ವ್ಯಾಟ್ ವಿದ್ಯುತ್ ತಯಾರಿಸಬಹುದು. ಈ ಅಣೆಕಟ್ಟು ಕಟ್ಟಲು ನ್ಯಾಯಲಯವು ಅನುವು ಮಾಡಿಕೊಡುತ್ತದೆಂದು ನಂಬಿದ್ದೇವೆ. ತಮಿಳುನಾಡಿನ ಜನತೆಗೆ ಭಗವಂತನ ಕೃಪೆಯಿಂದ ಜ್ಞಾನೋದಯವಾಗುತ್ತದೆ. ನಮ್ಮ ಕಾಲದಲ್ಲಿ ಅಣೆಕಟ್ಟು ನಿರ್ಮಾಣಕ್ಕೆ ಅನುವು ಮಾಡಿಕೊಡುತ್ತಾರೆಂದು ನಂಬಿದ್ದೇವೆ ಎಂದರು. 2018-19ರಲ್ಲಿ 404TMC, 2019-20ರಲ್ಲಿ 275, 2020- 21ರಲ್ಲಿ 211, 2021-22ರಲ್ಲಿ 281, 2022-23ರಲ್ಲಿ 667 ಹಾಗೂ 2023-24ರಲ್ಲಿ 87TMC ನೀರು ತಮಿಳುನಾಡಿಗೆ ಹರಿದಿದೆ. ಈ ವರ್ಷ 84TMC ನೀರು ಹರಿದಿದ್ದು, ಇದೇ ರೀತಿ ಮಳೆ ಬರಲಿ ಎಂದು ಎಲ್ಲರೂ ಪ್ರಾರ್ಥನೆ ಮಾಡಬೇಕು” ಎಂದು ಹೇಳಿದರು.