ದಸರಾ ಉದ್ಘಾಟನೆಗೆ ಆಯ್ಕೆಯಾಗಿರುವ ಬಾನು ಮುಷ್ತಾಕ್ ಅವರಿಗೆ ವಿಶಿಷ್ಠ ಬಾಗಿನ ಅರ್ಪಿಸಿದ ಕಲಾವಿದೆ ಶಶಿಕಲಾ

Most read

ಹಾಸನ: ಮೈಸೂರು ದಸರಾ ಮಹೋತ್ಸವದ ಉದ್ಘಾಟನೆ ನೆರವೇರಿಸಲು ಆಯ್ಕೆಯಾಗಿರುವ ಅಂತರಾಷ್ಟ್ರೀಯ ಬೂಕರ್ ಪ್ರಶಸ್ತಿ ವಿಜೇತೆ ಕನ್ನಡದ ಹೆಮ್ಮೆಯ ಸಾಹಿತಿ ಬಾನು ಮುಷ್ತಾಕ್ ಅರವರಿಗೆ ಕಲಾವಿದೆ ಶಶಿಕಲಾ ಅವರು ಪಾರಂಪರಿಕ ರೀತಿಯಲ್ಲಿ ಬಾಗಿನ ಅರ್ಪಿಸಿ ಶುಭ ಹಾರೈಸಿದ್ದಾರೆ.

ವಿಶೇಷ ರೀತಿಯಲ್ಲಿ ಬಾಗಿನ ಸಿದ್ಧಪಡಿಸಿ ಬಾನು ಅವರಿಗೆ ಅರ್ಪಿಸಿದ್ದು, ಗಮನ ಸೆಳೆದಿದೆ. ಬಾಗಿನದಲ್ಲಿ ಹಸಿ ಅಕ್ಕಿ, ಅರಿಶಿನ-ಕುಂಕುಮ, ಸಕ್ಕರೆ, ತೆಂಗಿನ ಕಾಯಿ, ಹಣ್ಣು-ಹೂವು, ಬಳೆ, ಎಲೆ ಅಡಿಕೆ ಇತರೆ ವಸ್ತುಗಳನ್ನು ಇರಿಸಿದ್ದ ಬಾಗಿನವನ್ನು ಬಾನು ಮುಷ್ತಾಕ್ ಅವರಿಗೆ ಅರ್ಪಿಸುವ ಮೂಲಕ ಶಶಿಕಲಾ ತಮ್ಮ ಗೌರವವನ್ನು ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, “ಈ ಬಾಗಿನದಲ್ಲಿ ನನ್ನ ಹೃದಯದ ಪ್ರೀತಿ, ಕನ್ನಡದ ಕೃತಜ್ಞತೆ ಮತ್ತು ಬಾನು ತಾಯಿಯ ಸಾಧನೆಗೆ ನನ್ನ ಸಣ್ಣ ಹಾರೈಕೆಗಳಿವೆ” ಎಂದು ಭಾವುಕರಾಗಿ ಪ್ರತಿಕ್ರಿಯಿಸಿದರು.

ಸ್ವತಃ ಚಾಮುಂಡೇಶ್ವರಿ ದೇವಿಯೇ ಬಾನು ಅವರನ್ನು ದಸರಾ ಉತ್ಸವಕ್ಕೆ ಕರೆಸಿಕೊಳ್ಳುತ್ತಿದ್ದಾಳೆ. ಇದು ಕನ್ನಡಕ್ಕೆ ಸಂದ ಗೌರವ. ಕನ್ನಡಕ್ಕಾಗಿ ಸೇವೆ ಸಲ್ಲಿಸುತ್ತಿರುವ ಮಹಿಳೆಗೆ ಸಿಕ್ಕ ಗೌರವ ಮಾತ್ರವಲ್ಲ ನಾಡಿನ ಮಹಿಳೆಯರಿಗೆ ಸಲ್ಲಿಕೆಯಾಗುತ್ತಿರುವ ಗೌರವ ಎಂದು ಹೇಳಿದರು. ಅಂತರಾಷ್ಟ್ರೀಯ ಬೂಕರ್ ಪ್ರಶಸ್ತಿಯನ್ನು ಪಡೆದ ಬಾನು ಮುಷ್ತಾಕ್ ರವರು ಕನ್ನಡ ಸಾಹಿತ್ಯಕ್ಕೆ ಹೊಸ ಶಕ್ತಿ ತುಂಬಿದವರು. ಗ್ರಾಮೀಣ ಮಹಿಳೆಯ ಹೃದಯದ ದೀಪವನ್ನು ಆಳವಾಗಿ ಬೆಳಗಿಸಿದ ಅವರ ಕೃತಿಗಳು, ಕನ್ನಡದ ಅಂಚುಗಳಿಂದ ಜಾಗತಿಕ ವೇದಿಕೆಗೆ ಬೆಳಕು ಹರಿಸಿವೆ. ಅವರ ಕೈಯಿಂದ ನಾಡಹಬ್ಬ ದಸರಾ ಉದ್ಘಾಟನೆಯಾಗುತ್ತಿರುವುದು ಕೇವಲ ಸಾಹಿತ್ಯ ಲೋಕಕ್ಕೆ ಮಾತ್ರವಲ್ಲ, ಸಂಪೂರ್ಣ ಕನ್ನಡಿಗರಿಗೆ ಹೆಮ್ಮೆಯ ಸಂಗತಿ ಎಂದು ಶಶಿಕಲಾ ತಿಳಿಸಿದ್ದಾರೆ.

More articles

Latest article