ಹುಬ್ಬಳ್ಳಿ: ಸಿಲಿಂಡರ್ ಸ್ಫೋಟಗೊಂಡು ಗಾಯಗೊಂಡಿದ್ದ 9 ಮಂದಿ ಅಯ್ಯಪ್ಪಸ್ವಾಮಿ ಮಾಲಾಧಾರಿಗಳ ಪೈಕಿ ಇಬ್ಬರು ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾರೆ. ಉಣಕಲ್ ಹತ್ತಿರದ ಸಾಯಿ ನಗರದಲ್ಲಿ ಸೋಮವಾರ ಬೆಳಗಿನ ಜಾವ ಸಿಲಿಂಡರ್ ಸ್ಫೋಟಗೊಂಡು 9 ಮಂದಿ ಅಯ್ಯಪ್ಪಸ್ವಾಮಿ ಮಾಲಾಧಾರಿಗಳು ಗಾಯಗೊಂಡಿದ್ದರು. ಇವರೆಲ್ಲರಿಗೂ ಹುಬ್ಬಳ್ಳಿಯ ಕಿಮ್ಸ್ನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಇಬ್ಬರು ಮಾಲಾಧಾರಿಗಳು ಇಂದು ಮೃತಪಟ್ಟಿದ್ದಾರೆ.
ಮೃತರನ್ನು ನಿಜಲಿಂಗಪ್ಪ ಬೇಪುರಿ(58) ಮತ್ತು ಸಂಜಯ ಸವದತ್ತಿ (20) ಎಂದು ಗುರುತಿಸಲಾಗಿದೆ. ಇಂದು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿದ್ದ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್, ಮೃತರ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಮೃಥರ ಕುಟುಂಬದ ಕಣ್ಣೀರಿಗೆ ಸಚಿವ ಸಂತೋಷ್ ಲಾಡ್ ಮೃತ ಕುಟುಂಬಗಳಿಗೆ ತಲಾ 5 ಲಕ್ಷ ರೂ. ಪರಿಹಾರ ಘೋಷಿಸಿದರು.
ನಂತರ ಮಾತನಾಡಿದ ಸಚಿವ ಸಂತೋಷ್ ಲಾಡ್, ವಿಶೇಷ ಪ್ರಕರಣ ಎಂದು ಪರಿಗಣಿಸಿ ಸಿಎಂ ಪರಿಹಾರ ನಿಧಿಯಿಂದ 5 ಲಕ್ಷ ಪರಿಹಾರ ನೀಡುತ್ತೇವೆ. ಅವರನ್ನು ಬದುಕಿಸಿಕೊಳ್ಳುವ ಎಲ್ಲಾ ಪ್ರಯತ್ನ ಮಾಡಿದರೂ ಸಾಧ್ಯವಾಗಲಿಲ್ಲ. ಉಳಿದ ಗಾಯಾಳುಗಳಿಗೆ ಚಿಕಿತ್ಸೆ ಮುಂದುವರಿಸಲಾಗಿದೆ. ಒಬ್ಬರನ್ನು ಹೊರತುಪಡಿಸಿ ಉಳಿದವರ ಸ್ಥಿತಿ ಗಂಭೀರವಾಗಿದೆ. ಅವರಿಗೆ ತಜ್ಞ ವೈದ್ಯರ ಮೂಲಕವೂ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ಹೇಳಿದರು.
ಈ ಮಧ್ಯೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯ ಶವಾಗಾರದ ಬಳಿ ಹೈಡ್ರಾಮಾ ನಡೆಯಿತು. ಮೃತ ನಿಜಲಿಂಗಪ್ಪನ ಶವಕ್ಕಾಗಿ ಇಬ್ಬರ ಪತ್ನಿಯರ ಮಧ್ಯೆ ಜಗಳ ನಡೆದಿದೆ. ಮೊದಲ ಮತ್ತು ಎರಡನೇ ಹೆಂಡತಿಯ ಮಧ್ಯೆ ಶವ ಮತ್ತು ಪಪರಿಹಾರದ ಹಣಕ್ಕಾಗಿ ಜಗಳ ನಡೆದಿದೆ.