ಉಳ್ಳಾಲ: ದಕ್ಷಿಣ ಕನ್ನಡದ ಉಲ್ಲಾಳ ಸಮೀಪದ ಮಂಜನಾಡಿ ಗ್ರಾಮದ ಮೊಂಟೆಪದವು ಪಂಬದ ಹಿತ್ತಿಲು ಕೋಡಿ ಕೊಪ್ಪಲ ಎಂಬಲ್ಲಿ ಧಾರಕಾರ ಮಳೆಗೆ ಗುಡ್ಡವೊಂದು ಕುಸಿದು ಮನೆಯೊಂದು ಸಂಪೂರ್ಣ ಕುಸಿದು ಬಿದ್ದಿದೆ. ಪರಿಣಾಮ ಓರ್ವ ಮಹಿಳೆ ಮೃತಪಟ್ಟು , ಇಬ್ಬರು ಗಾಯಗೊಂಡಿದ್ದಾರೆ. ಒಬ್ಬ ಮಹಿಳೆ ಹಾಗೂ ಇಬ್ಬರು ಮಣ್ಣಿನಡಿಯಲ್ಲಿ ಸಿಕ್ಕಿಕೊಂಡಿದ್ದು, ರಕ್ಷಣಾ ಕಾರ್ಯ ಭರದಿಂದ ನಡೆಯುತ್ತಿದೆ.
ಮೃತಪಟ್ಟ ಮಹಿಳೆಯನ್ನು ಪ್ರೇಮ(58) ಎಂದು ಗುರುತಿಸಲಾಗಿದೆ. ಅವರ ಪತಿ ಕಾಂತಪ್ಪ ಅವರು ಗಂಭೀರ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾಂತಪ್ಪ ಪೂಜಾರಿ ಅವರ ಪುತ್ರ ಸೀತಾರಾಮ ಅವರು ಅಪಾಯದಿಂದ ಪಾರಾಗಿದ್ದಾರೆ.
ಗುಡ್ಡ ಕುಸಿದು ಮನೆಯ ಒಂದು ಭಾಗದಲ್ಲಿ ಮಲಗಿದ್ದ ಸೀತಾರಾಮ ಅವರ ಪತ್ನಿ ಅಶ್ವಿನಿ ಹಾಗೂ ಇಬ್ಬರು ಪುಟ್ಟ ಮಕ್ಕಳು ( 3 ಹಾಗೂ 2 ವರ್ಷದ ಮಕ್ಕಳು) ಕುಸಿದ ಮನೆಯೊಳಗೆ ಸಿಲುಕಿಕೊಂಡಿದ್ದಾರೆ. ಇಂದು ಮುಂಜಾನೆ ನಾಲ್ಕು ಗಂಟೆ ವೇಳೆಗೆ ಈ ದುರಂತ ಸಂಭವಿಸಿದ್ದು, ಸ್ಥಳೀಯರು ರಕ್ಷಣಾ ಕಾರ್ಯದಲ್ಲಿ ತೊಡಗಿದ್ದರು. ಆದರೆ ಮನೆಯು ಸಂಪೂರ್ಣ ಕುಸಿದ ಪರಿಣಾಮ ರಕ್ಷಣಾ ಕಾರ್ಯ ಕಷ್ಟವಾಗಿತ್ತು. ಬಳಿಕ ಸ್ಥಳಕ್ಕೆ ಎನ್ ಡಿ ಆರ್ ಎಫ್, ಎಸ್ ಡಿಆರ್ ಪಿ, ಅಗ್ನಿಶಾಮಕ ದಳದ ಸಿಬ್ಬಂದಿಗಳು, ಪೊಲೀಸರು ರಕ್ಷಣಾ ಕಾರ್ಯ ಮುಂದುವರಿಸಿದ್ದು ತಾಯಿ ಹಾಗೂ ಇಬ್ಬರು ಮಕ್ಕಳ ರಕ್ಷಣೆಗೆ ಶ್ರಮಿಸುತ್ತಿದ್ದಾರೆ.
ಮನೆಯೊಳಗೆ ಸಿಲುಕಿರುವ ಮಹಿಳೆಯು ಕೊಂಚ ಮಾತಾಡುತ್ತಿದ್ದು, ಒಂದು ಮಗು ಅಳುವ ಶಬ್ದ ಕೇಳಿ ಬರುತ್ತಿದೆ ಎಂದು ತಿಳಿದು ಬಂದಿದೆ. ಆದರೆ ವ್ಯಾಪಕ ಮಳೆಯು ರಕ್ಷಣಾ ಕಾರ್ಯಕ್ಕೆ ಅಡ್ಡಿಯಾಗಿದೆ. ಸ್ಥಳೀಯರು ಸಹಕಾರ ನೀಡುತ್ತಿದ್ದಾರೆ.
ಎಡಿಸಿ ಸಂತೋಷ್ ಕುಮಾರ್, ತಹಶಿಲ್ದಾರ್ ಪುಟ್ಟರಾಜು, ಡಿಸಿಪಿ ಸಿದ್ದಾರ್ಥ್ ಘೋಯಲ್, ಪ್ರಾಕೃತಿಕ ವಿಕೋಪದ ನಿರ್ವಹಣಾಧಿಕಾರಿ ವಿಜಯ್, ಕಾರ್ಯನಿರ್ವಹಣಾಧಿಕಾರಿ ಗುರುದತ್, ಮಂಜನಾಡಿ ಪಂಚಾಯತ್ ಅಧ್ಯಕ್ಷೆ ಸರೋಜಿನಿ, ನರಿಂಗಾನ ಪಂಚಾಯತ್ ಅಧ್ಯಕ್ಷ ನವಾಝ್ ನರಿಂಗಾನ, ಮುಖಂಡರಾದ ಐವನ್ ಡಿಸೋಜ, ಸತೀಶ್ ಕುಂಪಲ, ಸಂತೋಷ್ ಬೋಳಿಯಾರ್, ರಮೇಶ್ ಶೆಟ್ಟಿ ಬೋಳಿಯಾರ್ , ಎನ್ ಎಸ್ ಕರೀಂ ಮೊದಲಾದವರು ಸ್ಥಳದಲ್ಲಿದ್ದಾರೆ.
ರಾತ್ರಿ ಬಿದ್ದ ಮಳೆಯಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭೂ ಕುಸಿತ, ಗೋಡೆ ಕುಸಿತ ಆಗಿ ಸಾವು ಸಂಭವಿಸಿರುವ ಬಗ್ಗೆ ಮಾಹಿತಿ ಸಂಗ್ರಹಿಸಿದ ಮುಖ್ಯಮಂತ್ರಿಗಳು, ತಕ್ಷಣ ಸ್ಥಳಕ್ಕೆ ತೆರಳಿ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಂಡು ವರದಿ ಮಾಡುವಂತೆ ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್ ಮತ್ತು ದ.ಕ ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದಾರೆ.