7ರಿಂದ 10ನೇ ತರಗತಿಯ ಮಕ್ಕಳಿಗೆ ಶಾಲೆಗಳಲ್ಲಿ ಸೈಬರ್ ಜಾಗೃತಿ ಮೂಡಿಸಬೇಕು: ನಟ ಅಕ್ಷಯ್‌ ಕುಮಾರ್‌ ಮನವಿ

Most read

ಮುಂಬೈ: 7ರಿಂದ 10ನೇ ತರಗತಿಯ ವಿದ್ಯಾರ್ಥಿಗಳಿಗೆ ಅವರ ಶಾಲೆಗಳಲ್ಲಿ ಸೈಬರ್ ಜಾಗೃತಿಯನ್ನು ಮೂಡಿಸಬೇಕು ಎಂದು ಖ್ಯಾತ ಬಾಲಿವುಡ್‌ ನಟ ಅಕ್ಷಯ್‌ ಕುಮಾರ್‌ ಅಭಿಪ್ರಾಯಪಟ್ಟಿದ್ದಾರೆ. ದಕ್ಷಿಣ ಮುಂಬೈನಲ್ಲಿರುವ ರಾಜ್ಯ ಪೊಲೀಸ್ ಪ್ರಧಾನ ಕಚೇರಿಯಲ್ಲಿ ಸೈಬರ್ ಜಾಗೃತಿ ಮಾಸದ ಉದ್ಘಾಟನೆಯ ನಂತರ ಅವರು ಮಾತನಾಡಿದರು.

ಏಕೆ ಸೈಬರ್‌ ಶಿಕ್ಷಣ ಬೇಕು ಎಂದು ಅವರು ತಮ್ಮ ಪುತ್ರಿಯ ಉದಾಹರಣೆ ನೀಡಿದರು.

ಕೆಲವು ತಿಂಗಳ ಹಿಂದೆ ನನ್ನ ಮಗಳು ಅನ್‌ಲೈನ್ ವಿಡಿಯೊ ಗೇಮ್ ಆಡುತ್ತಿದ್ದಾಗ ಅಪರಿಚಿತ ವ್ಯಕ್ತಿಯೊಬ್ಬ ತುಂಬಾ ಸ್ನೇಹಮಯ  ಮತ್ತು ಪ್ರೋತ್ಸಾಹದಾಯಕ ಸಂದೇಶಗಳನ್ನು ಕಳುಹಿಸುತ್ತಿದ್ದ. ನಂತರ ಆತ ನಗ್ನ ಚಿತ್ರಗಳನ್ನು ಕಳುಹಿಸುವಂತೆ ನನ್ನ ಪುತ್ರಿಗೆ ಒತ್ತಾಯಿಸಿದ್ದ. ಕೂಡಲೇ ನನ್ನ ಮಗಳು ಮೊಬೈಲ್ ಸ್ವಿಚ್ ಆಫ್ ಮಾಡಿ ತಾಯಿಗೆ ಈ ಘಟನೆ ಕುರಿತು ವಿವರಿಸಿದ್ದಳು ಎಂದು ಅಕ್ಷಯ್ ಕುಮಾರ್ ಹೇಳಿದರು. ಜಾಗರೂಕತೆಯಿಂದ ಇದ್ದ ಕಾರಣ ನನ್ನ ಮಗಳು ಸೈಬರ್ ಅಪರಾಧಿಗಳಿಂದ ಬಚಾವ್‌ ಆದಳು ಎಂದು ಅಕ್ಷಯ್‌ ವಿವರಿಸಿದ್ದಾರೆ.

ಆನ್‌ಲೈನ್ ಗೇಮ್ ಆಡುವಾಗ ಆಡುವವರು ಹೆಣ್ಣೋ ಗಂಡೋ ಎಂದು ತಿಳಿದುಕೊಳ್ಳುತ್ತಾರೆ. ಇದೂ ಸಹ ಸೈಬ‌ರ್ ಅಪರಾಧದ ಒಂದು ಭಾಗ. ಅನೇಕ ಪ್ರಕರಣಗಳಲ್ಲಿ ಹಣವನ್ನೂ ಸುಲಿಗೆ ಮಾಡಿದ್ದಾರೆ. ಕೆಲವು ಪ್ರಕರಣಗಳಲ್ಲಿ ಸಂತ್ರಸ್ತರು ಆತ್ಮಹತ್ಯೆಗೂ ಶರಣಾಗಿದ್ದಾರೆ ಎಂದರು.

ಆದ್ದರಿಂದ ರಾಜ್ಯದ 7ರಿಂದ 10ನೇ ತರಗತಿಯ ವಿದ್ಯಾರ್ಥಿಗಳಿಗೆ ಅವರ ಶಾಲೆಗಳಲ್ಲಿ ಸೈಬರ್ ಜಾಗೃತಿಯನ್ನು ಮೂಡಿಸಬೇಕು ಎಂದು ಅವರು ಸಮಾರಂಭದಲ್ಲಿದ್ದ ಮುಖ್ಯಮಂತ್ರಿ ಫಡಣವೀಸ್ ಅವರಿಗೆ ಮನವಿ ಮಾಡಿಕೊಂಡರು.

More articles

Latest article