ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರ- ಹಿಂದುತ್ವ ವರ್ಸಸ್‌ ಅಭಿವೃದ್ಧಿ

Most read

ಮಂಗಳೂರು: ಕರ್ನಾಟಕದ ಕರಾವಳಿ ಪ್ರದೇಶ ಹಿಂದುತ್ವದ ಪ್ರಯೋಗಶಾಲೆ. ಒಂದು ಕಾಲದಲ್ಲಿ ಕೋಮು ಸಾಮರಸ್ಯಕ್ಕೆ ಹೆಸರಾಗಿದ್ದ ಕರಾವಳಿ ಸದ್ಯ ಕೋಮುಸೂಕ್ಷ್ಮ ಪ್ರದೇಶವೆಂಬ ಹಣೆಪಟ್ಟಿಯನ್ನು ಹೊತ್ತುಕೊಂಡಿದೆ. 90ರ ದಶಕದ ಬಳಿಕವಂತೂ ಹಿಂದುತ್ವ ತನ್ನ ಪ್ರಾಬಲ್ಯವನ್ನು ಗಟ್ಟಿಗೊಳಿಸುತ್ತಾ ಬಂದಿದೆ. ಚುನಾವಣೆ ಸಂದರ್ಭದಲ್ಲಂತೂ ಹಿಂದುತ್ವದ ಆಧಾರದಲ್ಲಿಯೇ ಅಭ್ಯರ್ಥಿಗಳು ಗೆಲುವು ಸಾಧಿಸುತ್ತಲೇ ಬರುತ್ತಿದ್ದಾರೆ. ಇಲ್ಲಿ ಜಾತಿ ಲೆಕ್ಕಾಚಾರ, ಅಭಿವೃದ್ಧಿ, ಮೂಲಭೂತ ಸೌಕರ್ಯ, ಉದ್ಯೋಗ ಸೃಷ್ಟಿ ಯಾವುದೂ ವರ್ಕ್ ಔಟ್ ಆಗುವುದಿಲ್ಲ. ಆದರೆ ಈ ಬಾರಿ ಈ ಲೆಕ್ಕಾಚಾರ ಕೊಂಚ ತಲೆಕೆಳಗಾದಂತೆ ಕಂಡು ಬರುತ್ತಿದೆ. ಹಿಂದುತ್ವದ ಅಲೆ ಇದ್ದರೂ, ಜಾತಿ ಲೆಕ್ಕಾಚಾರ ಕೊಂಚ ಕೆಲಸ ಮಾಡುವಂತೆ ಭಾಸವಾಗುತ್ತಿದೆ.‌ ಜೊತೆಗೆ ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಹಾಗೂ ಕಾಂಗ್ರೆಸ್ ಎರಡೂ ಪಕ್ಷಗಳು ಹೊಸಮುಖ, ವಿದ್ಯಾವಂತರನ್ನು ಕಣಕ್ಕಿಳಿಸಿದೆ.

ಬ್ರಿಜೇಶ್‌ ಚೌಟ ಮತ್ತು ಪದ್ಮರಾಜ್‌ ಆರ್.

ಹೌದು.. ಈ ಬಾರಿ ದ‌.ಕ.ಜಿಲ್ಲೆಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳೆರಡೂ ಹೊಸಮುಖ ಹಾಗೂ ವಿದ್ಯಾವಂತರಿಗೆ ಮಣೆ ಹಾಕಿದೆ. ಈ ಮೂಲಕ ಜಿಲ್ಲೆಯಲ್ಲಿ ಬರೋಬ್ಬರಿ 47 ವರ್ಷಗಳ ಬಳಿಕ ಜಿಲ್ಲೆಯಲ್ಲಿ ಹೊಸ ಅಭ್ಯರ್ಥಿಗಳು ಲೋಕಸಭಾ ಚುನಾವಣೆ ಎದುರಿಸುತ್ತಿದ್ದಾರೆ. 1977ರಲ್ಲಿ ಕಾಂಗ್ರೆಸ್ ನಿಂದ ಜನಾರ್ದನ ಪೂಜಾರಿ ಹಾಗೂ ಜನತಾ ಪಕ್ಷದಿಂದ ಎ.ಕೆ.ಸುಬ್ಬಯ್ಯ ಅವರು ಹೊಸಬರು ಮತ್ತು ವಿದ್ಯಾವಂತ ಅಭ್ಯರ್ಥಿಗಳಾಗಿ ಚುನಾವಣೆ ಎದುರಿಸಿದ್ದರು. ಅಂತಹದ್ದೇ ಒಂದು ಚುನಾವಣೆ ಈ ಬಾರಿ ಸಾಕಾರ ಗೊಂಡಿದೆ. ಆ ಬಳಿಕ ನಾಲ್ಕು ದಶಕಗಳಲ್ಲೂ ಜಿಲ್ಲೆಯಲ್ಲಿ ಹಳೆಯ ಅಭ್ಯರ್ಥಿಗಳೇ ಸ್ಪರ್ಧೆ ಮಾಡಿದ್ದರು. . ಈ ಬಾರಿ ಕಾಂಗ್ರೆಸ್ ನಿಂದ ಕಾನೂನು ಪದವೀಧರ, ನ್ಯಾಯವಾದಿ ಪದ್ಮರಾಜ್ ಆರ್. ಹಾಗೂ ಬಿಜೆಪಿಯಿಂದ ಐಐಎಂನಲ್ಲಿ ಪದವಿ ಪಡೆದಿರುವ ಸೈನಿಕನಾಗಿ ಕಾರ್ಯ ನಿರ್ವಹಿಸಿರುವ ಕ್ಯಾ.ಬ್ರಿಜೇಶ್ ಚೌಟ ಸ್ಪರ್ಧಾ ಕಣದಲ್ಲಿದ್ದಾರೆ. ಇಬ್ಬರೂ ಯುವ ಅಭ್ಯರ್ಥಿಗಳು. ಯಾವ ಚುನಾವಣೆಯನ್ನೂ ಎದುರಿಸದ ಚೊಚ್ಚಲ ಅಭ್ಯರ್ಥಿಗಳು. ಇಬ್ಬರ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ. 

ಬಿಜೆಪಿ ಅಭ್ಯರ್ಥಿ ಕ್ಯಾ‌.ಬ್ರಿಜೇಶ್ ಚೌಟ ಅವರು ಎಂದಿನಂತೆ ಬಿಜೆಪಿಯ ವರಸೆಯಲ್ಲಿಯೇ ಮತಯಾಚನೆ ಮಾಡುತ್ತಿದ್ದಾರೆ. ಜಿಲ್ಲೆಯ ಅಭಿವೃದ್ಧಿ, ಉದ್ಯೋಗ ಸೃಷ್ಟಿ, ಹೊಸ ಯೋಜನೆಗಳನ್ನು ಜಿಲ್ಲೆಗೆ ತರುವ ನಿಟ್ಟಿನಲ್ಲಿ ಮಾತನಾಡುವ ಬದಲು ಮೋದಿ, ಹಿಂದುತ್ವದ ವಿಚಾರದಲ್ಲಿಯೇ ಗಿರಕಿ ಹೊಡೆಯುತ್ತಿದ್ದಾರೆ‌. ಆದರೆ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್ ಅವರು ಜಿಲ್ಲೆಯಲ್ಲಿ ಕೋಮು ಸಾಮರಸ್ಯವನ್ನು ಮರು ಸ್ಥಾಪಿಸುವ ಬಗ್ಗೆ, ಉದ್ಯೋಗ ಸೃಷ್ಟಿಸುವ ಬಗ್ಗೆ, ಅಭಿವೃದ್ಧಿ ಪರ ಕೆಲಸ ಮಾಡುವ ಬಗ್ಗೆ ಮಾತನಾಡುತ್ತಿದ್ದಾರೆ. ಪದ್ಮರಾಜ್ ಅವರು ಪಕ್ಷ ಕರೆದು ಟಿಕೆಟ್ ಕೊಡುವ ಮೊದಲೇ ಯಾರೇ ಸಂಕಷ್ಟ ಎಂದರೂ ಅಲ್ಲಿಗೆ ಧಾವಿಸುತ್ತಿದ್ದವರು. ʼಗುರು ಬೆಳದಿಂಗಳುʼ ಸಂಸ್ಥೆಯ ಮೂಲಕ ಬಡವರಿಗೆ ಸೂರು ಕಲ್ಪಿಸಿದವರು, ಅನೇಕ ಬಡ ಮಕ್ಕಳಿಗೆ ಶಿಕ್ಷಣಕ್ಕೆ ನೆರವಾದವರು, ಬಡ ಹೆಣ್ಣು ಮಕ್ಕಳ ಮದುವೆಗೆ ಸಹಾಯಹಸ್ತ ನೀಡಿದವರು. ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಕೋಶಾಧಿಕಾರಿಯಾಗಿ ದೇವಾಲಯದ ಔನ್ನತ್ಯಕ್ಕೆ ಸದಾ ಶ್ರಮಿಸುತ್ತಿರುವವರು.

ಆದ್ದರಿಂದ ಜಾತಿ ಮತ ನೋಡದೆ ಹಿಂದುತ್ವದ ಆಧಾರದ ಮೇಲೆ ಬಿಜೆಪಿಗೆ ಮತ ಹಾಕುತ್ತಿದ್ದ ಬಿಲ್ಲವರು ಈ ಬಾರಿ ಪದ್ಮರಾಜ್ ಬಗ್ಗೆ ಒಲವು ತೋರುತ್ತಿದ್ದಾರೆ. ಇದು ಬಿಜೆಪಿಯ ಹಿಂದುತ್ವದ ಅಜೆಂಡಾವನ್ನು ಸ್ವಲ್ಪ ತಲೆಕೆಳಗಾಗಿಸುವುದು ಖಂಡಿತಾ. ಜೊತೆಗೆ ಈ ಬಾರಿ ಎಸ್ ಡಿಪಿಐ ಜಿಲ್ಲೆಯಲ್ಲಿ ಸ್ಪರ್ಧೆ ಮಾಡದ್ದರಿಂದ ಇನ್ನಷ್ಟು ಮುಸ್ಲಿಂ ಓಟು ಕಾಂಗ್ರೆಸ್ ಪಾಲಾಗಲಿದೆ. ಪರಿಣಾಮ ಕ್ಯಾ‌.ಬ್ರಿಜೇಶ್ ಚೌಟ ಹಾಗೂ ಪದ್ಮರಾಜ್ ನಡುವೆ ನೇರ ಹಣಾಹಣಿ ನಡೆಯೋದಂತೂ ಪಕ್ಕಾ. ಕಳೆದ ಬಾರಿಯಂತೆ ಬಹುಮತದಲ್ಲಿ ಗೆಲುವು ಸಾಧಿಸುತ್ತೇವೆ ಎಂಬ ಬಿಜೆಪಿ ಕನಸು ನನಸಾಗೋದು ಕಷ್ಟ. ಒಂದು ವೇಳೆ ಪದ್ಮರಾಜ್ ಅವರು ಗೆಲುವು ಸಾಧಿಸದಿದ್ದರೂ ಫೈಟ್ ಕೊಡುವುದಂತೂ ಪಕ್ಕಾ ಎಂಬುದು ರಾಜಕೀಯ ವಿಶ್ಲೇಷಕರ ಅಭಿಪ್ರಾಯ. ಜೊತೆಗೆ ಜಿಲ್ಲೆಯಲ್ಲಿ ಬಹುಸಂಖ್ಯಾತರಾಗಿರುವ ಬಿಲ್ಲವರೆಲ್ಲರೂ ಕಾಂಗ್ರೆಸ್ ಕೈ ಹಿಡಿದಲ್ಲಿ ಪದ್ಮರಾಜ್ ಗೆಲುವು ಪಕ್ಕಾ ಎನ್ನುವ ಮಾತೂ ಇದೆ. ಆದರೆ ದ.ಕ.ಜಿಲ್ಲೆಯ ವಿಚಾರಕ್ಕೆ ಬಂದರೆ ಇಲ್ಲಿ ಚುನಾವಣೆಯಲ್ಲಿ ಜಾತಿ ಲೆಕ್ಕಾಚಾರ ಗಣನೆಗೆ ಬರುವುದಿಲ್ಲ ಎಂಬುದು ಈ ಹಿಂದಿನ ಚುನಾವಣೆಗಳಲ್ಲಿ ಕಂಡು ಬಂದಿದೆ.

ಜನಾರ್ದನ ಪೂಜಾರಿಯವರೊಂದಿಗೆ ಪದ್ಮರಾಜ್

ಅದೇನೇ ಇರಲಿ, ಈ ಬಾರಿ ದ.ಕ. ಜಿಲ್ಲೆಯಲ್ಲಿ ಹಿಂದುತ್ವ ಬಿಜೆಪಿಯ ಕೈ ಹಿಡಿಯಲಿದೆಯೇ ಎಂದು ಕೇಳಿದರೆ ಸ್ವಲ್ಪ ಕಷ್ಟವೇ ಎಂದು ಹೇಳಬಹುದು. ಯಾಕೆಂದರೆ ಪದ್ಮರಾಜ್ ಆರ್ ಅವರು ಬಿಲ್ಲವ ಸಮುದಾಯದಿಂದ ಬಂದವರು.‌ಅದಕ್ಕಿಂತಲೂ ಹೆಚ್ಚಾಗಿ ಅವರೊಬ್ಬ ಉತ್ತಮ ಸಂಘಟಕ. ಬಿಲ್ಲವ ಸಮುದಾಯದ ಯುವಕರ ದಂಡೇ ಅವರ ಬೆನ್ನ ಹಿಂದಿದೆ. ಅದರಲ್ಲೂ ವಿದ್ಯಾವಂತ ಯುವಕರ ತಂಡವನ್ನು ಕಟ್ಟಿಕೊಂಡು ಸಂಘಟನೆಯ ಕಾರ್ಯ ಮಾಡಿದವರು‌. ಈ ಮೂಲಕ ಸಾಕಷ್ಟು ಮಂದಿಯ ಕಷ್ಟಕ್ಕೆ ನೆರವಾದವರು‌. ಅದಕ್ಕಾಗಿ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಾದ್ಯಂತ ಓಡಾಡಿದವರು‌. ಚುನಾವಣೆಗೆ ಸ್ಪರ್ಧಿಸುವ ಸಣ್ಣ ಸುಳಿವೂ ಇಲ್ಲದೆ ಜನಸೇವೆಯಲ್ಲಿ ನಿರತರಾದವರು‌. 

ಗುಲಾಬಿ ಬಿಳಿಮಲೆ

ಮಂಗಳೂರು

ಇದನ್ನೂ ಓದಿ-ಮೋದಿ ಆಡಳಿತದ ಒಂದು ಮಹಾ ಮೋಸದ ಕತೆ

More articles

Latest article