ಬೆಂಗಳೂರು; ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿಯಾದ ದರ್ಶನ್ ಗಂಡಾಂತರದಿಂದ ಪಾರಾಗಿದ್ದಾರೆ. ರೆಗ್ಯುಲರ್ ಜಾಮೀನು ಸಿಗುವವರೆಗೆ ಮಧ್ಯಂತರ ಜಾಮೀನು ಮುಂದುವರಿಯಲಿದೆ. ಡಿ.11, ಬುಧವಾರ ದರ್ಶನ್ ಗೆ ಬೆನ್ನುನೋವಿಗೆ ಸರ್ಜರಿ ನಡೆಯಲಿದೆ.
ಹೈಕೋರ್ಟ್ ನಲ್ಲಿ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿಗಳಾದ ದರ್ಶನ್, ಪವಿತ್ರಾಗೌಡ ಮತ್ತಿತರ ಆರೋಪಿಗಳ ರೆಗ್ಯುಲರ್ ಜಾಮೀನು ಅರ್ಜಿ ವಿಚಾರಣೆ ಇಂದಿಗೆ ಪೂರ್ಣಗೊಂಡಿತು. ಜಾಮೀನು ಆದೇಶ ಕಾಯ್ದಿರಿಸಿದ ನ್ಯಾಯಮೂರ್ತಿಗಳು, ರೆಗ್ಯುಲರ್ ಜಾಮೀನು ಅರ್ಜಿ ಕುರಿತ ಆದೇಶ ಪ್ರಕಟವಾಗುವವರೆಗೆ ಮಧ್ಯಂತರ ಜಾಮೀನು ಆದೇಶ ಮುಂದುವರೆಯಲಿದೆ ಎಂದು ಪ್ರಕಟಿಸಿದರು.
ದರ್ಶನ್ ಜಾಮೀನು ಅರ್ಜಿ ವಿಚಾರಣೆ ಆರಂಭವಾಗುತ್ತಿದ್ದಂತೆ ಎಸ್ ಪಿಪಿ ಪ್ರಸನ್ನಕುಮಾರ್ ವಾದ ಮಂಡಿಸಿ ದರ್ಶನ್ ಸೇರಿದಂತೆ ಎಲ್ಲ ಆರೋಪಿಗಳ ರೆಗ್ಯುಲರ್ ಜಾಮೀನಿಗೆ ವಿರೋಧ ವ್ಯಕ್ತಪಡಿಸಿದರು.
ಪುನೀತ್ ಮೊಬೈಲ್ ನಲ್ಲಿದ್ದ ಪೋಟೋಗಳ ಬಗ್ಗೆ ಪ್ರಸ್ತಾಪಿಸಿದ ಎಸ್ ಪಿಪಿ, ದರ್ಶನ್ ತಂಡದ ಆರೋಪಿ ಧನರಾಜ್ ರೇಣುಕಾಸ್ವಾಮಿಯನ್ನು ವಿದ್ಯುತ್ ಶಾಕ್ ಕೊಟ್ಟು ಹತ್ಯೆ ಮಾಡಿದ್ದಾನೆ. ಇವರೆಲ್ಲರೂ ಶೆಡ್ ನಲ್ಲಿದ್ದರು ಎನ್ನುವುದಕ್ಕೆ ಟೈಮ್ ಟವರ್ ಲೋಕೇಷನ್ ಸಾಕ್ಷಿಯಿದೆ. ಎ9 ಧನರಾಜ್, ಎ5 ನಂದೀಶ್, ಎ3 ಪವನ್ ಸೇರಿ ಮೂರೂ ಮಂದಿ ರೇಣುಕಾಸ್ವಾಮಿಯನ್ನು ಕಟ್ಟಿಗೆಯಿಂದ ಹೊಡೆದಿದ್ದಾರೆ. ಪುನೀತ್ ಪ್ರಕಾರ ದರ್ಶನ್, ರೇಣುಕಾಸ್ವಾಮಿ ಎದೆಗೆ ಒದ್ದಿದ್ದಾರೆ. ನೋಡೋ ಇವಳೇ ನನ್ನ ಹೆಂಡತಿ ಎಂದು ಹೇಳಿ ಹಲ್ಲೆ ನಡೆಸಿದ್ದಾರೆ. ಪವಿತ್ರಾಗೌಡ ಅವರೂ ಚಪ್ಪಲಿಯಿಂದ ಹೊಡೆದಿದ್ದಾರೆ. ದರ್ಶನ್ ರೇಣುಕಾಸ್ವಾಮಿ ಪ್ಯಾಂಟ್ ಬಿಚ್ಚಿಸಿ ಮರ್ಮಾಂಗಕ್ಕೆ ಒದ್ದಿದ್ದಾರೆ ಎಂದು ಪುನೀತ್ ಹೇಳಿರುವುದನ್ನು ನ್ಯಾಯಾಲಯದ ಗಮನಕ್ಕೆ ತಂದರು.
ನಾಡಿದ್ದು, ದರ್ಶನ್ ಬೆನ್ನುನೋವಿಗೆ ಸರ್ಜರಿ:
ಎಸ್ ಪಿಪಿ ವಾದದ ನಂತರ ಮಾತನಾಡಿದ ದರ್ಶನ್ ಪರ ವಕೀಲ ಸಿ.ವಿ. ನಾಗೇಶ್ ಅವರು ದರ್ಶನ್ ಗೆ ನಾಡಿದ್ದು ಬೆನ್ನುನೋವಿಗೆ ಸರ್ಜರಿ ನಡೆಯಲಿದೆ. ಸರ್ಜರಿಗೆ ಸಿದ್ದತೆ ಮಾಡಿಕೊಳ್ಳಲಾಗುತ್ತಿದೆ. ದರ್ಶನ್ ಗೆ ಸ್ಟಿರಾಯ್ಡ್ ಇಂಜೆಕ್ಷನ್ ನೀಡಲಾಗುತ್ತಿದೆ. ಈಗ ಫಿಸಿಯೋಥೆರಪಿ, ವ್ಯಾಯಾಮ ಮಾಡಿಸಲಾಗುತ್ತಿದೆ. ಡಿ.11ರಂದು ಸರ್ಜರಿ ಮಾಡುವುದಾಗಿ ಕೋರ್ಟ್ ಗೆ ಮಾಹಿತಿ ನೀಡುವುದಾಗಿ ದರ್ಶನ್ ಪರ ವಕೀಲ ಸಿ.ವಿ.ನಾಗೇಶ್ ಮಾಹಿತಿ ನೀಡಿದರು.
ಅವರು ಜಾಮೀನು ಷರತ್ತು ಉಲ್ಲಂಘಿಸಿಲ್ಲ. ಎಂದೂ ತಿಳಿಸಿದರು. ರೇಣುಕಾಸ್ವಾಮಿ ದೇಹದ ಮೇಲೆ 39 ಗಾಯಗಳಾಗಿದ್ದವು ಎಂದು ಹೇಳುತ್ತಾರೆ. ಆದರೆ ರಕ್ತ ಸೋರುವಂಥ ಗಾಯವಾಗಿದ್ದು ಒಂದೇ ಒಂದು. ಕೊಲೆ ನಡೆದ ಬಹಳ ದಿನಗಳ ಬಳಿಕ FSLಗೆ ಬಟ್ಟೆಗಳನ್ನು ಕಳುಹಿಸಲಾಗಿದೆ. ಅಷ್ಟು ತಡವಾಗಿ DNA ಮಾದರಿ ಸಿಗಲು ಹೇಗೆ ಸಾಧ್ಯ? ಪ್ರಾಸಿಕ್ಯೂಷನ್ ಸುಳ್ಳು ಹೇಳುತ್ತಿದೆ ಎಂದು ನಾಗೇಶ್ ವಾದಸಿದರು.