ಮಡಿಕೇರಿ: ಟಿಬೇಟಿಯನ್ನರ 14ನೇ ಧರ್ಮಗುರು ದಲೈಲಾಮಾ ಅವರು ಅವರು ಬೈಲಕುಪ್ಪೆ ಟಿಬೆಟಿಯನ್ ನಿರಾಶ್ರಿತರ ಶಿಬಿರಕ್ಕೆ ಆಗಮಿಸಿದ್ದು, ಒಂದು ತಿಂಗಳ ಕಾಲ ವಿಶ್ರಾಂತಿ ಪಡೆಯಲಿದ್ದಾರೆ. ಬೆಂಗಳೂರಿನಿಂದ ವಿಶೇಷ ಹೆಲಿಕಾಪ್ಟರ್ ಮೂಲಕ ದಲೈಲಾಮಾ ಅವರು ಬೈಲಕುಪ್ಪೆಯ ಟಿಡಿಎಲ್ ಶಾಲಾ ಮೈದಾನಕ್ಕೆ ಆಗಮಿಸಿದರು. ಈ ವೇಳೆ ದಲೈ ಲಾಮಾ ಅವರನ್ನು ಮೈಸೂರು ಜಿಲ್ಲಾಡಳಿತ ಮತ್ತು ಶಿಬಿರದ ಪ್ರತಿನಿಧಿಗಳು ಸಾಂಪ್ರದಾಯಿಕ ರೀತಿಯಲ್ಲಿ ಸ್ವಾಗತ ಕೋರಿದರು. ದಲೈಲಾಮಾ ಅವರು ಶಿಬಿರದಲ್ಲಿರುವ ತಶಿಲೊಂಪೊ ಬೌದ್ಧ ದೇವಾಲಯದಲ್ಲಿ ವಿಶ್ರಾಂತಿ ಪಡೆಯಲಿದ್ದಾರೆ ಎಂದು ತಿಳಿದು ಬಂದಿದೆ. ಸಾವಿರಾರು ಟಿಬೆಟಿಯನ್ ಸನ್ಯಾಸಿಗಳು, ಶಾಲಾ ಮಕ್ಕಳು ಮತ್ತು ಬೈಲಕುಪ್ಪೆ ನಿವಾಸಿಗಳು ರಸ್ತೆಯ ಎರಡೂ ಬದಿಗಳಲ್ಲಿ ಸಾಲುಗಟ್ಟಿ ನಮನ ಸಲ್ಲಿಸಿದರು.
ಹಿಮಾಚಲ ಪ್ರದೇಶದ ಧರ್ಮಶಾಲಾ ಟಿಬೆಟಿಯನ್ ಕೇಂದ್ರದಲ್ಲಿ ತೀವ್ರ ಶೀತ ವಾತಾವರಣದ ಹಿನ್ನೆಲೆಯಲ್ಲಿ ವೈದ್ಯರ ಸಲಹೆಯ ಮೇರೆಗೆ ವಿಶ್ರಾಂತಿಗಾಗಿ ಬೈಲಕುಪ್ಪೆಗೆ ಆಗಮಿಸಿರುವುದಾಗಿ ಟಿಬೆಟಿಯನ್ ಶಿಬಿರದ ಪ್ರತಿನಿಧಿ ಜಿಗ್ಮೆ ಸುಲ್ತಾನಿಮ್ ಅವರು ಹೇಳಿದ್ದಾರೆ. ದಲೈ ಲಾಮಾ ಇತ್ತೀಚೆಗೆ ಅಮೆರಿಕದಲ್ಲಿ ಚಿಕಿತ್ಸೆ ಪಡೆದಿದ್ದು, ವೈದ್ಯರು ಸಂಪೂರ್ಣ ವಿಶ್ರಾಂತಿ ಪಡೆಯುವಂತೆ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಬೈಲಕುಪ್ಪೆಗೆ ಆಗಮಿಸಿದ್ದಾರೆ. ಕಳೆದ ಎಂಟು ವರ್ಷಗಳಲ್ಲಿ ದಲೈಲಾಮಾ ಅವರು ಬೈಲಕುಪ್ಪೆ ಶಿಬಿರಕ್ಕೆ 26ನೇ ಬಾರಿ ಭೇಟಿ ನೀಡಿದ್ದಾರೆ. ಈ ಬಾರಿಯ ಭೇಟಿಯಲ್ಲಿ ಯಾವುದೇ ಸಾರ್ವಜನಿಕ ಕಾರ್ಯಕ್ರಮಗಳು ಇರುವುದಿಲ್ಲ ಎಂದು ಮೂಲಗಳು ದೃಢಪಡಿಸಿವೆ. ಮೈಸೂರು ಜಿಲ್ಲಾ ಪೊಲೀಸ್ ಇಲಾಖೆ ಶಿಬಿರದಲ್ಲಿ ಭದ್ರತಾ ವ್ಯವಸ್ಥೆಗಳನ್ನು ಕಲ್ಪಿಸಿದೆ.