ಚಂಡೀಗಢ: ಹಿರಿಯ ಐಪಿಎಸ್ ಅಧಿಕಾರಿ ವೈ. ಪೂರಣ್ ಕುಮಾರ್ ಅವರ ಆತ್ಮಹತ್ಯೆ ಕುರಿತು ತನಿಖೆ ನಡೆಸಲು ಐಜಿಪಿ ಪುಷ್ಪೇಂದ್ರ ಕುಮಾರ್ ನೇತೃತ್ವದಲ್ಲಿ 6 ಸದಸ್ಯರ ವಿಶೇಷ ತನಿಖಾ ತಂಡವನ್ನು (ಎಸ್‌ಐಟಿ) ರಚಿಸಿ ಹರಿಯಾಣ ಸರ್ಕಾರ ಆದೇಶ ಹೊರಡಿಸಿದೆ.
ಪೂರಣ್ ಕುಮಾರ್ ಅವರ ಪತ್ನಿ, ಐಎಎಸ್ ಅಧಿಕಾರಿ ಅನ್ಮೀತ್ ಪಿ. ಕುಮಾರ್ ಅವರು ತಮ್ಮ ಪತಿಯ ಆತ್ಮಹತ್ಯೆಗೆ ಇಬ್ಬರು ಅಧಿಕಾರಿಗಳು ಪ್ರಚೋದನೆ ನೀಡಿದ್ದಾರೆ ಎಂದು ಆರೋಪಿಸಿ ದೂರು ದಾಖಲಿಸಿದ್ದರು. ಇವರ ದೂರಿನನ್ವಯ ಹರಿಯಾಣ ಡಿಜಿಪಿ ಶತ್ರುಜೀತ್ ಸಿಂಗ್ ಕಪೂರ್ ಮತ್ತು ರೋಹ್ಟಕ್ ಎಸ್ ಪಿ ನರೇಂದ್ರ ಬಿಜರ್ನಿಯಾ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಅಕ್ಟೋಬರ್ 9ರಂದು ತನ್ನ ಪತಿ ಆತ್ಮಹತ್ಯೆ ಮಾಡಿಕೊಂಡಿದ್ದು, ದಾಖಲಾಗಿರುವ ಎಫ್‌ಐಆರ್‌ನಲ್ಲಿ ಆರೋಪಗಳನ್ನು ದುರ್ಬಲಗೊಳಿಸಲಾಗಿದೆ ಮತ್ತು ಪ್ರಮುಖ ಆರೋಪಿಗಳ ಹೆಸರುಗಳನ್ನು ಕೈಬಿಟ್ಟಿದ್ದಾರೆ ಎಂದು ಆರೋಪಿಸಿ ಅಮ್ನೀತ್ ಚಂಡೀಗಢ ಎಸ್‌ಎಸ್‌ಪಿಗೆ ಪತ್ರ ಬರೆದಿದ್ದರು. ತನ್ನ ಪತಿ ಆತ್ಮಹತ್ಯೆ ಮಾಡಿಕೊಳ್ಳಲು ಕಾರಣರಾಗಿರುವ ಇಬ್ಬರು ಅಧಿಕಾರಿಗಳ ಹೆಸರನ್ನು ಎಫ್‌ಐಆರ್ ನಲ್ಲಿ ಸೇರಿಸಬೇಕು ಎಂದೂ ಒತ್ತಾಯಿಸಿದ್ದರು.
ಹಲವು ವರ್ಷಗಳಿಂದ ಪೂರಣ್ ಕುಮಾರ್ ಗೆ ಈ ಹಿರಿಯ ಅಧಿಕಾರಿಗಳು ಕಿರುಕುಳ ನೀಡುತ್ತಿದ್ದರು. ಇವರೇ ತಮ್ಮ ಪತಿಯ ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದಾರೆ. ಅವಮಾನ, ಕಿರುಕುಳವನ್ನು ಕಣ್ಣಾರೆ ಕಂಡ ಪತ್ನಿಯಾಗಿ ನಾನು ನ್ಯಾಯಕ್ಕಾಗಿ ಮನವಿ ಮಾಡಿಕೊಳ್ಳುತ್ತಿದ್ದೇನೆ ಎಂದಿದ್ದಾರೆ.
ಪೂರಣ್ ಕುಮಾರ್ ಅವರ ಆತ್ಮಹತ್ಯೆ ಪ್ರಕರಣದಲ್ಲಿ ಇದುವರೆಗೆ 13 ಅಧಿಕಾರಿಗಳ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಈ ಪ್ರಕರಣವು ದೇಶಾದ್ಯಂತ ಆಕ್ರೋಶಕ್ಕೆ ಕಾರಣವಾಗಿದೆ. ವಿಶೇಷವಾಗಿ ದಲಿತ ಸಂಘಟನೆಗಳು ಮತ್ತು ಪ್ರತಿಪಕ್ಷಗಳ ಮುಖಂಡರು ನ್ಯಾಯಕ್ಕಾಗಿ ಒತ್ತಾಯಿಸುತ್ತಿದ್ದಾರೆ.