ಬೆಂಗಳೂರು: ರೇಣುಕಾಸ್ವಾಮಿ ದಾರುಣ ಕೊಲೆ ಪ್ರಕರಣದಲ್ಲಿ ಬಂಧಿತರಾಗಿರುವ ಆರೋಪಿಗಳ ಪೈಕಿ ದೀಪಕ್ ಎಂಬಾತ ಪೊಲೀಸ್ ಅಪ್ರೂವರ್ ಆಗಲಿದ್ದಾರೆ ಎಂಬ ಸ್ಫೋಟಕ ಮಾಹಿತಿ ಹೊರಬಿದ್ದಿದೆ.
ಪ್ರಕರಣದ ಎ-13 ಆರೋಪಿಯಾಗಿರುವ ದೀಪಕ್ ಪೊಲೀಸ್ ವಿಚಾರಣೆ ಸಂದರ್ಭದಲ್ಲಿ ರೇಣುಕಾಸ್ವಾಮಿಯ ಮೇಲೆ ನಡೆದ ಭೀಕರ ಹಲ್ಲೆಯ ಕುರಿತು ವಿವರಿಸಿದ್ದಾನೆ. ದೀಪಕ್ ಹೇಳಿಕೆಯ ಪ್ರಕಾರ ದರ್ಶನ್ ಸಿಟ್ಟಿನಿಂದ ರೇಣುಕಾಸ್ವಾಮಿಯ ಮರ್ಮಾಂಗಕ್ಕೆ ಒದ್ದಿದ್ದಾನೆ. ದೀಪಕ್ ಈಗಾಗಲೇ ಸಿಆರ್ ಪಿಸಿ ಸೆಕ್ಷನ್ 61ರ ಅನ್ವಯ ಪೊಲೀಸರಿಗೆ ಹೇಳಿಕೆ ನೀಡಿದ್ದಾನೆ. ಈತನನ್ನು ಮಾಫಿ ಸಾಕ್ಷಿಯನ್ನಾಗಿ ಪರಿಗಣಿಸುವ ಸಾಧ್ಯತೆ ಇದೆ.
ಒಂದು ವೇಳೆ ದೀಪಕ್ ಅಪ್ರೂವರ್ ಆದಲ್ಲಿ ಪೊಲೀಸರು ಆತನನ್ನು ನ್ಯಾಯಾಲಯದ ಮುಂದೆ ಮತ್ತೆ ಹಾಜರುಪಡಿಸಿ, ನ್ಯಾಯಾಧೀಶರ ಸಮ್ಮುಖದಲ್ಲಿ ಸಿಆರ್ ಪಿಸಿ ಸೆಕ್ಷನ್ 164ರ ಅಡಿಯಲ್ಲಿ ಸ್ವ ಇಚ್ಛಾ ಹೇಳಿಕೆ ಕೊಡಿಸಲಿದ್ದಾರೆ. ಪೊಲೀಸರ ಮುಂದೆ ನೀಡಿದ ಹೇಳಿಕೆಯನ್ನು ನ್ಯಾಯಾಲಯ ಸಾಕ್ಷಿಯನ್ನಾಗಿ ಪರಿಗಣಿಸದೇ ಇದ್ದರೂ ಸೆಕ್ಷನ್ 164ರ ಅಡಿಯಲ್ಲಿ ನ್ಯಾಯಾಧೀಶರ ಮುಂದೆ ನೀಡುವ ಹೇಳಿಕೆ ಪ್ರಬಲ ಸಾಕ್ಷಿಯಾಗುತ್ತದೆ. ಈ ಹಿನ್ನೆಲೆಯಲ್ಲಿ ದೀಪಕ್ ನನ್ನು ಅಪ್ರೂವರ್ ಮಾಡುವ ಸಾಧ್ಯತೆ ಕಂಡುಬರುತ್ತಿದೆ.
ಒಂದು ವೇಳೆ ದೀಪಕ್ ಮಾಫಿ ಸಾಕ್ಷಿಯಾಗಿ ಬದಲಾದರೆ, ಆತನನ್ನು ನ್ಯಾಯಾಲಯ ಕ್ಷಮಿಸಿ ಬಿಡುಗಡೆ ಮಾಡಬಹುದು ಅಥವಾ ಆತನಿಗೆ ಕಡಿಮೆ ಪ್ರಮಾಣದ ಶಿಕ್ಷೆ ವಿಧಿಸಬಹುದಾಗಿದೆ.
ದೀಪಕ್ ಅಲಿಯಾಸ್ ದೀಪಕ್ ಮನೋಹರ್ ಎಂಬಾತ ಶಾಸಕರೊಬ್ಬರ ಸಂಬಂಧಿ ಎಂದು ತಿಳಿದುಬಂದಿದ್ದು, ರೇಣುಕಾಸ್ವಾಮಿ ಕೊಲೆಯಲ್ಲಿ ಈತನ ಹೆಚ್ಚಿನ ಪಾತ್ರ ಇಲ್ಲದೇ ಇದ್ದರೂ ಕೊಲೆ ನಡೆಯುವಾಗ ಈತ ದರ್ಶನ್ ಜೊತೆಯೇ ಇದ್ದರಿಂದಾಗಿ ಬಂಧಿತನಾಗಿದ್ದಾನೆ. ಈಗ ಕೊಲೆ ಪ್ರಕರಣದಲ್ಲಿ ಶಿಕ್ಷೆಗೊಳಗಾಗುವ ಭೀತಿಯಲ್ಲಿ ದೀಪಕ್ ಮಾಫಿ ಸಾಕ್ಷಿಯಾಗಿ ಬದಲಾಗುವ ಸಾಧ್ಯತೆ ಇದೆ.
ರೇಣುಕಾಸ್ವಾಮಿಯ ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಆತ ಮರ್ಮಾಂಗಕ್ಕೆ ಬಿದ್ದ ಬಲವಾದ ಏಟಿನಿಂದಲೇ ಸತ್ತಿದ್ದಾನೆ ಎಂದು ಉಲ್ಲೇಖಿಸಿರುವ ಹಿನ್ನೆಲೆಯಲ್ಲಿ ದೀಪಕ್ ಸಾಕ್ಷ್ಯ ಮಹತ್ವದ ಪಾತ್ರ ವಹಿಸುವ ಸಾಧ್ಯತೆ ಇದ್ದು, ದರ್ಶನ್ ಗೆ ಬಹುದೊಡ್ಡ ಹಿನ್ನಡೆಯಾಗಲಿದೆ.