Wednesday, December 10, 2025

ಸೈಬರ್‌ ಅಪರಾಧಗಳ ಇಳಿಮುಖ; ಹಣದ ಮೊತ್ತ ಮಾತ್ರ ಹೆಚ್ಚಳ: ಸಚಿವ ಪರಮೇಶ್ವರ್‌

Most read

ಬೆಳಗಾವಿ: ಕಳೆದ ಮೂರು ವರ್ಷಗಳಲ್ಲಿ ರಾಜ್ಯದಲ್ಲಿ 57,733 ಸೈಬರ್ ಅಪರಾಧಗಳು ವರದಿಯಾಗಿದ್ದು, ಸೈಬರ್‌ ವಂಚನೆಗೆ ಒಳಗಾದವರು ರೂ. 5,475 ಕೋಟಿ ಕಳೆದುಕೊಂಡಿದ್ದಾರೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ವಿಧಾನಸಭೆಗೆ ತಿಳಿಸಿದ್ದಾರೆ.

ಶಾಸಕ ಸಿಮೆಂಟ್ ಮಂಜು ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, 10,717 ಪ್ರಕರಣಗಳನ್ನು ಪತ್ತೆಹಚ್ಚಿ ರೂ. 627 ಕೋಟಿ ವಸೂಲಿ ಮಾಡುವಲ್ಲಿ ಯಶಸ್ವಿಯಾಗಲಾಗಿದೆ.  ಆದರೆ ಈ ವರ್ಷ ಸರ್ಕಾರ ತೆಗೆದುಕೊಂಡ ಕಠಿಣ ಕ್ರಮಗಳಿಂದಾಗಿ ಸೈಬರ್ ಅಪರಾಧ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿದೆ ಎಂದರು.

ಸೈಬರ್ ಅಪರಾಧಗಳನ್ನು ನಿಗ್ರಹಿಸಲು ಮತ್ತು ಪತ್ತೆಹಚ್ಚಲು ಪೊಲೀಸರಿಗೆ ಅಧಿಕಾರ ನೀಡಲು ಪೊಲೀಸ್ ಕಾಯ್ದೆಯಲ್ಲಿ ಬದಲಾವಣೆಗಳನ್ನು ತರಲಾಗಿದೆ. ಈ ಕ್ರಮಗಳ ಹೊರತಾಗಿಯೂ, ಅಪರಾಧಗಳಲ್ಲಿ ಭಾಗಿಯಾಗಿರುವ ವ್ಯಕ್ತಿಗಳು ಸುಧಾರಿತ ತಂತ್ರಜ್ಞಾನವನ್ನು ಬಳಸಿಕೊಂಡು ಅಮಾಯಕ ಜನರನ್ನು ವಂಚಿಸುತ್ತಿದ್ದಾರೆ ಎಂದು ಅವರು ತಿಳಿಸಿದರು.

2023 ರಲ್ಲಿ 22,255 ಸೈಬರ್ ಅಪರಾಧಗಳು ದಾಖಲಾಗಿದ್ದು, 873.29 ಕೋಟಿ ರೂಪಾಯಿ ವಂಚನೆ ನಡೆದಿದೆ. ಪೊಲೀಸರು 6,159 ಪ್ರಕರಣಗಳನ್ನು ಪತ್ತೆಹಚ್ಚಿ 177 ಕೋಟಿ ರೂ. ವಸೂಲಿ ಮಾಡಿದ್ದಾರೆ. 2025 ರಲ್ಲಿ ಸೈಬರ್‌ ಪ್ರಕರಣಗಳ ಸಂಖ್ಯೆ ಇಲಿಮುಖವಾಗಿದ್ದರೂ, ಕಳೆದುಕೊಂಡ ಹಣದ ಮೊತ್ತ  2,039 ಕೋಟಿ ರೂಪಾಯಿಗೆ ಏರಿಕೆಯಾಗಿದೆ ಎಂದು ಸಚಿವರು ಕಳವಳ ವ್ಯಕ್ತಪಡಿಸಿದರು.

ರಾಜ್ಯಾದ್ಯಂತ 43 ಸೈಬರ್ ಅಪರಾಧ, ಆರ್ಥಿಕ ಅಪರಾಧಗಳು ಮತ್ತು ಮಾದಕ ದ್ರವ್ಯ (CEN) ಪೊಲೀಸ್ ಠಾಣೆಗಳನ್ನು ಸ್ಥಾಪಿಸಲಾಗಿದೆ.  ಗೃಹ ಇಲಾಖೆಯಲ್ಲಿ ಡಿಜಿಪಿ ದರ್ಜೆಯ ಅಧಿಕಾರಿಯನ್ನು ಮುಖ್ಯಸ್ಥರನ್ನಾಗಿ ಹೊಂದಿರುವ ಪ್ರತ್ಯೇಕ ಸಂಪರ್ಕ ಕೇಂದ್ರವನ್ನು ರಚಿಸಲಾಗಿದೆ. ಇದು ದೇಶದಲ್ಲೇ ಮೊದಲನೆಯದು. ಕೇಂದ್ರ ಸರ್ಕಾರ ಸ್ಥಾಪಿಸಿದ 1930 ಟೋಲ್-ಫ್ರೀ ಸಂಖ್ಯೆಯು ಭಾಷೆಗೆ ಸಂಬಂಧಿಸಿದಂತೆ ಹಲವು ಸಮಸ್ಯೆಗಳನ್ನು ಹೊಂದಿದೆ ಎಂದೂ ಪರಮೇಶ್ವರ ಹೇಳಿದರು.

More articles

Latest article