ಬೆಂಗಳೂರು: ಚಿತ್ರದುರ್ಗದ ಯುವಕ ರೇಣುಕಾ ಸ್ವಾಮಿ ಹತ್ಯೆಯಲ್ಲಿ ಚಿತ್ರ ನಟ ದರ್ಶನ್ ಬಂಧನವಾಗುತ್ತಿದ್ದಂತೆ ಕನ್ನಡ ಚಿತ್ರರಂಗದ ಗಣ್ಯರು ಬಹುತೇಕ ಮೌನದ ಶರಣಾಗಿದ್ದರೆ ಖ್ಯಾತ ನಟಿ ರಮ್ಯಾ ಮಾತ್ರ ತಮ್ಮ ಪ್ರತಿಕ್ರಿಯೆಯನ್ನು ನೀಡಿದ್ದಾರೆ.
ಕಳೆದ ಭಾನುವಾರ ಚಿತ್ರದುರ್ಗದ ರೇಣುಕಾಸ್ವಾಮಿ ಎಂಬ ಯುವಕನನ್ನು ಬೆಂಗಳೂರಿಗೆ ಕರೆಯಿಸಿಕೊಂಡು, ರಾಜರಾಜೇಶ್ವರಿ ನಗರ ಠಾಣೆ ವ್ಯಾಪ್ತಿಯ ಪಟ್ಟಣಗೆರೆಯ ಶೆಡ್ ಒಂದರಲ್ಲಿ ಕೂಡಿಟ್ಟುಕೊಂಡು ಚಿತ್ರಹಿಂಸೆ ನೀಡಿ ಕೊಲೆ ಮಾಡಲಾಗಿತ್ತು. ನಂತರ ಆತನ ಮೃತದೇಹವನ್ನು ಸುಮನಹಳ್ಳಿ ಸಮೀಪದ ರಾಜಾಕಾಲುವೆ ಬಳಿ ಎಸೆದು ಹೋಗಲಾಗಿತ್ತು. ಮೃತದೇಹ ಪತ್ತೆಯಾಗುತ್ತಿದ್ದಂತೆ ತನಿಖೆ ಆರಂಭಿಸಿದ ಕಾಮಾಕ್ಷಿಪಾಳ್ಯ ಪೊಲೀಸರು ಮೃತನ ಗುರುತು ಪತ್ತೆ ಮಾಡಿದ್ದಲ್ಲದೆ ಕೊಲೆಯ ಸಂಚನ್ನು ಕಂಡುಹಿಡಿಯುವಲ್ಲಿ ಯಶಸ್ವಿಯಾಗಿದ್ದರು.
ಇಂದು ಬೆಳಿಗ್ಗೆ ಮೈಸೂರಿನ RADISON BLUE ಹೊಟೇಲ್ ನಲ್ಲಿ ಜಿಮ್ ಮಾಡುತ್ತಿದ್ದ ನಟ ದರ್ಶನ್ ಇನ್ನೇನು ತಮ್ಮ ಸಿನಿಮಾದ ಶೂಟಿಂಗ್ ಗೆ ಹೋಗಬೇಕಿತ್ತು. ಈ ಸಂದರ್ಭದಲ್ಲಿ ಆಗಮಿಸಿದ ಕಾಮಾಕ್ಷಿಪಾಳ್ಯ ಪೊಲೀಸರು ದರ್ಶನ್ ಅವರನ್ನು ವಶಕ್ಕೆ ಪಡೆದು ಬೆಂಗಳೂರಿಗೆ ಕರೆತಂದರು. ಈ ನಡುವೆ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ಸುಮಾರು ಹತ್ತು ಮಂದಿ ಆರೋಪಿಗಳನ್ನೂ ಹಲವೆಡೆ ಬಂಧಿಸಿ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಗೆ ಕರೆತಂದು ವಿಚಾರಣೆ ನಡೆಸಲಾಗಿತ್ತು. ಮತ್ತೊಂದೆಡೆ ಪ್ರಕರಣದ ಕೇಂದ್ರಬಿಂದುವಾಗಿರುವ ದರ್ಶನ್ ಗೆಳತಿ ಮತ್ತು ಚಿತ್ರನಟಿ ಪವಿತ್ರಾ ಗೌಡ ಅವರನ್ನು ಸಹ ಪೊಲೀಸರು ವಶಕ್ಕೆ ಪಡೆದಿದ್ದರು.
ಘಟನೆ ಬಯಲಾಗುತ್ತಿದ್ದಂತೆ ಇಡೀ ರಾಜ್ಯದಲ್ಲಿ ದೊಡ್ಡ ಸಂಚಲನ ಮೂಡಿದ್ದು, ಜನಪ್ರಿಯತೆಯ ಉತ್ತುಂಗದಲ್ಲಿರುವ ಒಬ್ಬ ಚಿತ್ರನಟ ಇಂಥ ಪ್ರಕರಣದಲ್ಲಿ ಭಾಗಿಯಾಗಬಹುದೇ ಎಂಬ ಚರ್ಚೆ ಆರಂಭವಾಗಿದೆ. ಆದರೆ ಕನ್ನಡ ಚಿತ್ರರಂಗದ ಗಣ್ಯರು ಮಾತ್ರ ಇದುವರೆಗೆ ಮೌನಕ್ಕೆ ಶರಣಾಗಿದ್ದರೆ, ಕೆಲವರು ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ಮಾತನಾಡುತ್ತಿದ್ದಾರೆ.
ಆದರೆ ನೇರನಡೆ ನುಡಿಗೆ ಖ್ಯಾತಿಯಾದ ಚಿತ್ರನಟಿ ರಮ್ಯಾ (ದಿವ್ಯ ಸ್ಪಂದನ) ತಮ್ಮದೇ ಆದ ರೀತಿಯಲ್ಲಿ ಪ್ರಕರಣದ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ.
ಕನ್ನಡ ಬಾಕ್ಸ್ ಆಫೀಸ್ ಎಂಬ ಹೆಸರಿನ ಟ್ವಿಟರ್ ಹ್ಯಾಂಡಲ್ ನಲ್ಲಿ ಒಂದು ಪೋಸ್ಟ್ ಹಾಕಲಾಗಿದ್ದು, ದರ್ಶನ್ ಮೇಲೆ ಸೆಕ್ಷನ್ 302 (ಕೊಲೆ ಪ್ರಕರಣ) ಅಡಿ ಕೇಸು ದಾಖಲಾಗಿದೆ. ಖಂಡಿತವಾಗಿಯೂ ಅವರಿಗೆ ಜೀವಾವಧಿ ಶಿಕ್ಷೆ ಆಗಲಿದೆ. ಏನಾದರೂ ಪ್ರಕರಣದಲ್ಲಿ ಬೇರೆ ತೀರ್ಪು ಬಂದರೆ , ಅದು ಹಣ, ಪ್ರಭಾವದ ಪರಿಣಾಮವಾಗಿರುತ್ತದೆ ಅಷ್ಟೇ ಅಲ್ಲ ಭಾರತೀಯ ನ್ಯಾಯಾಂಗ ವ್ಯವಸ್ಥೆಯ ಅಪಹಾಸ್ಯವಾಗಲಿದೆ. ಮೃತ ಯುವಕನಿಗೆ ನ್ಯಾಯ ದೊರೆಯುವಂತಾಗಲಿ ಎಂದು ಬರೆಯಲಾಗಿದೆ.
ನಟಿ ರಮ್ಯಾ ಈ ಪೋಸ್ಟನ್ನು ಶೇರ್ ಮಾಡಿದ್ದು, ಆರೋಪಿ ದರ್ಶನ್ ಗೆ ಶಿಕ್ಷೆಯಾಗಬೇಕು ಎಂಬ ಅಭಿಪ್ರಾಯವನ್ನು ಸೂಕ್ಷ್ಮವಾಗಿ ವ್ಯಕ್ತಪಡಿಸಿದ್ದಾರೆ.