ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಅವರಿಗೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿರುವುದನ್ನು ಪ್ರಶ್ನಿಸಿ ಬೆಂಗಳೂರು ಪೊಲೀಸರು ಸುಪ್ರೀಂ ಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಿದ್ದಾರೆ. ಹಾಗಾಗಿ ದರ್ಶನ್ ಹಾಗೂ ಇತರ ಆರೋಪಿಗಳಿಗೆ ಮತ್ತೆ ಕಾನೂನಿನ ಸಂಕಷ್ಟ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ನಲ್ಲಿ ವಾದ ಮಂಡಿಸಲು ದರ್ಶನ್ ಖ್ಯಾತ ಸುಪ್ರೀಂ ಕೋರ್ಟ್ ಹಿರಿಯ ವಕೀಲ ಕಪಿಲ್ ಸಿಬಲ್ ಅವರನ್ನು ಸಂಪರ್ಕಿಸಿದ್ದಾರೆ ಎಂದು ತಿಳಿದು ಬಂದಿದೆ.
ಅನೇಕ ಪ್ರತಿಷ್ಠಿತ ಪ್ರಕರಣಗಳನ್ನು ನಿಭಾಯಿಸಿದ ಖ್ಯಾತಿ ಕಪಿಲ್ ಸಿಬಲ್ ಅವರಿಗೆ ಇದೆ. ಇದೀಗ ದರ್ಶನ್ ಕುಟುಂಬದವರು ಕೂಡ ಅವರನ್ನೇ ಭೇಟಿಯಾಗಿದ್ದಾರೆ. ಕಪಿಲ್ ಸಿಬಲ್ ಭೇಟಿಯಾಗಿ ಚರ್ಚೆ ನಡೆಸಿದ್ದಾರೆ. ಹೈಕೋರ್ಟ್ನಲ್ಲಿ ನಡೆದ ವಾದ ಪ್ರತಿವಾದ ಹಾಗೂ ಪ್ರಕರಣದ ಸಂಪೂರ್ಣ ಮಾಹಿತಿಯನ್ನು ಅವರಿಗೆ ನೀಡಲಾಗಿದೆ. ದರ್ಶನ್, ಪವಿತ್ರಾ ಗೌಡ ಸೇರಿ 7 ಆರೋಪಿಗಳ ಪರವಾಗಿ ಕಪಿಲ್ ಸಿಬಲ್ ಅವರು ಸುಪ್ರೀಂ ಕೋರ್ಟ್ನಲ್ಲಿ ವಾದ ಮಾಡಲು ಒಪ್ಪಿಕೊಂಡಿದ್ದಾರೆ.
ಮಾರ್ಚ್ 18ರಂದು ಸುಪ್ರೀಂ ಕೋರ್ಟ್ನಲ್ಲಿ ಮೇಲ್ಮನವಿ ವಿಚಾರಣೆ ನಡೆಯಲಿದೆ. ಸುಪ್ರೀಂ ಕೋರ್ಟ್ ನೀಡುವ ತೀರ್ಪಿನ ಆಧಾರದಲ್ಲಿ ದರ್ಶನ್, ಪವಿತ್ರಾ ಗೌಡ ಹಾಗೂ ಇನ್ನುಳಿದ ಆರೋಪಿಗಳ ಭವಿಷ್ಯ ನಿರ್ಧಾರ ಆಗಲಿದೆ.