ಸೈಬರ್‌ ವಂಚನೆ; ಷೇರು ಮಾರುಕಟ್ಟೆ ಹೂಡಿಕೆ ನೆಪದಲ್ಲಿ ರೂ. 5.67 ಕೋಟಿ ರೂ. ಕಳೆದುಕೊಂಡ ನಿವೃತ್ತ ಮಹಿಳಾಅಧಿಕಾರಿ

Most read

ಬೆಂಗಳೂರು: ಪೇಸ್‌ ಬುಕ್‌ ನಲ್ಲಿ ಪ್ರಕಟವಾಗಿದ್ದ ಜಾಹೀರಾತು ನಂಬಿ ಖಾಸಗಿ ಕಂಪನಿಯ ನಿವೃತ್ತ ಅಧಿಕಾರಿಯೊಬ್ಬರು ರೂ. 5.67 ಕೋಟಿ ರೂ. ಹೂಡಿಕೆ ಮಾಡಿ ಸೈಬರ್‌ ವಂಚನೆಗೆ ಬಲಿಯಾಗಿದ್ದಾರೆ.

 ಖಾಸಗಿ ಕಂಪನಿಯೊಂದರ ಮಾನವ ಸಂಪನ್ಮೂಲ ಅಧಿಕಾರಿ ಹುದ್ದೆಯಿಂದ ಸ್ವಯಂ ನಿವೃತ್ತಿ ಪಡೆದಿದ್ದ ಸಂತ್ರಸ್ತೆಯು ಆರೋಪಿಗಳಾದ ವೀರೇಶ್ ಗುಪ್ತಾ, ಆಯಾನ್ ಜೋಸೆಫ್ ವಿರುದ್ಧ ಬೆಂಗಳೂರಿನ ಸೆನ್ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.

ವಿದ್ಯಾಗಿರಿ ಲೇಔಟ್ ನಿವಾಸಿಯಾಗಿರುವ ಸಂತ್ರಸ್ತ ಮಹಿಳೆ, ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡುವ ಉದ್ದೇಶದಿಂದ ಡಿ ಮ್ಯಾಟ್ ಖಾತೆ ಆರಂಭಿಸಿದ್ದರು. ಫೇಸ್‌ಬುಕ್‌ನಲ್ಲಿ ಪ್ರಕಟವಾದ ಷೇರು ಮಾರುಕಟ್ಟೆ ಕುರಿತ ಲಿಂಕ್ ವೊಂದನ್ನು ಕ್ಲಿಕ್ ಮಾಡಿದಾಗ, ವಿರೇಶ್ ಗುಪ್ತಾ ಎಂಬಾತನ ಮೊಬೈಲ್ ನಂಬರ್ ಕಾಣಿಸಿಕೊಂಡಿತ್ತು. ಸ್ವಲ್ಪ ಸಮಯದ ನಂತರ ವಿರೇಶ್ ಎರಡು ಪ್ರತ್ಯೇಕ ನಂಬರ್‌ಗಳಿಂದ ಸಂದೇಶ ಕಳುಹಿಸಿ, ಆದಿತ್ಯಾ ಬಿರ್ಲಾ ಮತ್ತು ಸ್ಟಾಕ್ ಫೆನ್ಸಿ ಎಂಬ ಕಂಪನಿಗಳಲ್ಲಿ ಹೂಡಿಕೆ ಮಾಡುವಂತೆ ಸಲಹೆ ನೀಡಿದ್ದರು ಎಂದು ಸಂತ್ರಸ್ತೆಯು ತಿಳಿಸಿದ್ದಾರೆ. ನಂತರ ವಿರೇಶ್‌ ಗುಪ್ತಾ ಇವರನ್ನು ಈ ಸಂಬಂಧ 1812 ಆದಿತ್ಯಾ ಬಿರ್ಲಾ, ಸ್ಟಾಕ್ ಫ್ರೆನ್ಸಿ ಎಂಬ 35 ಸದಸ್ಯರಿದ್ದ ವಾಟ್ಸ್ ಆ್ಯಪ್ ಗುಂಪಿಗ ಸೇರ್ಪಡೆ ಮಾಡಿದ್ದಾನೆ.  ಮತ್ತೊಂದು ಗುಂಪಿನಲ್ಲಿ ಆಯಾನ್ ಜೋಸೆಫ್ ಹಾಗೂ ಇತರರು, ತಾವು ಹೇಳುವ  ಕಂಪನಿಯ ಷೇರಿನಲ್ಲಿ ಹೂಡಿಕೆ ಮಾಡುವಂತೆ ಸಲಹೆ ನೀಡಿದ್ದಾರೆ. ಅದರಂತೆ 2024ರ ಡಿಸೆಂಬರ್ 10 ರಿಂದ ಜನವರಿಗೆ 31ರವರೆಗೂ ವಿವಿಧ ಬ್ಯಾಂಕ್‌ಗಳ ಖಾತೆಗಳಿಂದ ರೂ. 2.37 ಕೋಟಿ ಸೇರಿದಂತೆ ಹಂತಹಂತವಾಗಿ ರೂ.5.67 ಕೋಟಿ ರೂ. ಹೂಡಿಕೆ ಮಾಡಿದ್ದಾರೆ. ತಮ್ಮ ಖಾತೆಯಲ್ಲಿದ್ದ ಹಣ ಖಾಲಿಯಾದ ನಂತರ ಪತಿ ಹಾಗೂ ಮಗನ ಖಾತೆಯಲ್ಲಿದ್ದ ಹಣವನ್ನೂ ಷೇರು ಖರೀದಿಗೆ ವರ್ಗಾವಣೆ ಮಾಡಿದ್ದಾರೆ.

ಕೆಲವು ದಿನಗಳ ನಂತರ ಹೂಡಿಕೆ ಮಾಡಿದ್ದ ಹಣವನ್ನು ಹಿಂಪಡೆಯಲು ನಡೆಸಿದ ಪ್ರಯತ್ನ ವಿಫಲವಾಗಿದೆ. ವಂಚಕ ಆರೋಪಿಗಳು ಹೂಡಿಕೆ ಹೆಸರಿನಲ್ಲಿ ವಂಚನೆ ಎಸಗಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ವಿರೇಶ್‌ ಗುಪ್ತಾ ಹಾಗೂ ಆಯಾನ್‌ ಜೋಸೆಫ್‌ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

More articles

Latest article