ನವದೆಹಲಿ : ಕೆಪಿಸಿಸಿ ಅಧ್ಯಕ್ಷನಾಗಿ 6 ವರ್ಷ ಪೂರ್ಣಗೊಳ್ಳುತ್ತಿದ್ದು, ಈ ಹಿನ್ನೆಲೆಯಲ್ಲಿ ಎಲ್ಲಾ ಶಾಸಕರು, ವಿಧಾನ ಪರಿಷತ್ ಸದಸ್ಯರಿಗೆ ಭೋಜನಕೂಟ ಹಮ್ಮಿಕೊಂಡಿದ್ದೇನೆ ಎಂದು ಕೆಪಿಸಿಸಿ ಅಧ್ಯಕ್ಷ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.
ದೆಹಲಿಯ ಕರ್ನಾಟಕ ಭವನದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಅಧ್ಯಕ್ಷ ಜವಾಬ್ದಾರಿ ವಹಿಸಿಕೊಂಡು ಅರು ವರ್ಷ ಪೂರ್ಣಗೊಂಡಿದೆ ಎಂದು ಹೇಳಿದರು.
ನಮ್ಮ ಎಲ್ಲಾ ಶಾಸಕರು, ವಿಧಾನ ಪರಿಷತ್ ಸದಸ್ಯರಿಗೆ ಭೋಜನಕೂಟ ಹಮ್ಮಿಕೊಂಡಿದ್ದೇನೆ. ಮತ್ತೊಂದು ದಿನ ನಮ್ಮ ಪರಾಜಿತ ಅಭ್ಯರ್ಥಿಗಳು ಮತ್ತು ಜಿಲ್ಲಾ ಹಾಗೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಿಗೆ ಭೋಜನಕೂಟ ಹಮ್ಮಿಕೊಳ್ಳಲಾಗುವುದು. ಈಗ ಅಧಿವೇಶನ ನಡೆಯುತ್ತಿರುವ ಹಿನ್ನೆಲೆಯಲ್ಲಿ ಶಾಸಕರಿಗೆ ಭೋಜನಕೂಟ ಇಟ್ಟುಕೊಂಡಿದ್ದೇನೆ ಎಂದು ತಿಳಿಸಿದರು.
ದೆಹಲಿಯಲ್ಲಿ ನಾನು ಯಾರನ್ನು ಭೇಟಿ ಮಾಡುತ್ತೇನೆ ಎಂದು ಬಹಿರಂಗವಾಗಿ ಹೇಳಲು ಆಗುವುದಿಲ್ಲ. ನನ್ನ ದೆಹಲಿ ಭೇಟಿ ಬಗ್ಗೆ ಯಾವ ವಿಭಿನ್ನ ಚರ್ಚೆನೂ ಬೇಡ. ಮಂಗಳವಾರ ಭೋಜನಕೂಟವಿದೆ. ನಾಳೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಇದೆ ಎಂದು ಹೇಳಿದರು.
ಪುಣೆಯಲ್ಲಿರುವ ನನ್ನ ಸ್ನೇಹಿತರ ಮನೆ ಮದುವೆ ಕಾರ್ಯಕ್ರಮವಿತ್ತು. ಹೀಗಾಗಿ ನಿನ್ನೆ ದೆಹಲಿಗೆ ಬಂದಿದ್ದೆ. ಇಂದು ಅಸ್ಸಾಂ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರನ್ನು ಭೇಟಿ ಮಾಡಿದ್ದೇನೆ ಎಂದು ಹೇಳಿದರು.
ಅಸ್ಸಾಂ ಚುನಾವಣೆಗೆ 43 ಕಾಂಗ್ರೆಸ್ ಅಭ್ಯರ್ಥಿ ಪಟ್ಟಿ ಬಿಡುಗಡೆ ಬಗ್ಗೆ ಕೇಳಿದಾಗ, “43 ಅಭ್ಯರ್ಥಿಗಳ ಪಟ್ಟಿ ಈಗಾಗಲೇ ಬಿಡುಗಡೆಯಾಗಿದ್ದು, ಇಂದು ಮತ್ತೊಂದು ಸ್ಕ್ರೀನಿಂಗ್ ಸಮಿತಿ ಸಭೆ ಇದೆ. ಈ ಸಮಿತಿಯಲ್ಲಿ ನಾನು ಇಲ್ಲ” ಎಂದು ತಿಳಿಸಿದರು.

