ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧಿತರಾಗಿರುವ ನಟ ದರ್ಶನ್ ಮತ್ತು ಆತನ ನಾಲ್ವರು ಸಹಚಕರರಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದ್ದು, ಬಿಗಿಭದ್ರತೆಯಲ್ಲಿ ಪರಪ್ಪನ ಅಗ್ರಹಾರ ಜೈಲಿಗೆ ಕರೆದೊಯ್ಯಲಾಯಿತು.
ಪ್ರಕರಣದ ಆರೋಪಿಗಳಾದ A2- ದರ್ಶನ್, A9- ಧನರಾಜ್, A10- ವಿನಯ್, A14 – ಪ್ರದೋಶ್ ಅವರ ಎರಡು ದಿನಗಳ ಪೊಲೀಸ್ ಕಸ್ಟಡಿ ಮುಗಿದ ಹಿನ್ನೆಲೆಯಲ್ಲಿ ಇಂದು 24ನೇ ಎಸಿಎಂಎಂ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು. ನ್ಯಾಯಾಲಯ ಎಲ್ಲ ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಿತು.
ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಆರೋಪಿಗಳನ್ನು ಬೇರೆಬೇರೆ ಜೈಲುಗಳಲ್ಲಿ ಇರಿಸಲು ಆದೇಶಿಸಬೇಕು ಎಂದು ಸರ್ಕಾರಿ ಅಭಿಯೋಜಕರು ವಿನಂತಿಸಿದರು. ಎಲ್ಲರೂ ಒಂದೇ ಜೈಲಿನಲ್ಲಿದ್ದರೆ ಒಳಸಂಚು ನಡೆಸುವ ಸಾಧ್ಯತೆ ಇರುವುದರಿಂದ ಬೇರೆ ಬೇರೆ ಜೈಲುಗಳಿಗೆ ಕಳುಹಿಸಬೇಕು ಎಂದು ಅವರು ವಿನಂತಿಸಿದರು. ಇದಕ್ಕೆ ಸಂಬಂಧಿಸಿದಂತೆ ಸೋಮವಾರ ನ್ಯಾಯಾಲಯ ವಿಚಾರಣೆ ನಡೆಸಲಾಗುವುದು ಎಂದು ನ್ಯಾಯಾಧೀಶರು ಪ್ರಕಟಿಸಿದರು.
ದರ್ಶನ್ ಮತ್ತು ಸಹಚರರನ್ನು ಪರಪ್ಪನ ಅಗ್ರಹಾರ ಜೈಲಿಗೆ ಕರೆದೊಯ್ಯುವ ಮಾರ್ಗದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಡಿಸಿಪಿ ಸಿ.ಕೆ. ಬಾಬಾ ನೇತೃತ್ವದಲ್ಲಿ ಎಸಿಪಿ ಶಿವಶಂಕರ್, ಎಸಿಪಿ ಮಂಜುನಾಥ್, 5 ಇನ್ಸ್ ಪೆಕ್ಟರ್, 10 ಸಬ್ ಇನ್ಸ್ ಪೆಕ್ಟರ್, 3 KSRP ತುಕಡಿಗಳನ್ನು ಒಳಗೊಂಡ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿತ್ತು.
ಪತ್ನಿಯ ಮೇಲೆ ಹಲ್ಲೆ ನಡೆಸಿ ಹಿಂದೆ ಹದಿನಾಲ್ಕು ದಿನಗಳ ಕಾಲ ಜೈಲಿನಲ್ಲಿದ್ದ ದರ್ಶನ್ ಇದೀಗ 13 ವರ್ಷಗಳ ಬಳಿಕ ಮತ್ತೆ ಪರಪ್ಪನ ಅಗ್ರಹಾರ ಜೈಲು ಸೇರಿದ್ದಾನೆ.