ಬೆಂಗಳೂರು: ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಎಚ್.ಸಿ.ಮಹದೇವಪ್ಪ ಮತ್ತು ಮೈಸೂರು ಜಿಲ್ಲಾಡಳಿತ ಇಂದು ಕಾವೇರಿ ನಿವಾಸದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನಾಡ ಹಬ್ಬ ದಸರಾದ ಆಹ್ವಾನ ಪತ್ರಿಕೆ ನೀಡಿ ಆಹ್ವಾನಿಸಿದರು. ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರು ಉಪಸ್ಥಿತರಿದ್ದರು.
ನಂತರ ಮುಖ್ಯಮಂತ್ರಿಗಳು ಎಕ್ಸ್ ನಲ್ಲಿ ನಾಡಹಬ್ಬದಸರಾದ ಅಧಿಕೃತ ಆಮಂತ್ರಣ ಪತ್ರಿಕೆ ಇಂದು ನನ್ನ ಕೈಸೇರಿದೆ. ದಸರೆಯು ಕೇವಲ ಧಾರ್ಮಿಕ ಹಬ್ಬ ಮಾತ್ರವಲ್ಲ, ಈ ನೆಲದ ಪರಂಪರೆ, ಕಲೆ, ಸಂಸ್ಕೃತಿಗಳನ್ನು ಶತಶತಮಾನಗಳಿಂದ ಅನನ್ಯವಾಗಿ ವಿಶ್ವಕ್ಕೆ ಸಾದರಪಡಿಸುತ್ತಿರುವ ಸಾಂಸ್ಕೃತಿಕ ಕಲಾ ಉತ್ಸವ. ದಸರಾ ಹಬ್ಬವು ಒಳಿತಿನ ವಿಜೃಂಭಣೆಯ, ನಾಡಿನ ಕಲಾವಂತಿಕೆ, ಸಾಹಸಗಳನ್ನು ಸಂಭ್ರಮಿಸುವ ಸಡಗರದ ಹಬ್ಬ, ಜನಮನದ ಹಬ್ಬ. ಈ ಹಬ್ಬದಲ್ಲಿ ಪಾಲ್ಗೊಳ್ಳಲು ನಾನು ಅತ್ಯಂತ ಉತ್ಸುಕನಾಗಿದ್ದೇನೆ.
ವಿಶ್ವವಿಖ್ಯಾತ ಮೈಸೂರು ದಸರಾದಲ್ಲಿ ಈ ಬಾರಿ ವೈಮಾನಿಕ ಪ್ರದರ್ಶನ ಕೂಡ ನಡೆಯಲಿದ್ದು, ಇದು ದಸರಾ ಮೆರುಗನ್ನು ಮತ್ತಷ್ಟು ಹೆಚ್ಚಿಸಲಿದೆ ಎಂದು ಭಾವಿಸಿದ್ದೇನೆ. ಕರೆಯೋಲೆ ನೀಡಿ, ಪ್ರೀತಿಯಿಂದ ಆಹ್ವಾನಿಸಿದ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಹೆಚ್.ಸಿ.ಮಹದೇವಪ್ಪ ಮತ್ತು ಜಿಲ್ಲಾಡಳಿತಕ್ಕೆ ಧನ್ಯವಾದಗಳು.
ಈ ಬಾರಿಯ ದಸರಾವನ್ನು ನಾವೆಲ್ಲರೂ ಜೊತೆಗೂಡಿ ಯಶಸ್ವಿಯಾಗಿಸೋಣ ಎಂದು ಹೇಳಿದ್ದಾರೆ.